ಶಿಕ್ಷಣ-ಆರೋಗ್ಯ ಕ್ಷೇತ್ರಕ್ಕೆ ಲೋಂಬಾರ್ಡ್ ಸಂಸ್ಥೆಯ ಸೇವೆ ಶ್ಲಾಘನೀಯ: ಸೊರಕೆ
ಉಡುಪಿ ಫೆ.11(ಉಡುಪಿ ಟೈಮ್ಸ್ ವರದಿ): ಉಡುಪಿ ಮಿಶನ್ ಕಂಪೌಂಡ್ನ ಬಾಸೆಲ್ ಮಿಶನರಿಸ್ ಮೆಮೋರಿಯಲ್ ಆಡಿಟೋರಿಯಂ ಪಕ್ಕದಲ್ಲಿ ನವೀಕೃತಗೊಂಡಿರುವ ಲೊಂಬಾರ್ಡ್ ಮೆಮೋರಿಯಲ್ (ಮಿಶನ್ ಆಸ್ಪತ್ರೆ) ಹಾಸ್ಟಿಟಲ್ನ ಲೊಂಬಾರ್ಡ್ ಕಾಲೇಜ್ ಆಫ್ ಪ್ಯಾರಾಮೆಡಿಕಲ್ ಆ್ಯಂಡ್ ಅಲೈಡ್ ಹೆಲ್ತ್ ಸೈನ್ಸ್ಸ್ನ ನೂತನ ಕ್ಯಾಂಪಸ್ ಶನಿವಾರ ಲೋಕಾರ್ಪಣೆಗೊಂಡಿತು.
ಈ ನೂತನ ಕ್ಯಾಂಪನ್ಯನ್ನು ಸಿಎಸ್ಐ, ಕೆಎಸ್ಡಿ ಬಿಷಪ್ ರೆ. ಹೇಮಚಂದ್ರ ಕುಮಾರ್ ಉದ್ಘಾಟಿಸಿದರು. ಬಳಿಕ ಆಶೀರ್ವಚನ ನೀಡಿದ ಅವರು, ಮಕ್ಕಳ ಭವಿಷ್ಯವನ್ನು ರೂಪಿಸುವ ನಿಟ್ಟಿನಲ್ಲಿ 1855 ರ ಹಳೆ ಕ್ಯಾಂಪಸ್ಗೆ ಆಧುನಿಕ ಸ್ಪರ್ಶ ಕೊಟ್ಟು ಲೊಂಬಾರ್ಡ್ ಕಾಲೇಜ್ ಆಫ್ ಪ್ಯಾರಾಮೆಡಿಕಲ್ ಆ್ಯಂಡ್ ಅಲೈಡ್ ಹೆಲ್ತ್ ಸೈನ್ಸ್ಸ್ ಕ್ಯಾಂಪಸ್ಯನ್ನು ಲೋಕಾರ್ಪಣೆ ಮಾಡಿದ್ದೇವೆ. ಮಿಶನರಿಸ್ನ ಉದ್ದೇಶಿತ ಮುಂದುವರಿದ ಭಾಗವಾಗಿ ಈ ಕಟ್ಟಡ ನಿರ್ಮಾಣಗೊಂಡಿದೆ. ಇಲ್ಲಿ ತರಗತಿ ಕೊಠಡಿ, ಗ್ರಂಥಾಲಯ ಸಹಿತ ವಿದ್ಯಾರ್ಜನೆಗೆ ಬೇಕಾದ ಎಲ್ಲಾ ಸಲವತ್ತುಗಳನ್ನು ನೀಡಲಾಗಿದೆ ಎಂದರು.
ಈ ವೇಳೆ ಮಾಜಿ ಸಚಿವ ವಿನಯ ಕುಮಾರ್ ಸೊರಕೆ ಮಾತನಾಡಿ, ತ್ಯಾಗ, ಸೇವೆಗೆ ಲೋಂಬಾರ್ಡ್ ಮಿಶನ್ ಆಸ್ಪತ್ರೆ ಹೆಸರುವಾಸಿಯಾಗಿದ್ದು, ಇಲ್ಲಿ ವ್ಯಾಸಂಗ ಮಾಡಿರುವ ನರ್ಸಿಂಗ್ ವಿದ್ಯಾರ್ಥಿಗಳಿಗೆ ದೇಶ, ವಿದೇಶಗಳಲ್ಲಿ ಬೇಡಿಕೆ ಇದೆ. ಶಿಕ್ಷಣ ಮತ್ತು ಆರೋಗ್ಯ ಸಮಾಜಕ್ಕೆ ಅವಶ್ಯಕವಾಗಿದ್ದು, ಈ ಎರಡು ಕೆಲಸವನ್ನು ಲೋಂಬಾರ್ಡ್ ಸಂಸ್ಥೆ ಮಾಡುತ್ತಿರುವುದು ಶ್ಲಾಘನೀಯ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಆಸ್ಪತ್ರೆಯ ನಿರ್ದೇಶಕ ಡಾ. ಸುಶೀಲ್ ಜತ್ತನ್ನ ಮಾತನಾಡಿ, ಲೊಂಬಾರ್ಡ್ ಆಸ್ಪತ್ರೆಗೆ ಇದೊಂದು ಮೈಲಿಗಲ್ಲು. ದೇಶ, ವಿದೇಶಗಳಲ್ಲಿ ನರ್ಸಿಂಗ್, ಟೆಕ್ನಿಷಶನ್ಗಳಿಗೆ ಹೇರಳ ಉದ್ಯೋಗಾವಕಾಶಗಳಿದ್ದು, ನುರಿತ ವಿದ್ಯಾರ್ಥಿಗಳನ್ನು ಸಮಾಜಕ್ಕೆ ನೀಡುವ ಉದ್ದೇಶದಿಂದ ಪ್ಯಾರಾಮೆಡಿಕಲ್ ಕಾಲೇಜು ತೆರೆದಿದ್ದೇವೆ. ಒಳ್ಳೆಯ ಶಿಕ್ಷಣ, ತರಬೇತಿ ಕೊಡುತ್ತೇವೆ ಎಂದರು.
ನಗರಸಭಾ ಸದಸ್ಯೆ ಅಮೃತಾ ಕೃಷ್ಣಮೂರ್ತಿ, ಮುಖಂಡ ಪ್ರಶಾಂತ್ ಜತ್ತನ್ನ, ಧರ್ಮಗುರುಗಳಾದ ರೆ. ಐವನ್ ಡಿ. ಸೋನ್ಸ್ , ತಜ್ಞ ವೈದ್ಯರಾದ ಡಾ.ಬಿ.ಎನ್. ಪೆರಾಲಯ, ಪ್ರಮುಖರಾದ ಶಬಿಹ್ ಅಹ್ಮದ್ ಕಾಜಿ, ಸಂಸ್ಥೆಯ ಹಳೆ ವಿದ್ಯಾರ್ಥಿಗಳಾದ ಕುವೆಂಪು ವಿ.ವಿ.ಯ ವಿಶ್ರಾಂತ ಕುಲಪತಿ ಪ್ರೊ. ಬಿ.ಎಸ್. ಸೇರಿಗಾರ್, ಸ್ಟಾನ್ಲಿ ಕರ್ಕಡ, ಉಡುಪಿ ಶೋಕಾಮಾತ ಇಗರ್ಜಿಯ ಪ್ರಧಾನ ಧರ್ಮಗುರು ಫಾ. ಚಾಲ್ಸ್ ಮಿನೇಜಸ್, ಡಾ. ರೋಶನ್ ಪಾಯಸ್, ಲಿಯೋನಾ ಸ್ಟೆಲಿಟಾ, ಆನೆಟ್ ವೀಕ್ಷಿತಾ ಕರ್ಯಕ್ರಮ ನಿರೂಪಿಸಿದರು. ಅಕ್ಷತಾ ಪ್ರಭು ಉಪಸ್ಥಿತರಿದ್ದರು