ಪರಶುರಾಮ ಥೀಮ್ ಪಾರ್ಕ್ ತನಿಖೆ ಸಿಐಡಿಗೆ- ಲಕ್ಷ್ಮಿ ಹೆಬ್ಬಾಳ್ಕರ್ಗೆ ಧನ್ಯವಾದ ತಿಳಿಸಿದ ಶಾಸಕ ಸುನಿಲ್
ಕಾರ್ಕಳ, ಫೆ 08: ಪರಶುರಾಮ ಥೀಂ ಪಾರ್ಕ್ ವಿಚಾರದ ಬಗ್ಗೆ ಅನಗತ್ಯವಾಗಿ ಎಬ್ಬಿಸುತ್ತಿದ್ದ ಊಹಾಪೋಹ ಹಾಗೂ ಸುಳ್ಳು ಆರೋಪಗಳಿಗೆ ಒಂದು ಪೂರ್ಣ ವಿರಾಮ ಬೇಕಿತ್ತು. ಈ ಸುಳ್ಳು ಆರೋಪಗಳ ತನಿಖೆಗಾಗಿ ರಾಜ್ಯ ಸರ್ಕಾರ ಕೊನೆಗೂ ಸಿಐಡಿ ತನಿಖೆ ನಡೆಸಲು ಮುಂದಾಗಿರುವುದನ್ನು ನಾನು ಸ್ವಾಗತಿಸುತ್ತೇನೆ ಎಂದು ಶಾಸಕ ವಿ ಸುನಿಲ್ ಕುಮಾರ್ ತಿಳಿಸಿದ್ದಾರೆ.
ಫೇಸ್ ಬುಕ್ ಪೋಸ್ಟ್ ಮಾಡಿರುವ ಸುನಿಲ್ ಕುಮಾರ್, ”ಈ ಬಗ್ಗೆ ತನಿಖೆ ನಡೆಯಬೇಕೆಂದು ಆರು ತಿಂಗಳು ಹಿಂದೆಯೇ ನಾನು ಆಗ್ರಹಿಸಿದ್ದೆ.ಸರಕಾರ ಆದಷ್ಟು ಬೇಗ ತನಿಖೆ ಪೂರ್ಣಗೊಳಿಸುವ ಜತೆಗೆ ಥೀಂ ಪಾರ್ಕ್ ಅಭಿವೃದ್ಧಿಗೆ ಹಿಂದಿನ ಸರ್ಕಾರದ ಅವಧಿಯಲ್ಲಿ ತಾತ್ವಿಕ ಒಪ್ಪಿಗೆ ನೀಡಿದ ಬಾಕಿ ಹಣವನ್ನೂ ಬಿಡುಗಡೆ ಮಾಡಿ ಕಾಮಗಾರಿ ಪೂರ್ಣಗೊಳಿಸ ಬೇಕು. ಆದಷ್ಟು ಬೇಗ ಥೀಂ ಪಾರ್ಕ್ ಪ್ರವಾಸಿಗಳ ವೀಕ್ಷಣೆಗೆ ಮುಕ್ತಗೊಳ್ಳುವಂತಾಗಬೇಕೆಂದು ಒತ್ತಾಯಿಸುತ್ತೇನೆ” ಎಂದು ಬರೆದಿದ್ದಾರೆ.ಇನ್ನು ಸಿಐಡಿ ತನಿಖೆಗೆ ಒತ್ತಾಯ ಹಾಗೂ ಮುತುವರ್ಜಿ ತೋರಿದ ಜಿಲ್ಲಾ ಉಸ್ತುವಾರಿ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಅವರಿಗೆ ವಿಶೇಷ ಧನ್ಯವಾದಗಳು ಎಂದು ತಿಳಿಸಿದ್ದಾರೆ.