ತಿಂಗಳೆ ಪ್ರತಿಷ್ಠಾನ: ಮಾ.6-8 ಧರ್ಮ ದೈವಗಳ ನೇಮೋತ್ಸವ- 63ನೇ ಸಾಹಿತ್ಯೋತ್ಸವ
ಉಡುಪಿ: ತಿಂಗಳೆಯಲ್ಲಿ ಮಾ.6,7,8 ಧರ್ಮ ದೈವಗಳ ನೇಮೋತ್ಸವ, ತಿಂಗಳೆ ಪ್ರತಿಷ್ಠಾನ ವತಿಯಿಂದ 63 ನೇ ಸಾಹಿತ್ಯೋತ್ಸವ ಹಾಗು ನಾಡ್ಪಾಲು ಗ್ರಾಮೋತ್ಸವ ನಡೆಯಲಿದೆ ಎಂದು ತಿಂಗಳೆ ಪ್ರತಿಷ್ಠಾನದ ಅಧ್ಯಕ್ಷ ತಿಂಗಳೆ ವಿಕ್ರಮಾರ್ಜುನ ಹೆಗ್ಗಡೆ ತಿಳಿಸಿದ್ದಾರೆ.
ಅವರು ಗುರುವಾರ, ನಗರದ ಪತ್ರಿಕಾಭವನದಲ್ಲಿ ಪತ್ರಿಕಾಗೋಷ್ಠಿ ನಡೆಸಿ ಮಾಹಿತಿಯನ್ನು ವಿವರಿಸಿದರು. 63 ನೇ ಸಾಹಿತ್ಯೋತ್ಸವ ಮಾ.8 ರಂದು ಸಂಜೆ ನಡೆಯುವ ಸಾಹಿತ್ಯೋತ್ಸವದ ಅಧ್ಯಕ್ಷತೆಯನ್ನು ಆಳ್ವಾಸ್ ಶಿಕ್ಷಣ ಸಂಸ್ಥೆಯ ಡಾ| ಮೋಹನ್ ಆಳ್ವಾ ವಹಿಸಲಿದ್ದಾರೆ. ಚಿಕ್ಕಮಗಳೂರಿನ ಕೆ.ಎಸ್.ನಿತ್ಯಾನಂದ ಉಪಸ್ಥಿತರಿದ್ದಾರೆ. ಈ ಬಾರಿಯ ತಿಂಗಳೆ ಪ್ರಶಸ್ತಿಯನ್ನು ಬಾಂಡ್ಯ ಎಜುಕೇಶನ್ ಟ್ರಸ್ಟ್ ನ ಸ್ಥಾಪಕ, ಮಾಜಿ ಶಾಸಕ ಅಪ್ಪಣ್ಣ ಹೆಗ್ಡೆಯವರಿಗೆ ನೀಡಿ ಗೌರವಿಸಲಾಗುವುದು. ಸೇವಾ ಭೂಷಣ ಪ್ರಶಸ್ತಿಯನ್ನು ಮಂಜುನಾಥ್ ಅಡಿಗ, ಉಪ್ಪಳ-ಮುದ್ರಾಡಿಯವರಿಗೆ ನೀಡಲಾಗುವುದು.
ಈ ಬಾರಿ ಶಿವಪಾರಮ್ಯ ಎಂಬ ಉಪನ್ಯಾಸ ಕಾರ್ಯಕ್ರಮ ನಡೆಯಲಿದ್ದು, ಡಾ. ವೀಣಾ ಬನ್ನಂಜೆ ಚೆನ್ನ ಮಲ್ಲಿಕಾರ್ಜುನ, ಎನ್.ಆರ್.ದಾಮೋದರ್ ಶರ್ಮಾ ಶಿವೋಪಾಸನೆ ಬಗ್ಗೆ ಮಾತನಾಡಲಿದ್ದಾರೆ. ಕವಿ ಸಮಯ ಎಂಬ ಘೋಷ್ಟಿಯಲ್ಲಿ ಜಿಲ್ಲೆಯ ಕವಯತ್ರಿಯರಾದ ಜ್ಯೋತಿ ಮಹಾದೇವ್, ಅಮೃತ ಕಡಿಯಾಳಿ, ಪ್ರಜ್ಞಾ ಮಾರ್ಪಳ್ಳಿ, ರೇವತಿ ನಾಡಿಗೇರ್, ರಮ್ಯ ಸೀತಾನದಿ ಅಭಿಪ್ರಾಯ ಮಂಡಿಸಲಿದ್ದಾರೆ. ಅಮಿತಾಂಜಲಿ ಕಿರಣ್ ನಿರೂಪಿಸಲಿದ್ದಾರೆ. ಅಂದು ಸಂಜೆ 6 ಗಂಟೆಯಿಂದ ಆಳ್ವಾಸ್ ನೃತ್ಯ ವೈಭವ ಕಾರ್ಯಕ್ರಮ ನಡೆಯಲಿದೆ.
ಗ್ರಾಮೋತ್ಸವ
ಮಾ.6 ರಂದು ಬೆಳಗ್ಗೆ 9 ಗಂಟೆಗೆ ಗ್ರಾಮೋತ್ಸವ ಕಾರ್ಯಕ್ರಮವನ್ನು ವಾದಿರಾಜ್ ಶೆಟ್ಟಿ ಉದ್ಘಾಟಿಸಲಿದ್ದಾರೆ. ಗ್ರಾಮೀಣ ಭಾಗದ ಕ್ರೀಡೆಗಳು ಹಾಗು ಜನಪದ ನೃತ್ಯ ಮತ್ತು ಹಾಡುಗಳ ಕಾರ್ಯಕ್ರಮ ನಡೆಯಲಿದ್ದು, ಗ್ರಾಮದ ಜನರಿಗೆ ಮಾತ್ರ ಭಾಗವಹಿಸಲು ಅವಕಾಶ ಕಲ್ಪಿಸಲಾಗಿದೆ. ಬೆಳಗ್ಗೆ 9.30 ಕ್ಕೆ ಕ್ರೀಡೋತ್ಸವ ಆರಂಭವಾಗಲಿದೆ. ಸಂಜೆ 5 ರಿಂದ ಸಾಂಸ್ಕೃತಿಕ ಕಾರ್ಯಕ್ರಮ ಆರಂಭವಾಗಲಿದೆ.
ಪತ್ರಿಕಾಗೋಷ್ಠಿಯಲ್ಲಿ ಯಕ್ಷಗುರು ಬನ್ನಂಜೆ ಸಂಜೀವ ಸುವರ್ಣ, ತಿಂಗಳೆ ಪ್ರತಿಷ್ಠಾನದ ಪ್ರ.ಕಾರ್ಯದರ್ಶಿ ಕೆಳಚಾವಡಿ ಪ್ರಕಾಶ್ ಶೆಟ್ಟಿ, ನಿರ್ದೇಶಕರಾದ ಕಿರಣ್ ಕುಮಾರ್ ಬೈಲೂರು, ಸದಾನಂದ, ರಮೇಶ್ ಶೆಟ್ಟಿ ನಡ್ಪಾಲು ಗ್ರಾ.ಪಂ ಅಧ್ಯಕ್ಷ ನವೀನ್ ಕುಮಾರ್ ಉಪಸ್ಥಿತರಿದ್ದರು.