ಸಾಣೂರು ಕಾಲೇಜಿನ ಮೂಲಸೌಕರ್ಯಕ್ಕೆ ಧಕ್ಕೆ : ಗ್ರಾಮಸ್ಥರಿಂದ ಪ್ರತಿಭಟನೆಗೆ ಸಿದ್ಧತೆ
ಕಾರ್ಕಳ: ಸಾಣೂರು ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಕಳೆದೊಂದು ವರ್ಷದಿಂದ ರಾಷ್ಟ್ರೀಯ ಹೆದ್ದಾರಿ ಕಾಮಗಾರಿ ನಡೆಯುತ್ತಿದ್ದು, ಭೂಸ್ವಾಧೀನ ಗೊಂಡ ಸಾಣೂರು ಸರಕಾರಿ ಪ್ರೌಢಶಾಲೆ ಮತ್ತು ಪದವಿಪೂರ್ವ ಕಾಲೇಜಿನ ಸರ್ವೇ ನಂಬರ್ 357/2 ಜಾಗದ ಪರಿಹಾರದ ಮತ್ತ ಇನ್ನೂ ನಿಗದಿಪಡಿಸಿ ಕೊಟ್ಟಿರುವುದಿಲ್ಲ.
ಶಾಲಾ ಕಟ್ಟಡಗಳ ಪಕ್ಕದಲ್ಲಿಯೇ ಜಮೀನನ್ನು ಅಗೆದು, ರಸ್ತೆ ನಿರ್ಮಾಣ ಮಾಡಿರುವುದರಿಂದ ರಾಷ್ಟ್ರೀಯ ಹೆದ್ದಾರಿಯಿಂದ ವಿದ್ಯಾಸಂಸ್ಥೆಗೆ ಹೋಗುವ ಮಣ್ಣಿನ ಹಾದಿ ಸಂಪೂರ್ಣ ಹಾಳಾಗಿದ್ದು, ದಿನಂಪ್ರತಿ ನೂರಾರು ವಿದ್ಯಾರ್ಥಿಗಳು ಅಧ್ಯಾಪಕರು ಸಂಚರಿಸುವ ಮಾರ್ಗ ಅಪಾಯಕಾರಿಯಾಗಿ ಪರಿಣಮಿಸಿದೆ.
ದಾನಿಗಳಿಂದ ನಿರ್ಮಾಣಗೊಂಡ ಕಾಂಕ್ರೀಟ್ ಪ್ರವೇಶ ದ್ವಾರ, ಆವರಣ ಗೋಡೆ, ಗೇಟ್ ದ್ವಂಸವಾಗಿದ್ದು, ಪಕ್ಕದಲ್ಲಿಯೇ ಬ್ಯಾಂಕ್ ಆಫ್ ಬರೋಡದವರು ಕಟ್ಟಿಸಿ ಕೊಟ್ಟಿದ್ದ ಬಸ್ಸು ತಂಗುದಾಣವನ್ನು ಕೆಡವಿ ಹಾಕಲಾಗಿದೆ.
ಸರಕಾರಿ ವಿದ್ಯಾ ಸಂಸ್ಥೆಯ ಬಗ್ಗೆ ತೀರಾ ಅವಗಣನೆ :
ಗ್ರಾಮೀಣ ಭಾಗದಿಂದ ದಿನಂಪ್ರತಿ ನೂರಾರು ಸಂಖ್ಯೆಯಲ್ಲಿ ಬರುವ ವಿದ್ಯಾರ್ಥಿಗಳುಬಸ್ಸಿಗಾಗಿ ಬಹಳ ಹೊತ್ತು ರಸ್ತೆ ಬದಿಯಲ್ಲಿಯೇ ಬಿಸಿಲಿಗೆ ಕಾಯಬೇಕಾದ ಪರಿಸ್ಥಿತಿ ಇದ್ದು, ವೇಗವಾಗಿ ಕೆಲವೊಮ್ಮೆ ಹೆದ್ದಾರಿ ಕಾಮಗಾರಿಯ ಕಾರಣದಿಂದ ಅಸ್ತವ್ಯಸ್ತವಾಗಿರುವ ರಸ್ತೆಯಲ್ಲಿ ಅಡ್ಡಾದಿಡ್ಡಿಯಾಗಿ ಚಲಿಸುವ ವಾಹನಗಳಿಂದ ಅಪಾಯಕಾರಿ ಪರಿಸ್ಥಿತಿ ನಿರ್ಮಾಣವಾಗಿದೆ.
ಮನವಿಗೆ ಬೆಲೆಯೇ ಇಲ್ಲ!
ಸುಮಾರು 425 ವಿದ್ಯಾರ್ಥಿಗಳು ಮತ್ತು 35 ಅಧ್ಯಾಪಕ ವ್ರಂದವರನ್ನು ಹೊಂದಿರುವ ಸಾಣೂರು ಪದವಿ ಪೂರ್ವ ವಿದ್ಯಾಲಯಕ್ಕೆ ರಾಷ್ಟ್ರೀಯ ಹೆದ್ದಾರಿಯಿಂದ ವಿದ್ಯಾ ಸಂಸ್ಥೆಯನ್ನು ಸಂಪರ್ಕಿಸುವ ರಸ್ತೆಯನ್ನು ಸರಿಪಡಿಸದೆ, ಸೂಕ್ತವಾದ ಚರಂಡಿ ವ್ಯವಸ್ಥೆಯನ್ನು ಮಾಡದೇ ಇರುವುದರಿಂದ ಮಳೆ ಬಂದಾಗ ಮಳೆ ನೀರು ಮಣ್ಣಿನ ರಸ್ತೆಯಲ್ಲಿ ಹರಿದು, ರಸ್ತೆಯಲ್ಲಿಯೇ ಹೊಂಡ ಗುಂಡಿಗಳು ನಿರ್ಮಾಣವಾಗಿ ಅಪಾಯಕಾರಿಯಾಗಿ ದಿನಂಪ್ರತಿ ತೀರ ತೊಂದರೆಯನ್ನು ಅನುಭವಿಸುತ್ತಿದ್ದಾರೆ.
ಈ ಮೇಲಿನ ಎಲ್ಲಾ ವಿಚಾರಗಳ ಬಗ್ಗೆ ಸವಿವರವಾಗಿ ಪತ್ರವನ್ನು ಬರೆದು ಸಾಣೂರು ಪದವಿಪೂರ್ವ ವಿದ್ಯಾಲಯದ ಪ್ರಾಂಶುಪಾಲರು ಹಲವಾರು ಬಾರಿ ಸ್ವತಹ ಶಾಸಕರನ್ನು, ಜಿಲ್ಲಾಧಿಕಾರಿಯವರನ್ನು, ರಾಷ್ಟ್ರೀಯ ಹೆದ್ದಾರಿ ಅಧಿಕಾರಿಯವರನ್ನು ಹಾಗೂ ಗುತ್ತಿಗೆದಾರರನ್ನು ಸಂಪರ್ಕಿಸಿದರೂ ಯಾವುದೇ ಪ್ರಯೋಜನವಾಗಿಲ್ಲ.
ಕಿತ್ತು ಹಾಕಿರುವುದನ್ನು ಮರು ನಿರ್ಮಾಣ ಮಾಡಿ...
ಕೂಡಲೇ ವಿದ್ಯಾ ಸಂಸ್ಥೆಯನ್ನು ಸಂಪರ್ಕಿಸುವ ರಸ್ತೆಯ ಮರು ನಿರ್ಮಾಣ, ಪ್ರವೇಶ ದ್ವಾರ, ಗೇಟ್, ಆವರಣ ಗೋಡೆಯ ನಿರ್ಮಾಣ, ಹೊಸ ಬಸ್ ನಿಲ್ದಾಣ ಮತ್ತು ಭೂಸ್ವಾಧೀನಗೊಂಡ ಜಾಗದ ಪರಿಹಾರ ಮೊತ್ತವನ್ನು ಕೂಡಲೇ ಸಂಸ್ಥೆಗೆ ನೀಡಬೇಕೆಂದು ಶಾಲಾ ಅಭಿವೃದ್ಧಿ ಸಮಿತಿಯವರು ಒತ್ತಾಯಿಸಿರುತ್ತಾರೆ.
ನಿರಂತರ ಮನವಿ- ಒತ್ತಡಗಳ ಫಲ ಸ್ವರೂಪವಾಗಿ ವಿದ್ಯಾ ಸಂಸ್ಥೆಯ ಜರಿದ ಭಾಗಕ್ಕೆ ಸುಭದ್ರವಾದ ತಡೆಗೋಡೆ ಹಾಗೂ ಇತ್ತೀಚೆಗೆ ಆಟದ ಮೈದಾನದಲ್ಲಿ ಹೊಸದಾಗಿ ಬೋರ್ವೆಲ್ ಕೊರೆದಿದ್ದು ಅದರಲ್ಲಿ ಒಳ್ಳೆಯ ನೀರು ಸಿಕ್ಕಿರುವುದು ಮಾತ್ರ ಸಮಾಧಾನಕರ ಅಂಶ.
ಶಾಲಾ ಕಟ್ಟಡದ ಪಕ್ಕದಲ್ಲಿಯೇ ವಿದ್ಯಾರ್ಥಿಗಳು ದಿನಂಪ್ರತಿ ಸಂಚರಿಸುವುದರಿಂದ, ತಡೆಗೋಡೆಯ ಅಂಚಿಗೆ ಮೇಲ್ಭಾಗದಲ್ಲಿ ಕನಿಷ್ಠ 5 ಅಡಿ ಎತ್ತರದ ಸುಭದ್ರವಾದ ಕಬ್ಬಿಣದ ಗ್ರಿಲ್ ಅಳವಡಿಸುವುದರಿಂದ, ವಿದ್ಯಾರ್ಥಿಗಳ ಸುರಕ್ಷತೆಯನ್ನು ಕಾಯ್ದುಕೊಳ್ಳ ಬಹುದು.
ಶಾಲಾ ಕಟ್ಟಡದ ಹಿಂಭಾಗ ಗುಡ್ಡ ಕುಸಿತದ ಭೀತಿ :
ಹೆದ್ದಾರಿ ಕಾಮಗಾರಿಗೆಂದು ಕಾಲೇಜು ಕಟ್ಟಡದ ಹಿಂಭಾಗದ ಸುಮಾರು 500ಕ್ಕೂ ಹೆಚ್ಚು ಲೋಡು ಮಣ್ಣು ತೆಗೆದಿರುವುದರಿಂದ, ಇದೀಗ ಅರ್ಧ ಉಳಿದಿರುವ ಗುಡ್ಡದ ಮಣ್ಣು ಕಾಲೇಜು ಕಟ್ಟಡಕ್ಕೆ ಬಿದ್ದು ಕಾಲೇಜು ಕಟ್ಟಡ ಹಾನಿ ಆಗುವ ಅಪಾಯದ ಸಂಭವವಿದೆ.
ಹೆದ್ದಾರಿ ಗುತ್ತಿಗೆದಾರ ಕಂಪನಿ ದಿಲೀಪ್ ಬಿಲ್ಡ್ ಕಾನ್ ಅಧಿಕಾರಿಗಳಿಗೆ ಗುಡ್ಡದ ಸಂಪೂರ್ಣ ಮಣ್ಣನ್ನು ತೆಗೆಯಲು ಸೂಚಿಸಿದ್ದರೂ ಕೂಡ ಆ ಕಡೆ ಗಮನ ಹರಿಸದೆ ಬೇಜವಾಬ್ದಾರಿಯಿಂದ ವರ್ತಿಸುತ್ತಿದ್ದಾರೆ.
ತೀವ್ರ ಪ್ರತಿಭಟನೆಯ ಎಚ್ಚರಿಕೆ:
ಇದೀಗ ಶಾಲಾ ಅಭಿವೃದ್ಧಿ ಸಮಿತಿಯವರು ,ಹಳೆ ವಿದ್ಯಾರ್ಥಿಗಳು, ಶಾಲೆಯ ವಿದ್ಯಾರ್ಥಿಗಳು ಮತ್ತು ಹೆದ್ದಾರಿ ಹೋರಾಟ ಸಮಿತಿಯ ಪ್ರಮುಖರು ಸಂಸ್ಥೆಗಳ ಜೊತೆಗೂಡಿ ಪ್ರತಿಭಟನೆ ನಡೆಸುವ ಸಿದ್ಧತೆ ಮಾಡುತ್ತಿದ್ದಾರೆಂದು, ಕಾಲೇಜು ಅಭಿವೃದ್ಧಿ ಸಮಿತಿಯ ಉಪಾಧ್ಯಕ್ಷರಾದ ಅಶೋಕ್ ಶೆಟ್ಟಿ, ಹೆದ್ದಾರಿ ಹೋರಾಟ ಸಮಿತಿಯ ಪ್ರಮುಖರಾದ ಸಾಣೂರು ನರಸಿಂಹ ಕಾಮತ್ ರವರು ಎಚ್ಚರಿಸಿರುತ್ತಾರೆ.