ಗ್ಯಾರಂಟಿ ಯೋಜನೆ ವಿರೋಧಿಸುತ್ತಿದ್ದ ಬಿಜೆಪಿಯವರು ಮೋದಿ ಗ್ಯಾರಂಟಿ ಬಗ್ಗೆ ಪುಕ್ಕಟೆ ಪ್ರಚಾರ ಮಾಡುತ್ತಿದ್ದಾರೆ-ಕೆ.ಜೆ.ಜಾರ್ಜ್
ಉಡುಪಿ: ಕಾಂಗ್ರೆಸ್ ಗ್ಯಾರಂಟಿ ಯೋಜನೆಯನ್ನು ವಿರೋಧಿಸುತ್ತಿದ್ದ ಬಿಜೆಪಿಯವರು ಮೋದಿ ಗ್ಯಾರಂಟಿ ಬಗ್ಗೆ ಪ್ರಚಾರ ಮಾಡುತ್ತಿದ್ದಾರೆ. ಆದರೆ ಬಿಜೆಪಿಯವರದ್ದು ಕೇವಲ ಪ್ರಚಾರಕ್ಕಾಗಿ ಮಾಡಿರುವ ಗ್ಯಾರಂಟಿಯೇ ಹೊರತು ಅವರದ್ದು ನಿಜವಾದ ಯೋಜನೆಗಳಲ್ಲ ರಾಜ್ಯ ಇಂಧನ ಸಚಿವ ಕೆ.ಜೆ.ಜಾರ್ಜ್ ಆರೋಪಿಸಿದ್ದಾರೆ.
ಉಡುಪಿ ಜಿಲ್ಲಾ ಕಾಂಗ್ರೆಸ್ ಭವನಕ್ಕೆ ಇಂದು ಭೇಟಿ ನೀಡಿ ಅವರು ಕಾರ್ಯಕರ್ತರನ್ನುದ್ದೇಶಿಸಿ ಮಾತನಾಡುತಿದ್ದರು. ನಾವು ಹೇಳಿದಂತೆ ಎಲ್ಲ ಗ್ಯಾರಂಟಿ ಯೋಜನೆಗಳನ್ನು ಅನುಷ್ಠಾನಕ್ಕೆ ತಂದಿದ್ದೇವೆ. ರಾಜ್ಯದ 1.62 ಮನೆಗಳು ಗೃಹ ಜ್ಯೋತಿ ಯೋಜನೆಯನ್ನು ಪಡೆಯುತ್ತಿದೆ. ಕೇಂದ್ರದ ನೋಟು ನಿಷೇಧ, ಜಿಎಸ್ಟಿ ಹಾಗೂ ಕೊರೋನಾ ನೀತಿಗಳಿಂದ ಕಂಗೆಟ್ಟ ಜನರಿಗೆ ನಮ್ಮ ಗ್ಯಾರಂಟಿಗಳು ಆಶಾಕಿರಣವಾಗಿ ಮೂಡಿಬಂದಿವೆ ಎಂದರು.
ಈ ಬಾರಿ ಲೋಕಸಭಾ ಚುನಾವಣೆಯಲ್ಲಿ ಉಡುಪಿ -ಚಿಕ್ಕಮಗಳೂರು ಕ್ಷೇತ್ರದಲ್ಲಿ ಕಾಂಗ್ರೆಸ್ ಗೆಲುವು ಸಾಧಿಸುವುದು ಖಚಿತ. ಬಿಜೆಪಿಯವರು ಕಾಂಗ್ರೆಸ್ ವಿರುದ್ಧ ಏನೇ ಅಪಪ್ರಚಾರ ಮಾಡಿದರೂ ಕಾರ್ಯಕರ್ತರು ಧೈರ್ಯ ಕಳೆದು ಕೊಳ್ಳಬಾರದು. ಧೈರ್ಯದಿಂದ ಚುನಾವಣೆ ಎದುರಿಸಬೇಕು ಎಂದು ಅವರು ಕರೆ ನೀಡಿದರು.
ವಿಧಾನ ಪರಿಷತ್ ಸದಸ್ಯ ಮಂಜುನಾಥ್ ಭಂಡಾರಿ, ಮಾಜಿ ಸಚಿವ ವಿನಯ ಕುಮಾರ್ ಸೊರಕೆ, ಕಾಂಗ್ರೆಸ್ ಜಿಲ್ಲಾಧ್ಯಕ್ಷ ಅಶೋಕ್ ಕೊಡವೂರು, ಕಾರ್ಯಾಧ್ಯಕ್ಷ ಕಿಶನ್ ಹೆಗ್ಡೆ ಕೊಳ್ಕೆಬೈಲು, ಮಾಜಿ ಶಾಸಕ ಗೋಪಾಲ ಪೂಜಾರಿ, ಮುಖಂಡರಾದ ಎಂ.ಎ.ಗಫೂರ್, ಪ್ರಸಾದ್ ರಾಜ್ ಕಾಂಚನ್, ದಿನೇಶ್ ಹೆಗ್ಡೆ ಮೊಳಹಳ್ಳಿ, ಸರಳ ಕಾಂಚನ್, ವರೋನಿಕಾ ಕರ್ನೆಲಿಯೋ ಮೊದಲಾದವರು ಉಪಸ್ಥಿತರಿದ್ದರು.