ಬೀಜಾಡಿ: ಸಹಕಾರಿ ಸಂಘದ ಹೆಸರಿನಲ್ಲಿ ವಂಚನೆ- ಬೆದರಿಕೆ ಕೊಲೆ
ಕುಂದಾಪುರ, ಫೆ. 4: ಸೊಸೈಟಿಯೊಂದರ ಹೆಸರಿನಲ್ಲಿ ವಂಚನೆ ನಡೆಸಿದ ಕುರಿತು ಪ್ರಕರಣ ದಾಖಲಾಗಿದೆ. ಸತೀಶ್ ಹಾಗೂ ನಾರಾಯಣ ಅವರು ಮರವಂತೆಯ ಮನ್ಸೂರ್ ಇಬ್ರಾಹಿಂ ಅವರನ್ನು ಸಂಪರ್ಕಿಸಿ ಬೀಜಾಡಿಯ ಸಹಕಾರಿ ಸಂಘವೊಂದರಲ್ಲಿ 10 ಲಕ್ಷ ರೂ. ನಿರಖು ಠೇವಣಿ ಇಟ್ಟಲ್ಲಿ 20 ಲಕ್ಷ ರೂ. ಅನ್ನು ಸಾಲದ ರೂಪದಲ್ಲಿ ನೀಡುವುದಾಗಿ ತಿಳಿಸಿದ್ದರು.
ಅದರಂತೆ 2023ರ ಸೆ. 22ರಂದು ಮನ್ಸೂರ್, ಅವರ ಪತ್ನಿ ಹಸೀನಾ ಹಾಗೂ ಮದ್ದೂಂ ಇಸ್ಮಾಯಿಲ್ ಅವರು ಸದಸ್ಯತ್ವ ಪಡೆದು, 5 ಲಕ್ಷ ರೂ.ಗಳನ್ನು ನಗದು ರೂಪದಲ್ಲಿ ಹಾಗೂ 5 ಲಕ್ಷ ರೂ.ಗಳನ್ನು ಸತೀಶ್‌ನ ಬ್ಯಾಂಕ್ ಖಾತೆಗೆ ವರ್ಗಾಯಿಸಿದ್ದರು. 5ಲಕ್ಷ ರೂ.ಗಳಿಗೆ ಬಾಂಡ್ ನೀಡಿದ್ದು ಉಳಿದ 5 ಲಕ್ಷ ರೂ. ಗಳಿಗೆ ಯಾವುದೇ ದಾಖಲೆ ನೀಡಿರಲಿಲ್ಲ. ನ.16ರಂದು ಠೇವಣಿ ಹಣವನ್ನು ಮನ್ಸೂರ್ ಕೇಳಿದಾಗ ಆರೋಪಿಗಳು ಚೆಕ್ ನೀಡಿದ್ದು, ಅದು ಅಮಾನ್ಯವಾಗಿದೆ. ಬಳಿಕ ಆರೋಪಿಗಳಾದ ಸತೀಶ್, ನಾರಾಯಣ, ಲೋಕೇಶ, ಸುಜಯ್ ಅವರು ಇತರ ಇಬ್ಬರೊಂದಿಗೆ ಸೇರಿ ಕೋಟೇಶ್ವರದ ಕಾಳಾವರ ಸೇತುವೆ ಬಳಿ ಎರಡು ಕಾರುಗಳಲ್ಲಿ ಬಂದು ಮನ್ಸೂರ್‌ಗೆ ಕೊಡಬೇಕಾಗಿದ್ದ ಹಣವನ್ನು ಕೊಡುವುದಿಲ್ಲ. ದೂರು ನೀಡಿದಲ್ಲಿ ಕೊಲ್ಲುವುದಾಗಿ ಬೆದರಿಕೆ ಹಾಕಿದ್ದಾಗಿ ಪ್ರಕರಣ ದಾಖಲಾಗಿದೆ.