ಹಾಲಿನ ಪ್ರೋತ್ಸಾಹಧನ ಕೂಡಲೇ ಬಿಡುಗಡೆ ಮಾಡುವಂತೆ ಸರಕಾರಕ್ಕೆ ಒತ್ತಾಯ
ಉಡುಪಿ: ಕಳೆದ ಆಗಸ್ಟ್ ತಿಂಗಳಿನಿಂದ ರಾಜ್ಯ ಸರಕಾರವು ಹಾಲು ಉತ್ಪಾದಕ ಹೈನುಗಾರರಿಗೆ, ಹಾಲಿನ ಪ್ರೋತ್ಸಾಹ ಧನ ಪಾವತಿ ಮಾಡಲು ಬಾಕಿಯಾಗಿದ್ದು,ರಾಜ್ಯದ ಲಕ್ಷಾಂತರ ಹೈನುಗಾರರು ತೀರ ಸಂಕಷ್ಟದಲ್ಲಿದ್ದಾರೆ.
ಕಳೆದ ಎರಡು ವರ್ಷಗಳಿಂದ ಏರುತ್ತಿರುವ ಹಾಲು ಉತ್ಪಾದನಾ ಖರ್ಚು – ವೆಚ್ಚಗಳಿಂದ ರಾಜ್ಯದ ಹೈನುಗಾರ ಕುಟುಂಬಗಳು ಹೈನುಗಾರಿಕೆಯಿಂದ ವಿಮುಖ ರಾಗುತ್ತಿದ್ದು, ಹಾಲಿನ ಉತ್ಪಾದನೆ ರಾಜ್ಯದ ಹಲವಾರು ಒಕ್ಕೂಟಗಳಲ್ಲಿ ಬೇಡಿಕೆಗಿಂತ ತುಂಬಾ ಕಡಿಮೆಯಾಗಿದ್ದು, ಒಕ್ಕೂಟಗಳು ಮತ್ತು ಹೈನುಗಾರರು ನಷ್ಟವನ್ನು ಅನುಭವಿಸುತ್ತಿದ್ದಾರೆ.
ನಂದಿನಿ ಪಶು ಆಹಾರದ ಬೆಲೆಯು ಆಗಾಗ ಏರಿಕೆಯಾಗುತ್ತಿದ್ದು, ಸರಕಾರವು ಪಶು ಆಹಾರಕ್ಕೆ ಕೆಜಿ ಒಂದಕ್ಕೆ ಕನಿಷ್ಠ ಐದು ರೂಪಾಯಿ ಸಬ್ಸಿಡಿ ನೀಡುವುದರ ಮೂಲಕ ನಿರಂತರ ಹೆಚ್ಚಳದ ಹೊರೆಯನ್ನು ಇಳಿಸಿ ಹೈನುಗಾರರಿಗೆ ತುಸು ಸಾಂತ್ವನವನ್ನು ನೀಡಬೇಕು ಜೊತೆಗೆ ರಾಜ್ಯದಲ್ಲಿ ಸರಕಾರಿ ಪಶುವೈದ್ಯರ ಸಾವಿರಾರು ಹುದ್ದೆಗಳು ಖಾಲಿ ಇದ್ದು ಕೂಡಲೇ ನೇಮಕಾತಿ ಮಾಡಿ ಹೈನುಗಾರಿಕಾ ಕ್ಷೇತ್ರಕ್ಕೆ ಬಲ ತುಂಬಬೇಕೆಂದು ಸಾಣೂರು ನರಸಿಂಹ ಕಾಮತ್ ಒತ್ತಾಯಿಸಿರುತ್ತಾರೆ.
ಈ ಎಲ್ಲಾ ವಿಚಾರಗಳನ್ನು ಈಗಾಗಲೇ ರಾಜ್ಯ ಹಾಲು ಮಹಾ ಮಂಡಳಿ ಮತ್ತು ಜಿಲ್ಲಾ ಒಕ್ಕೂಟಗಳು, ಸಹಕಾರ ಭಾರತಿ ಸಂಘಟನೆ ರಾಜ್ಯ ಸರಕಾರದ ಗಮನಕ್ಕೆ ತಂದಿದ್ದರೂ, ರಾಜ್ಯ ಸರ್ಕಾರ ವು ರಾಜ್ಯದ ಹೈನುಗಾರಿಕಾ ಕ್ಷೇತ್ರಕ್ಕೆ ಅನುಕೂಲವಾಗುವ ಆರ್ಥಿಕ ಸಹಕಾರ ಹಾಗೂ ಪ್ರೋತ್ಸಾಹಕ ಯೋಜನೆಗಳನ್ನು ಅನುಷ್ಠಾನಕ್ಕೆತಾರದೆ ರಾಜ್ಯದ ಹೈನುಗಾರರು ತೀರಾ ಸಂಕಷ್ಟವನ್ನು ಅನುಭವಿಸುತ್ತಿದ್ದಾರೆ.
ರಾಜ್ಯದಲ್ಲಿ ದಿನವಹಿ ರಾಜ್ಯ ಹಾಲು ಮಹಾ ಮಂಡಳಿಯ 15 ಹಾಲು ಒಕ್ಕೂಟ ವ್ಯಾಪ್ತಿಯ ಸರಿ ಸುಮಾರು 17ಸಾವಿರಕ್ಕೂ ಮಿಕ್ಕಿ ಹಾಲು ಉತ್ಪಾದಕ ಸಹಕಾರಿ ಸಂಘಗಳ ಮೂಲಕ, 10 ಲಕ್ಷಕ್ಕೂ ಮಿಕ್ಕಿ ಹೈನುಗಾರ ಕುಟುಂಬಗಳ ಪರಿಶ್ರಮದಿಂದ ಸರಾಸರಿ ಅಂದಾಜು ದಿನವಹಿ 82 ಲಕ್ಷ ಲೀಟರ್ ಗಳಷ್ಟು ಹಾಲು ಸಂಗ್ರಹವಾಗುತ್ತಿದ್ದು , ಲೀಟರಿಗೆ 5/-ರೂಪಾಯಿಯಂತೆ ರಾಜ್ಯ ಸರಕಾರವು ಪ್ರೋತ್ಸಾಹ ಧನ ನೀಡುತ್ತಾ ಬರುತ್ತಿದ್ದು, ಇದೀಗ ಕಳೆದ ಐದು ತಿಂಗಳಿನಿಂದ ಹೈನುಗಾರರ ಖಾತೆಗಳಿಗೆ ಪ್ರೋತ್ಸಾಹ ಧನ ಪಾವತಿಯಾಗಿಲ್ಲ.
ಕನಿಷ್ಠ ಎರಡು ತಿಂಗಳಿಗೊಮ್ಮೆಯಾದರೂ ರಾಜ್ಯ ಸರಕಾರವು ನಿಯಮಿತವಾಗಿ ಹೈನುಗಾರರ ಖಾತೆಗಳಿಗೆ ಪ್ರೋತ್ಸಾಹ ಧನವನ್ನು ಪಾವತಿಸಿದರೆ ಗ್ರಾಮೀಣ ಭಾಗದ ರೈತರು ಸ್ವಲ್ಪ ನಿಟ್ಟುಸಿರನ್ನು ಬಿಡಬಹುದು.
ಈಗಾಗಲೇ ಬಾಕಿ ಉಳಿದಿರುವ ಹಾಲಿನ ಪ್ರೋತ್ಸಾಹ ಧನವನ್ನು ರಾಜ್ಯ ಸರಕಾರವು ಕೂಡಲೇ ರೈತರ ಖಾತೆಗಳಿಗೆ ಏಕಗಂಟಿನಲ್ಲಿಪಾವತಿ ಮಾಡಿ, ಹೈನುಗಾರರಲ್ಲಿ ಜೀವನೋತ್ಸಾಹ ತುಂಬಬೇಕೆಂದು ಸಹಕಾರ ಭಾರತಿ ರಾಜ್ಯ ಹಾಲು ಪ್ರಕೋಷ್ಟದ ಸಂಚಾಲಕರು ಹಾಗೂ ದಕ್ಷಿಣ ಕನ್ನಡ ಸಹಕಾರಿ ಹಾಲು ಉತ್ಪಾದಕರ ಒಕ್ಕೂಟದ ನಿರ್ದೇಶಕರಾದ ಸಾಣೂರು ನರಸಿಂಹ ಕಾಮತ್ ರವರು ಪತ್ರಿಕಾ ಪ್ರಕಟಣೆಯ ಮೂಲಕ ರಾಜ್ಯದ ಸಹಕಾರಿ ಸಚಿವರು, ಪಶು ಸಂಗೋಪನ ಸಚಿವರು ಹಾಗೂ ಮುಖ್ಯಮಂತ್ರಿಗಳನ್ನು ರಾಜ್ಯದ ಲಕ್ಷಾಂತರ ರೈತ ಕುಟುಂಬಗಳ ಪರವಾಗಿ ಆಗ್ರಹಿಸಿರುತ್ತಾರೆ.