ರಾಜ್ಯಕ್ಕೆ 62 ಸಾವಿರ ಕೋಟಿ ರೂ.ನಷ್ಟ- ಫೆ.7 ರಂದು ದೆಹಲಿಯಲ್ಲಿ ಧರಣಿ: ಡಿ.ಕೆ. ಶಿವಕುಮಾರ್
ಬೆಂಗಳೂರು: ಕೇಂದ್ರ ಬಜೆಟ್ ನಲ್ಲಿ ಕರ್ನಾಟಕ ರಾಜ್ಯಕ್ಕೆ ನಿರಂತರ ಅನ್ಯಾಯವಾಗುತ್ತಿದೆ. ಕೇಂದ್ರದ ಮಲತಾಯಿ ಧೋರಣೆಯಿಂದ ಕಳೆದ 5 ವರ್ಷಗಳಲ್ಲಿ ರಾಜ್ಯಕ್ಕೆ 62 ಸಾವಿರ ಕೋಟಿ ಹಣ ನಷ್ಟವಾಗಿದೆ. ಹೀಗಾಗಿ ಫೆ. 7 ರಂದು ಕಾಂಗ್ರೆಸ್ ಸರಕಾರದ ಪ್ರತಿನಿಧಿಗಳು ದೆಹಲಿಯಲ್ಲಿ ಪ್ರತಿಭಟನೆ ನಡೆಸಲಿದ್ದಾರೆ ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ ಅವರು ತಿಳಿಸಿದ್ದಾರೆ.
ವಿಧಾನಸೌಧದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಶಿವಕುಮಾರ್ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ನೇತೃತ್ವದಲ್ಲಿ ಫೆ.07 ರಂದು ದೆಹಲಿಯಲ್ಲಿ ನಾನು ಸೇರಿದಂತೆ ರಾಜ್ಯದ ಸಚಿವರು, ಸಂಸದರು, ಶಾಸಕರು, ವಿಧಾನ ಪರಿಷತ್ ಸದಸ್ಯರು ಈ ಪ್ರತಿಭಟನೆಯಲ್ಲಿ ಭಾಗವಹಿಸುತ್ತೇವೆ ಎಂದು ಹೇಳಿದ್ದಾರೆ.
ಪ್ರತಿಭಟನೆ ಸ್ಥಳವಕಾಶದ ಬಗ್ಗೆ ಕೆಂದ್ರಕ್ಕೆ ಪತ್ರ ಬರೆದಿದ್ದು, ಅನುಮತಿ ಸಿಕ್ಕ ಸ್ಥಳದಲ್ಲಿ ಪ್ರತಿಭಟನೆ ನಡೆಸುತ್ತೇವೆ. ಪ್ರಜಾತಂತ್ರ ವ್ಯವಸ್ಥೆಯಲ್ಲಿ ಪ್ರತಿಭಟನೆ ನಮ್ಮ ಮೂಲಭೂತ ಹಕ್ಕು. ಕಾಂಗ್ರೆಸ್ ಜನಪ್ರತಿನಿಧಿ ಗಳು ಭಾಗವಹಿಸಲಿರುವ ಈ ಪ್ರತಿಭಟನೆಯಲ್ಲಿ ಪ್ರತಿಪಕ್ಷದ ಸಂಸದರು. ಶಾಸಕರು ಭಾಗವಹಿಸಬೇಕು ಎಂದು ಮನವಿ ಮಾಡುತ್ತೇನೆ.