ಭಯೋತ್ಪಾದಕ ಸಂಘಟನೆ ಸಿಮಿ ಮೇಲಿನ ನಿಷೇಧ ವಿಸ್ತರಿಸಿದ ಕೇಂದ್ರ
ನವದೆಹಲಿ: ಭಯೋತ್ಪಾದಕ ಸಂಘಟನೆ ಸ್ಟೂಡೆಂಟ್ಸ್ ಇಸ್ಲಾಮಿಕ್ ಮೂವ್ಮೆಂಟ್ ಆಫ್ ಇಂಡಿಯಾ(ಸಿಮಿ) ಮೇಲಿನ ನಿಷೇಧವನ್ನು ಸರ್ಕಾರ ವಿಸ್ತರಿಸಿದೆ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಸೋಮವಾರ ಹೇಳಿದ್ದಾರೆ.
ನಿಷೇಧಿತ ಸಿಮಿ ಸಂಘಟನೆಯನ್ನು ಯುಎಪಿಎ ಅಡಿಯಲ್ಲಿ ಮತ್ತೆ ಐದು ವರ್ಷಗಳ ಕಾಲ ‘ಕಾನೂನುಬಾಹಿರ ಸಂಘ’ ಎಂದು ಘೋಷಿಸಲಾಗಿದೆ ಎಂದು ಕೇಂದ್ರ ಗೃಹ ಸಚಿವರು ತಿಳಿಸಿದ್ದಾರೆ. ಸ್ಟೂಡೆಂಟ್ಸ್ ಇಸ್ಲಾಮಿಕ್ ಮೂವ್ಮೆಂಟ್ ಆಫ್ ಇಂಡಿಯಾ(ಸಿಮಿ) ಮೇಲೆ ಹೇರಿರುವ ನಿಷೇಧವನ್ನು ಸಮರ್ಥಿಸಿಕೊಂಡಿರುವ ಕೇಂದ್ರ ಸರ್ಕಾರ, ಈ ಸಂಬಂಧ ಸುಪ್ರೀಂ ಕೋರ್ಟ್ನಲ್ಲಿ ಅಫಿಡವಿಟ್ ಸಲ್ಲಿಸಿದೆ.
ಭಾರತದ ಸಾರ್ವಭೌಮತೆ, ಭದ್ರತೆ ಮತ್ತು ಸಮಗ್ರತೆಗೆ ಧಕ್ಕೆ ತರಲು ಭಯೋತ್ಪಾದನೆ, ಶಾಂತಿ ಮತ್ತು ಕೋಮು ಸೌಹಾರ್ದವನ್ನು ಕದಡುವಲ್ಲಿ ಸ್ಟೂಡೆಂಟ್ಸ್ ಇಸ್ಲಾಮಿಕ್ ಮೂವ್ಮೆಂಟ್ ಆಫ್ ಇಂಡಿಯಾ ತೊಡಗಿಸಿಕೊಂಡಿದೆ ಎಂದು ಕೇಂದ್ರ ಗೃಹ ಸಚಿವಾಲಯ ಎಕ್ಸ್ನಲ್ಲಿ ಪೋಸ್ಟ್ ಮಾಡಿದೆ.
2014ರ ಫೆಬ್ರವರಿ 1ರಂದು ಸಿಮಿ ಸಂಘಟನೆಯನ್ನು ನಿಷೇಧಿಸಲಾಯಿತು. ನಂತರ ಈ ನಿಷೇಧವನ್ನು 2019ರವರೆಗೆ ವಿಸ್ತರಿಸಲಾಗಿತ್ತು. ಇದೀಗ ಈ ಸಂಘಟನೆಯನ್ನು ಮತ್ತೆ ಐದು ವರ್ಷಗಳ ಕಾಲ ಯುಎಪಿಎ ಅಡಿಯಲ್ಲಿ ಕಾನೂನುಬಾಹಿರ ಸಂಘಟನೆ ಎಂದು ಘೋಷಿಸಲಾಗಿದೆ.