ಬೆಳ್ತಂಗಡಿ: ಸುಡುಮದ್ದು ತಯಾರಿಕಾ ಘಟಕದಲ್ಲಿ ಸ್ಫೋಟ- ಮೂವರು ಮೃತ್ಯು,ಹಲವರಿಗೆ ಗಾಯ
ಬೆಳ್ತಂಗಡಿ, ಜ 28: ಗೋಳಿಯಂಗಡಿ ಸಮೀಪದ ಕಡ್ತ್ಯಾರು ಸಮೀಪ ಪಟಾಕಿ ಗೋದಾಮಿನಲ್ಲಿ ಸ್ಫೋಟಗೊಂಡು ಮೂವರು ಕಾರ್ಮಿಕರ ದೇಹವು ಛಿದ್ರಗೊಂಡು ಸ್ಥಿತಿಯಲ್ಲ ಪತ್ತೆಯಾಗಿದ್ದು, ಅನೇಕ ಮಂದಿ ಗಾಯಗೊಂಡ ಘಟನೆ ನಡೆದಿದೆ.
ಕೇರಳದ ಸ್ವಾಮಿ(55) ಹಾಗೂ ವರ್ಗಿಸ್ (68), ಹಾಸನದ ಅರಸೀಕೆರೆ ನಿವಾಸಿ ಚೇತನ್(25) ಮೃತಪಟ್ಟ ದುರ್ದೈವಿಗಳು.
ದಿನೇಶ ಹಾಸನ, ಕಿರಣ ಹಾಸನ, ಕುಮಾರ ಅರಸೀಕೆರೆ, ಕಲ್ಲೇಶ ಚಿಕ್ಕಮಾರಹಳ್ಳಿ, ಪ್ರೇಮ್ ಕೇರಳ, ಕೇಶವ ಗಾಯಗೊಂಡವರು. ಕುಚ್ಚೋಡಿ ಸಮೀಪದ ನಿವಾಸಿ ಬಶೀರ್ ಎಂಬವರ ಜಮೀನಿನಲ್ಲಿ ಪಟಾಕಿ ತಯಾರಿಸುತ್ತಿದ್ದು, ಇಲ್ಲಿ ಒಟ್ಟು 9 ಮಂದಿ ಕೂಲಿ ಕಾರ್ಮಿಕರು ಸ್ಫೋಟಕ ತಯಾರಿಸುತ್ತಿದ್ದರು ಎನ್ನಲಾಗಿದೆ.
ಮೃತಪಟ್ಟ ಮೂವರು ಪಟಾಕಿ ತಯಾರಿಕಾ ಘಟಕದಲ್ಲಿ ಸ್ಫೋಟಕ ತಯಾರಿಸುತ್ತಿದ್ದರು. ಈ ಪೈಕಿ ಓರ್ವನ ಮೃತ ದೇಹ ದೊರೆತಿದ್ದು, ಇನ್ನಿಬ್ಬರ ದೇಹ ಸ್ಫೋಟದ ಸುತ್ತ ನೂರು ಮೀಟರ್ ವ್ಯಾಪ್ತಿಯಲ್ಲಿ ಛಿದ್ರವಾಗಿ ಬಿದ್ದಿದೆ.
ಸ್ಥಳಕ್ಕೆ ಬೆಳ್ತಂಗಡಿ ಅಗ್ನಿಶಾಮಕ ಸಿಬಂದಿ ತಕ್ಷಣ ಬೆಂಕಿ ನಂದಿಸಿ ಅರೆ ಜೀವಾವಸ್ಥೆಯಲ್ಲಿದ್ದ ವ್ಯಕ್ತಿಯನ್ನು ಆಸ್ಪತ್ರೆಗೆ ಸಾಗಿಸಿದರೂ, ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ.