ಸಾಲ ಪಾವತಿಸಿದರೂ ದಾಖಲೆ ಪತ್ರ ಹಿಂದಿರುಗಿಸದ ಸಹಕಾರಿ ಸಂಘದ ವಿರುದ್ಧ ದೂರು
ಬೈಂದೂರು ಜ.27(ಉಡುಪಿ ಟೈಮ್ಸ್ ವರದಿ): ಸಾಲವನ್ನು ಸಂಪೂರ್ಣವಾಗಿ ತೀರಿಸಿದರೂ ಜಾಗದ ಅಸಲಿ ದಾಖಲೆಗಳನ್ನು ನೀಡದೇ ವಂಚಿಸಿರುವ ಬಗ್ಗೆ ಉಪ್ಪುಂದದ ಕಂಬದಕೋಣೆ ರೈತರ ಸೇವಾ ಸಹಕಾರಿ ಸಂಘದ ವಿರುಧ ಬೈಂದೂರು ಠಾಣೆಯಲ್ಲಿ ದೂರು ದಾಖಲಾಗಿದೆ.
ಈ ಬಗ್ಗೆ ವಂಚನೆಗೆ ಒಳಗಾದ ಸುಶೀಲ ಬಿಜೂರು ತಮಗಾದ ವಂಚನೆ ಬಗ್ಗೆ ಪೊಲೀಸರಿಗೆ ದೂರು ನೀಡಿದ್ದಾರೆ. ಇವರು 2017ರ ಜನವರಿಯಲ್ಲಿ ಕಂಬದ ಕೋಣೆ ರೈತರ ಸೇವಾ ಸಹಕಾರಿ ಸಂಘದಲ್ಲಿ 15 ಲಕ್ಷ ರೂ. ಸಾಲ ಪಡೆದಿದ್ದರು. ಈ ಸಾಲವನ್ನು ಹಂತ ಹಂತವಾಗಿ ಮರುಪಾವತಿಸಿ 2023ರ ನ.4 ರಂದು ಸಂಪೂರ್ಣವಾಗಿ ತೀರಿಸಿದ್ದರು. ಆದರೆ ಆ ಬಳಿಕ ಈ ಸಹಕಾರಿ ಸಂಘದ ವ್ಯವಸ್ಥಾಪಕ ವಿಷ್ಣುರವರಲ್ಲಿ ಸಾಲಕ್ಕೆ ನೀಡಿದ್ದ ಆಸ್ತಿಯ ಅಸಲಿ ದಾಖಲಾತಿಗಳನ್ನು ವಾಪಾಸ್ಸು ನೀಡುವಂತೆ ಕೇಳಿದಾಗ ವಿಷ್ಣುರವರು ಒಂದೆರಡು ದಿನಗಳಲ್ಲಿ ಹುಡುಕಿ ಅಸಲಿದಾಖಲೆಗಳನ್ನು ಕೊಡುವುದಾಗಿ ತಿಳಿಸಿದ್ದರು.
ಆ ಬಳಿಕ 2023ರ ನ.6 ರಂದು ಈ ಬಗ್ಗೆ ವಿಚಾರಿಸಿದಾಗ ನಿಮ್ಮೊಂದಿಗೆ ನಮ್ಮ ವ್ಯವಹಾರ ಕೊನೆಗೊಂಡಿದೆ. 3 ವರ್ಷಗಳ ಹಿಂದೆ ನೀವು ಸಾಲ ಮೊತ್ತ ಹೆಚ್ಚಳಕ್ಕೆ ಕೋರಿದಾಗ ಅಸಲಿ ದಾಖಲೆಗಳನ್ನು ಕೊಂಡು ಹೋಗಿದ್ದೀರಿ. ಆದರೂ ನಮ್ಮಲ್ಲಿದ್ದರೆ ಹುಡುಕಿ ಕೊಡುವುದಾಗಿ ತಿಳಿಸಿದ್ದರು. ಈ ನಡುವೆ ದಾಖಲಾತಿಗಳು ಸಿಗದ ಕಾರಣ ಸಂಘಕ್ಕೆ ದಾಖಲಾತಿ ಹಿಂತಿರುಗಿಸುವಂತೆ ನೋಟಿಸು ಕಳುಹಿಸಲಾಗಿತ್ತು. ಆದರೆ ಅವರು ನೋಟಿಸ್ ಗೆ ನೀಡಿದ ಉತ್ತರದಲ್ಲಿ ಸಾಲ ತೀರಿಸುವ ಮುನ್ನವೇ 2020ರ ಅ.28 ರಂದು ಅಸಲಿ ದಾಖಲಾತಿಗಳನ್ನು ತೆಗೆದುಕೊಂಡು ಹೋಗಿರುವುದಾಗಿ ಸುಳ್ಳು ದಾಖಲೆ ಸೃಷ್ಟಿಸಿ, ಸಹಿಯನ್ನು ಪೋರ್ಜರಿ ವಂಚಿಸಿದ್ದಾರೆ ಎಂದು ಪೊಲೀಸರಿಗೆ ನೀಡಿದ ದೂರಿನಲ್ಲಿ ಆರೋಪಿಸಿದ್ದಾರೆ.
ಹಾಗೂ ಇದೇ ವಿಚಾರವಾಗಿ ಮನೆಯವರೊಂದಿಗೆ ಸಂಘದ ಕಚೇರಿಯಲ್ಲಿ ಚರ್ಚೆ ನಡೆಸುತ್ತಿದ್ದಾಗ ಸಿಬ್ಬಂದಿಗಳಾದ ಚಂದಯ್ಯ ಮತ್ತು ಶ್ರೀಧರನೊಂದಿಗೆ ನೀವು ಬೇಕಾದರೆ ಪೊಲೀಸ್, ಕೋರ್ಟಿಗೆ ಹೋಗಿ ನಿಮ್ಮ ದಾಖಲೆ ಕೊಡಲ್ಲ ಏನು ಮಾಡುತ್ತೀರಾ ಎಂದು ಬೆದರಿಕೆ ಒಡ್ಡಿ ಸಿಬ್ಬಂದಿಯನ್ನು ಕರೆಯಿಸಿ ದೈಹಿಕ ಹಲ್ಲೆ ನಡೆಸಿ ಹೊರ ಹಾಕಿರುತ್ತಾರೆ ಎಂದು ದೂರಿದ್ದಾರೆ.
ಅದರಂತೆ ವಂಚಿಸುವ ಉದ್ದೇಶಕ್ಕಾಗಿಯೇ ಅಸಲಿ ದಾಖಲೆಗಳನ್ನು ಇರಿಸಿಕೊಂಡು, ವಿಚಾರಿಸಿದಾಗ ಹಲ್ಲೆ ನಡೆಸಿ ದಾಖಲೆಗಳನ್ನು ನೀಡದೇ ಮೋಸ ಮಾಡಿದ್ದಾರೆ ಎಂಬುದಾಗಿ ಸುಶೀಲ ಬಿಜೂರು ಅವರು ನೀಡಿದ ದೂರಿನಂತೆ ಬೈಂದೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.