ಮಕ್ಕಳು ತಮ್ಮ ವಿದ್ಯಾರ್ಥಿ ದಿನಗಳಲ್ಲಿಯೇ ಸಮಾಜ ಸೇವಾ ಗುಣಗಳನ್ನು ಬೆಳೆಸಿಕೊಳ್ಳಬೇಕು
ಉಡುಪಿ: ಚೈತನ್ಯ ಸೋಶಿಯಲ್ ವೆಲ್ಫೇರ್ ಫೌಂಡೇಶನ್, ಲಯನ್ಸ್ ಕ್ಲಬ್ ಉಡುಪಿ ರಾಯಲ್ ಮತ್ತು ಲಯನ್ಸ್ ಕ್ಲಬ್ ಉದ್ಯಾವರ ಸನ್ ಶೈನ್ ವತಿಯಿಂದ ಲಕ್ಷ್ಮೀನಗರದಲ್ಲಿ ಡಾ. ಉಮೇಶ್ ಪ್ರಭು ಅವರು ನಡೆಸುತ್ತಿರುವ ’ಕೃಷ್ಣಾನುಗ್ರಹ’ ಅನಾಥ ಮಕ್ಕಳ ದತ್ತು ಕೇಂದ್ರಕ್ಕೆ ಮಕ್ಕಳ ಆಹಾರ ಸಾಮಾಗ್ರಿ ಮತ್ತು ಇತರ ದೈನಂದಿನ ಉಪಯೋಗಿ ವಸ್ತುಗಳನ್ನು ನೀಡಲಾಯಿತು.
ಚೈತನ್ಯ ಸೋಶಿಯಲ್ ವೆಲ್ಫೇರ್ ಫೌಂಡೇಶನ್ ಪ್ರವರ್ತಕರಾದ ಸುನೀಲ್ ಸಾಲ್ಯಾನ್ ಪ್ರಾಸ್ತಾವಿಕವಾಗಿ ಮಾತನಾಡಿ ಮಕ್ಕಳು ತಮ್ಮ ವಿದ್ಯಾರ್ಥಿ ದಿನಗಳಲ್ಲಿಯೇ ಸಮಾಜ ಸೇವಾ ಗುಣಗಳನ್ನು ಬೆಳೆಸಿಕೊಳ್ಳಬೇಕು, ಕಿರಣ್ ಬೇಕಲ್ಕರ್ ಮತ್ತು ಪವಿತ್ರ ಅವರ ಪುತ್ರಿ ವಿದ್ಯಾರ್ಥಿ ಕುಮಾರಿ ಶ್ರೀಯಾ ತನ್ನ ಹುಟ್ಟು ಹಬ್ಬ ಆಚರಣೆಯ ವೆಚ್ಚವನ್ನು ಉಳಿಸಿ ಅನಾಥ ಮಕ್ಕಳ ಕೇಂದ್ರಕ್ಕೆ ನಮ್ಮ ಸಂಸ್ಥೆಯ ಮೂಲಕ ನೀಡಿರುವುದು ಶ್ಲಾಘನಾರ್ಹ ಎಂದರು.
ಲಯನ್ಸ್ ಜಿಲ್ಲೆ 317ಸಿ ಯ ಜಿಲ್ಲಾ ಗವರ್ನರ್ ಎನ್.ಎಮ್. ಹೆಗಡೆಯವರು ಸಮಾಗ್ರಿಗಳನ್ನು ಕೃಷ್ಣಾನುಗ್ರಹ ಸಂಸ್ಥೆಗೆ ಹಸ್ತಾಂತರಿಸಿ ಲಯನ್ಸ್ ಸಂಸ್ಥೆಯಿಂದ ಒಂದು ವಾರಗಳ ವಿಶೇಷ ಸೇವಾ ಕಾರ್ಯಕ್ರಮಗಳು ನಡೆಯುತ್ತಿದ್ದು ರಿಲೀವಿಂಗ್ ದಿ ಹಂಗರ್ ಕಾರ್ಯಕ್ರಮದ ಅಡಿಯಲ್ಲಿ ಇವತ್ತು ಲಯನ್ಸ್ ಕ್ಲಬ್ ಉಡುಪಿ ರಾಯಲ್ ಮತ್ತು ಉದ್ಯಾವರ ಸನ್ ಶೈನ್ ಮಕ್ಕಳಿಗೆ ಬೇಕಾದ ಆಹಾರ ಸಾಮಾಗ್ರಿಗಳನ್ನು ನೀಡುವ ಮೂಲಕ ಲಯನ್ಸ್ ಸಂಸ್ಥೆಯ ಕಾರ್ಯಕ್ರಮಗಳಿಗೆ ವಿಶೇಷ ಮೆರುಗು ನೀಡಿದ್ದಾರೆ ಎಂದರು.
ಈ ಸಂದರ್ಭದಲ್ಲಿ ಉದ್ಯಾವರ ಸನ್ ಶೈನ್ ಕ್ಲಬ್ಬಿನ ಅಧ್ಯಕ್ಷ ಜಾನ್ ಫೆರ್ನಾಂಡಿಸ್, ಜೆರಾಲ್ಡ್ ಪಿರೇರಾ, ಹೆನ್ರಿ ಡಿಸೋಜ, ಉಡುಪಿ ರಾಯಲ್ ಕ್ಲಬ್ಬಿನ ಸದಾಶಿವ ಬೈಲೂರು, ಸುಧಾಕರ ಭಂಡಾರಿ, ಕಿಶೋರ್ ಕೆ, ರವಿಂದ್ರ ಆಚಾರ್ಯ, ನಿಹಾಲ್ ಹೆಗ್ಡೆ, ಕೃಷ್ಣಾನುಗ್ರಹ ಸಂಸ್ಥೆಯ ಪ್ರಾಜೆಕ್ಟ್ ಮುಖ್ಯಸ್ಥೆ ಮೆರಿನಾ ಎಲಿಜಬೆತ್ ಮತ್ತು ಸಿಬ್ಬಂದಿಗಳು ಉಪಸ್ಥಿತರಿದ್ದರು. ಉಡುಪಿ ರಾಯಲ್ ಅಧ್ಯಕ್ಷ ಡಾ. ಸಂತೊಷ್ ಕುಮಾರ್ ಬೈಲೂರು ಸ್ವಾಗತಿಸಿದರು. ಕಾರ್ಯದರ್ಶಿ ರಾಜೇಶ್ ಬಂಗೇರಾ ವಂದಿಸಿದರು.