ಉಡುಪಿ: ಫಲಪುಷ್ಪ ಪ್ರದರ್ಶನಕ್ಕೆ ಚಾಲನೆ-ಕಣ್ಮನ ಸೆಳೆಯುತ್ತಿರುವ ಕಲಾಕೃತಿಗಳು
ಉಡುಪಿ: ಉಡುಪಿ ಜಿಲ್ಲಾಡಳಿತ, ಜಿಪಂ ಹಾಗೂ ತೋಟಗಾರಿಕೆ ಇಲಾಖೆ ವತಿಯಿಂದ ದೊಡ್ಡಣ್ಣಗುಡ್ಡೆಯ ಪುಷ್ಪಹರಾಜು ಕೇಂದ್ರದಲ್ಲಿ ಮೂರು ದಿನಗಳ ಕಾಲ ಹಮ್ಮಿಕೊಳ್ಳಲಾದ ಫಲಪುಷ್ಪ ಪ್ರದರ್ಶನಕ್ಕೆ ರಾಜ್ಯದ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ, ವಿಕಲಚೇತನರ ಹಾಗೂ ಹಿರಿಯ ನಾಗರೀಕರ ಸಬಲೀಕರಣ ಇಲಾಖೆ ಹಾಗೂ ಜಿಲ್ಲಾ ಉಸ್ತುವಾರಿ ಸಚಿವೆ ಲಕ್ಷ್ಮೀ ಆರ್. ಹೆಬ್ಬಾಳ್ಕರ್ ಇಂದು ಚಾಲನೆ ನೀಡಿದರು.
ಪ್ರದರ್ಶನದಲ್ಲಿ ಪೆಟೂನಿಯ, ವರ್ಬೇನ, ಸ್ಯಾಲ್ವಿಯ, ಸೇವಂತಿಗೆ, ಚೆಂಡು ಹೂ, ಜೀನಿಯಾ, ಚೈನಾ, ಅಸ್ಟರ್, ಬಾಲ್ಸಮ್, ಟೋರಿನೊ, ವಿಂಕಾ ರೋಸಿಯಾ, ಡೇಲಿಯಾ ಸಹಿತ ಪಾತಿಯಲ್ಲಿ ಹಾಗೂ ಕುಂಡಗಳಲ್ಲಿ ಜೋಡಿಸಿ ಇಡಲಾದ 6000 ಸಂಖ್ಯೆಯ ಸುಮಾರು 35 ಜಾತಿಯ ಹೂವಿನ ಗಿಡಗಳು ಆಕರ್ಷಣೀಯವಾಗಿವೆ.
ಧಾನ್ಯ ಮತ್ತು ಹೂವುಗಳಿಂದ ನಿರ್ಮಿಸಲಾದ ಅಯೋಧ್ಯೆ ರಾಮಮಂದಿರದ ಕಲಾಕೃತಿ, ಕ್ಯಾಪ್ಸಿಕಂ ಫೋಟೋ ಫ್ರೇಮ್, ಹೂವು ಮತ್ತು ಎಲೆಗಳಿಂದ ತಯಾರಿಸಲಾದ ಫ್ಲವರ್ ಕೈಟ್, ಸೆಲ್ಫಿ ರೆನ್, ಸೈಕಲ್ ರ್ಯಾಬಿಟ್, ಪಿಕಾಕ್ ಮೊಡೆಲ್ಗಳು, ತರಕಾರಿ, ಹಣ್ಣುಗಳಲ್ಲಿ ಕೆತ್ತನೆ ಮಾಡಿದ ಸ್ವಾತಂತ್ರ್ಯ ಹೋರಾಟ ಗಾರರು, ಪೇಜಾವರ ಶ್ರೀ ಸೇರಿದಂತೆ ವಿವಿಧ ಗಣ್ಯರ ಕಲಾಕೃತಿಗಳು ಗಮನ ಸೆಳೆದವು. ವಿವಿಧ ಅಲಂಕಾರಿಕ ಗಿಡಗಳ ಪ್ರದರ್ಶನ, ರೈತರು ಬೆಳೆದಿರುವ ವಿಶಿಷ್ಟ ಹಣ್ಣುಗಳು, ತರಕಾರಿ, ತೋಟದ ಬೆಳೆಗಳು, ಸಂಬಾರು ಬೆಳೆಗಳನ್ನು ಪ್ರದರ್ಶಿಸಲಾಗಿದೆ.
ಈ ಸಂದರ್ಭದಲ್ಲಿ ಜಿಲ್ಲಾಧಿಕಾರಿ ಡಾ.ವಿದ್ಯಾಕುಮಾರಿ, ಜಿಪಂ ಸಿಇಓ ಪ್ರತೀಕ್ ಬಾಯಲ್, ಎಸ್ಪಿ ಡಾ.ಅರುಣ್. ಕೆ, ಜಿಪಂ ಮುಖ್ಯ ಯೋಜನಾಧಿಕಾರಿ ಶ್ರೀನಿವಾಸ ರಾವ್, ತೋಟಗಾರಿಕೆ ಇಲಾಖೆಯ ಪ್ರಭಾರ ಉಪನಿರ್ದೇಶಕ ಪ್ರಮೋದ್ ಸಿ.ಎಂ. ಮೊದಲಾದವರು ಉಪಸ್ಥಿತರಿದ್ದರು.