ಕಾರ್ಕಳ: ಕಾರುಗಳ ಮುಖಾಮುಖಿ ಡಿಕ್ಕಿ- ಮಹಿಳೆ ಮೃತ್ಯು
ಕಾರ್ಕಳ: ಕಾರ್ಕಳದ ಅತ್ತೂರು ಚರ್ಚ್ನ ವಾರ್ಷಿಕ ಹಬ್ಬಕ್ಕೆ ತೆರಳುತ್ತಿದ್ದ ವೇಳೆ ಕಾರುಗಳ ಮುಖಾಮುಖಿ ಡಿಕ್ಕಿಯಿಂದಾಗಿ ಮಹಿಳೆಯೊಬ್ಬರು ದಾರುಣವಾಗಿ ಮೃತಪಟ್ಟ ಘಟನೆ ನಿಟ್ಟೆ ಸಮೀಪದ ನಂದಳಿಕೆ ಗ್ರಾಮದ ಮಾವಿನಕಟ್ಟೆ ಎಂಬಲ್ಲಿ ಗುರುವಾರ ಸಂಜೆ ಸಂಭವಿಸಿದೆ.
ಮರಿಯಾ ಫೆರ್ನಾಡಿಸ್ (53) ಎಂಬವರು ಮೃತಪಟ್ಟ ಮಹಿಳೆ. ಮಂಗಳೂರು ಕಡೆಯಿಂದ ಕಾರ್ಕಳ ಕಡೆಗೆ ಸಾಗುತ್ತಿದ್ದ ಬಾಡಿಗೆ ಕಾರು ಹಾಗೂ ನಿಟ್ಟೆ ಕಡೆಯಿಂದ ಪಡುಬಿದ್ರೆ ಕಡೆಯತ್ತ ಬರುತ್ತಿದ್ದ ಕಾರುಗಳ ನಡುವೆ ಕಾರ್ಕಳ ಪಡುಬಿದ್ರೆ ಹೆದ್ದಾರಿಯ ಮಾವಿನಕಟ್ಟೆ ತಿರುವು ರಸ್ತೆಯಲ್ಲಿ ಮುಖಾಮುಖಿ ಡಿಕ್ಕಿ ಸಂಭವಿಸಿ ಕಾರಿನಲ್ಲಿದ್ದ ಪ್ರಯಾಣಿಸುತ್ತಿದ್ದ ಮರಿಯಾ ಫೆರ್ನಾಡಿಸ್ ಎಂಬವರು ಗಂಭೀರ ಗಾಯಗೊಂಡಿದ್ದರು.
ಕೂಡಲೇ ಸ್ಥಳೀಯರು ಕಾರ್ಕಳದ ಖಾಸಗಿ ಆಸ್ಪತ್ರೆಗೆ ದಾಖಲಿಸಿ ಹೆಚ್ಚಿನ ಚಿಕಿತ್ಸೆಯ ಬಗ್ಗೆ ಮಣಿಪಾಲ ಆಸ್ಪತ್ರೆಗೆ ಕರೆತಂದರೂ ಚಿಕಿತ್ಸೆ ಫಲಕಾರಿಯಾಗದೇ ಮಹಿಳೆ ಸಾವನ್ನಪ್ಪಿದ್ದಾರೆ. ಮೃತ ಮರಿಯಾ ಫೆರ್ನಾಂಡೀಸ್ ಕಾರ್ಕಳದ ಅತ್ತೂರಿನ ಸಾಂತ್ಮಾರಿಗೆಂದು ಮುಂಬಯಿಂದ ಹೊರಟು ಮಂಗಳೂರಿಗೆ ಬಂದು ತಲುಪಿ, ಅಲ್ಲಿಂದ ಬಾಡಿಗೆ ಕಾರಿನಲ್ಲಿ ನಿಟ್ಟೆಯ ಹೊಟೇಲಿನ ರೂಮಿಗೆ ಕಾರಿನಲ್ಲಿ ತೆರಳುತ್ತಿದ್ದ ರೂಮಿನಿಂದ ಕೇವಲ 3.ಕಿ.ಮೀ ಅಂತರದಲ್ಲಿ ಈ ದುರ್ಘಟನೆ ನಡೆದಿದೆ. ಘಟನೆಯ ರಭಸಕ್ಕೆ ಎರಡೂ ಕಾರುಗಳು ಸಂಪೂರ್ಣ ಜಖಂಗೊಂಡಿದೆ.
ಈ ಘಟನೆಯ ಕುರಿತು ಕಾರ್ಕಳ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಅಪಘಾತದಿಂದ ಸಾವಿನ ಹೆದ್ದಾರಿಯಾಗುತ್ತಿದೆ!
ಮಾವಿನಕಟ್ಟೆಯ ತಿರುವು ರಸ್ತೆಯಲ್ಲಿ ಈಗಾಗಲೇ ಪ್ರತಿನಿತ್ಯ ಎಂಬಂತೆ ಅಪಘಾತಗಳು ನಡೆಯುತ್ತಿದೆ. ಈ ಹೆದ್ದಾರಿ ಸಾವಿನ ಹೆದ್ದಾರಿಯಾಗಿ ಪರಿಣಮಿಸಿದೆ. ಈಗಾಗಲೇ ಹಲವಾರು ಸಾವು ನೋವುಗಳು ಸಂಭವಿಸಿವೆ. ಹೀಗಾಗಿ ಪದೇ ಪದೇ ನಡೆಯುತ್ತಿರುವ ಅಪಘಾತಕ್ಕೆ ಹೆದ್ದಾರಿ ಇಲಾಖೆ ಸುರಕ್ಷತಾ ಕ್ರಮದ ಅಗತ್ಯವಿದೆ. ಹಾಗೂ ಈ ಭಾಗದಲ್ಲಿ ವಾಹನಗಳ ವೇಗಕ್ಕೆ ಕಡಿವಾಣ ಹಾಕುವ ನಿಟ್ಟಿನಲ್ಲಿ ಬ್ಯಾರಿಕೇಡ್ ಗಳನ್ನು ಅಳವಡಿಸುವ ಅಗತ್ಯವಿದೆ ಎಂದು ಸ್ಥಳೀಯರು ಒತ್ತಾಯಿಸಿದ್ದಾರೆ.