ಕಾರ್ಕಳದ ಅನ್ವಿ ಎಚ್. ಅಂಚನ್ಗೆ “ಹೊಯ್ಸಳ ಕೆಳದಿ ಚೆನ್ನಮ್ಮ ಜಿಲ್ಲಾ ಪ್ರಶಸ್ತಿ”
ಉಡುಪಿ ಜ.26: ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಡುಪಿ ಜಿಲ್ಲೆ ಹೊಯ್ಸಳ ಮತ್ತು ಕೆಳದಿ ಚೆನ್ನಮ್ಮ ಪ್ರಶಸ್ತಿ ಯೋಜನೆಯಡಿ ಅಸಾಧಾರಣ ಸಾಧನೆ ಮಾಡಿದ ಮಕ್ಕಳಿಗೆ ನೀಡುವ ಹೊಯ್ಸಳ ಕೆಳದಿ ಚೆನ್ನಮ್ಮ ಪ್ರಶಸ್ತಿಗೆ ಕಾರ್ಕಳದ ನಿವಾಸಿ, ಕಾರ್ಕಳ ಜ್ಞಾನಸುಧ ಆಂಗ್ಲ ಮಾಧ್ಯಮ ಶಾಲೆಯ ಎಂಟನೇ ತರಗತಿಯ ವಿದ್ಯಾರ್ಥಿನಿ ಕು. ಅನ್ವಿ ಹೆಚ್ ಅಂಚನ್ ಆಯ್ಕೆಯಾಗಿದ್ದು, ಇಂದು ಉಡುಪಿ ಅಜ್ಜರಕಾಡು ಕ್ರೀಡಾಂಗಣದಲ್ಲಿ ನಡೆದ ಗಣರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಯಿತು.
ಅನ್ವಿ ಹೆಚ್ ಅಂಚನ್ ಕ್ರೀಡಾ ಕ್ಷೇತ್ರದಲ್ಲಿ ಮಾಡಿರುವ ಸಾಧನೆಯನ್ನು ಗುರುತಿಸಿ ಉಡುಪಿ ಜಿಲ್ಲಾ ಉಸ್ತುವಾರಿ ಸಚಿವರಾದ ಲಕ್ಷ್ಮಿ ಹೆಬ್ಬಾಳ್ಕರ್, ಉಡುಪಿ ವಿಧಾನಸಭಾ ಸದಸ್ಯರಾದ ಯಶ್ಪಾಲ್ ಸುವರ್ಣ ಸೇರಿದಂತೆ ಇತರ ಪ್ರಮುಖರು ಉಪಸ್ಥಿತಿಯಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಯಿತು. ಅನ್ವಿ ಹೆಚ್ ಅಂಚನ್ ಯೋಗಾಸನ ದಲ್ಲಿ ಅಂತರಾಷ್ಟ್ರೀಯ ಮಟ್ಟದಲ್ಲಿ ಪ್ರಶಸ್ತಿ ಪಡೆದಿದ್ದು, ರಾಜ್ಯ ಮತ್ತು ರಾಷ್ಟ್ರಮಟ್ಟದಲ್ಲಿ ಹಲವು ಹಲವಾರು ಪ್ರಶಸ್ತಿಗಳನ್ನು ಪಡೆದಿರುವುದಲ್ಲದೇ, ಶಾಲಾ ಶಿಕ್ಷಣ ಇಲಾಖೆ ಸ್ಕೂಲ್ ಗೇಮ್ಸ್ ಫೆಡರೇಶನ್ ಆಫ್ ಇಂಡಿಯಾ ವತಿಯಿಂದ ನಡೆಯುವ ಅಂತರ್ ಶಾಲಾ ಯೋಗಾಸನ ರಿಥಮಿಕ್ ವಿಭಾಗದಲ್ಲಿ ರಾಷ್ಟ್ರಮಟ್ಟಕ್ಕೆ ಆಯ್ಕೆಯಾಗಿರುತ್ತಾಳೆ.
ಈಕೆ ಕ್ರೀಡಾ ಕ್ಷೇತ್ರವಲ್ಲದೆ ಬೇರೆ ಬೇರೆ ವಿಭಾಗಗಳಲ್ಲಿ ಮಾಡಿರುವ ಸಾಧನೆಯನ್ನು ಪರಿಗಣಿಸಿ ಇತ್ತೀಚಿಗೆ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಉಡುಪಿ ಜಿಲ್ಲಾ ಸಹಯೋಗದೊಂದಿಗೆ ಮಂಗಳೂರಿನ ಇನ್ವೆಂಜರ್ ಫೌಂಡೇಶನ್ ಕಟಪಾಡಿಯ ಸೃಷ್ಟಿ ಫೌಂಡೇಶನ್ ವತಿಯಿಂದ ಕರ್ನಾಟಕ ಸುವರ್ಣ ಮಹೋತ್ಸವದ ಅಂಗವಾಗಿ 2023 ನೇ ಸಾಲಿನ ಕರ್ನಾಟಕ ರಾಜ್ಯೋತ್ಸವ ಬಾಲ ಪ್ರಶಸ್ತಿ ನೀಡಿ ಗೌರವಿಸಿರುತ್ತಾರೆ.
ಇವಳು ಕಾರ್ಕಳ ಜ್ಞಾನಸುಧ ಆಂಗ್ಲ ಮಾಧ್ಯಮ ಪ್ರೌಢಶಾಲಾ ವಿದ್ಯಾರ್ಥಿನಿಯಾಗಿದ್ದು, ಕಾರ್ಕಳ ಶಾಸಕರ ಆಪ್ತ ಸಹಾಯಕರಾದ ಹರೀಶ್ ಅಂಚನ್ ಹಾಗೂ ಸರಕಾರಿ ಪ್ರೌಢಶಾಲೆ ಚೌಕಿ ಅಂಗಡಿ ಮಾಳ ಇಲ್ಲಿನ ದೈಹಿಕ ಶಿಕ್ಷಣ ಶಿಕ್ಷಕಿಯಾದ ಶೋಭಾ ಹರೀಶ್ ಅಂಚನ್ ದಂಪತಿಗಳ ಪುತ್ರಿಯಾಗಿರುತ್ತಾಳೆ. ತನ್ನ ಯೋಗಭ್ಯಾಸವನ್ನು ಸುದರ್ಶನ್ ಕಾರ್ಕಳ ಇವರಿಂದ ಪಡೆಯುತ್ತಿದ್ದು ಯೋಗ ಗುರು ನರೇಂದ್ರ ಕಾಮತ್ ರವರಿಂದ ಮಾರ್ಗದರ್ಶನ ಪಡೆದಿರುತ್ತಾಳೆ.