ಬೀಚ್ ಅಭಿವೃದ್ಧಿಗೆ ಮಾಸ್ಟರ್ ಪ್ಲ್ಯಾನ್, ಇಂದ್ರಾಳಿ ಸೇತುವೆ ಮಾರ್ಚ್ಗೆ ಪೂರ್ಣ- ಜಿಲ್ಲಾಧಿಕಾರಿ ವಿದ್ಯಾಕುಮಾರಿ
ಉಡುಪಿ: ಮಲ್ಪೆ ಬೀಚ್ನಲ್ಲಿ ಸ್ವಿಮ್ಮಿಂಗ್, ಪಾರ್ಕಿಂಗ್, ಫುಡ್ ಕೋರ್ಟ್, ವಾಟರ್ ಸ್ಪೋರ್ಟ್ಸ್, ಪಾರ್ಕಿಂಗ್ ಪ್ರದೇಶ ಸೇರಿ ದಂತೆ ಎಲ್ಲವನ್ನು ವ್ಯವಸ್ಥಿತವಾಗಿ ಮಾಡುವ ನಿಟ್ಟಿನಲ್ಲಿ ಯೋಜನೆ ರೂಪಿಸಿದ್ದು, ಈ ಕುರಿತು ನಿರ್ಮಿತಿ ಕೇಂದ್ರ ಹಾಗೂ ಮಣಿಪಾಲ ಎಂಐಟಿಯವರು ಜಂಟಿಯಾಗಿ ಮಾಸ್ಟರ್ ಪ್ಲ್ಯಾನ್ ಸಿದ್ಧಪಡಿಸುತ್ತಿದ್ದಾರೆ ಎಂದು ಉಡುಪಿ ಜಿಲ್ಲಾಧಿಕಾರಿ ಡಾ.ಕೆ. ವಿದ್ಯಾ ಕುಮಾರಿ ತಿಳಿಸಿದ್ದಾರೆ.
ಉಡುಪಿ ಜಿಲ್ಲಾಧಿಕಾರಿ ಕಚೇರಿಯಲ್ಲಿಂದು ಮಾಧ್ಯಮದವರೊಂದಿಗೆ ಮಾತ ನಾಡಿದ ಅವರು, ಬೀಚ್ನಲ್ಲಿ ಎಲ್ಲವೂ ಅವ್ಯ ವಸ್ಥೆ ರೀತಿಯಲ್ಲಿದ್ದು, ಅವುಗಳನ್ನು ಪ್ರತ್ಯೇಕವಾಗಿ ವ್ಯವಸ್ಥಿತಗೊಳಿಸಲಾಗು ವುದು. ಈ ನಿಟ್ಟಿನಲ್ಲಿ ನಿರ್ಮಿತಿ ಕೇಂದ್ರ ಹಾಗೂ ಮಣಿಪಾಲ ಎಂಐಟಿಯವರು ಸ್ಥಳ ಪರಿಶೀಲನೆ ನಡೆಸಿ ಯೋಜನೆ ಸಿದ್ಧಪಡಿಸುತ್ತಿದ್ದಾರೆ. ಇದರ ನಂತರ ಮುಂದೆ ಬೀಚ್ ಪಾರ್ಕಿಂಗ್ ಮತ್ತು ಕಸ ವಿಲೇವಾರಿಗಾಗಿ ಹೊಸ ಟೆಂಡರ್ ಕರೆಯಲಾಗುವುದು ಎಂದರು.
ಇಂದ್ರಾಳಿ ರೈಲ್ವೇ ಸೇತುವೆಗೆ ಸಂಬಂಧಿಸಿ ಹುಬ್ಬಳ್ಳಿ ಯಲ್ಲಿ ನಡೆಯುತ್ತಿರುವ ಗರ್ಡರ್ ಕಾಮಗಾರಿ ಪೂರ್ಣಗೊಂಡಿದ್ದು, ಲಕ್ನೋದಲ್ಲಿರುವ ರೈಲ್ವೇ ಸುರಕ್ಷತಾ ಆಯುಕ್ತಾಲಯ ತಂಡ ಆಗಮಿಸಿ ಇದರನ್ನು ಪರೀಕ್ಷೆ ಮಾಡಿದೆ. ಮುಂದೆ ಗರ್ಡರ್ನ್ನು ಇಂದ್ರಾಳಿಗೆ ತಂದು ಅಳವಡಿಸಬೇಕು. ಅದಕ್ಕೆ ಒಂದು ತಿಂಗಳ ಅವಧಿ ಬೇಕಾಗುತ್ತದೆ. ಆದುದರಿಂದ ಮುಂದಿನ ಮಾರ್ಚ್ ಒಳಗೆ ಸೇತುವೆ ಕಾಮಗಾರಿ ಪೂರ್ಣಗೊಳಿಸುವುದಾಗಿ ತಿಳಿಸಿದ್ದಾರೆ. ನಮ್ಮ ಇಂಜಿನಿಯರ್ ಕೂಡ ಹುಬ್ಬಳ್ಳಿಗೆ ತೆರಳಿ ಗರ್ಡರ್ ಕಾಮಗಾರಿ ನೋಡಿಕೊಂಡು ಬಂದಿದ್ದಾರೆ ಎಂದು ಅವರು ಹೇಳಿದರು.
ವಾರಾಹಿಯಿಂದ ಉಡುಪಿ ನಗರಸಭೆ ನೀರು ಪೂರೈಕೆ ಮಾಡುವ ಸಂಬಂಧ ದಾರಿ ಮಧ್ಯೆ ಅರಣ್ಯ ಇಲಾಖೆಯ ಸಮಸ್ಯೆ ಇದ್ದು, ಆ ಸಂಬಂಧ ಅರ್ಜಿಯನ್ನು ಹಾಕಲಾಗಿದೆ. ಅದೇ ರೀತಿ ಸ್ವರ್ಣ ನದಿಯಲ್ಲಿ ಪೈಪ್ಲೈನ್ಗಾಗಿ ನಿರ್ಮಿಸ ಲಾಗುತ್ತಿರುವ ಸೇತುವೆ ಕಾಮಗಾರಿ ಪೂರ್ಣಗೊಂಡಿಲ್ಲ. ಇದೀಗ ಅಲ್ಲಿರುವ ಲೋಕೋಪಯೋಗಿ ಇಲಾಖೆಯ ಸೇತುವೆಯಲ್ಲಿ ತಾತ್ಕಾಲಿಕ ವಾಗಿ ಪೈಪ್ಲೈನ್ ಮಾಡಲು ಅನುಮತಿ ನೀಡಲಾಗಿದೆ. ಸೇತುವೆ ಕಾಮಗಾರಿಯು ಮುಂದಿನ ಆರು ತಿಂಗಳ ಒಳಗೆ ಪೂರ್ಣಗೊಳಿಸಲಾಗುತ್ತದೆ ಎಂದು ಅವರು ತಿಳಿಸಿದರು.
ವೈಜ್ಞಾನಿಕವಾಗಿ ದರ ಏರಿಕೆ: ಉಡುಪಿ ನಗರಸಭೆಯಲ್ಲಿ ಕುಡಿಯುವ ನೀರಿನ ದರ ಉಳಿದ ನಗರಸಭೆಗಳಿಂತ ಏರಿಕೆ ಮಾಡಿಲ್ಲ. ಉಳಿದ ನಗರಸಭೆ ಹಾಗೂ ಕಾರ್ಕಳ ಪುರಸಭೆಗೆ ಹೋಲಿಕೆ ಮಾಡಿದರೆ ನಮ್ಮ ದರ ತೀರಾ ಕಡಿಮೆ ಇತ್ತು. ಅದನ್ನೆಲ್ಲ ಪರಿಶೀಲನೆ ಮಾಡಿಯೇ ವೈಜ್ಞಾನಿಕವಾಗಿ ದರ ಏರಿಕೆ ಮಾಡಲಾಗಿದೆ ಎಂದು ಜಿಲ್ಲಾಧಿಕಾರಿ ತಿಳಿಸಿದರು.
ಪ್ರತಿ ವ್ಯಕ್ತಿ ದಿನಕ್ಕೆ 135ಲೀಟರ್ ನೀರು ಬಳಕೆ ಮಾಡಬಹುದು. ಆ ಮಿತಿಯ ಅಂದಾಜಿನಲ್ಲಿ 11 ಸಾವಿರ ಲೀಟರ್ವರೆಗೆ ಕನಿಷ್ಠ ದರವನ್ನು ನಿಗದಿಪಡಿಸಲಾಗಿದೆ. ಈ ಮಿತಿಗಿಂತ ಜಾಸ್ತಿ ಬಳಕೆ ಮಾಡುತ್ತಾರೆಯೋ ಅವರಿಗೆ ಮಾತ್ರ ಹೆಚ್ಚಿನ ದರ ಅನ್ವಯವಾಗುತ್ತದೆ. ಉಳಿದಂತೆ ಶೇ.80ರಷ್ಟು ಮಂದಿಗೆ ಯಾವುದೇ ಪರಿಣಾಮ ಆಗುವುದಿಲ್ಲ. ನೀರಿನ ಮಿತ ಬಳಕೆ ಮಾಡಬೇಕು ಮತ್ತು ನಿರ್ವಹಣೆಗೆ ಆದಾಯ ಕೂಡ ಬರಬೇಕೆಂಬ ಉದ್ದೇಶದಿಂದ ದರ ಏರಿಕೆ ಮಾಡಲಾಗಿದೆ ಎಂದು ಅವರು ಹೇಳಿದರು.
ಉಡುಪಿ ಜಿಲ್ಲಾಸ್ಪತ್ರೆ ನೂತನ ಕಟ್ಟಡ ಮುಂದಿನ ಆಗಸ್ಟ್ನಲ್ಲಿ ಪೂರ್ಣ ಗೊಳ್ಳಲಿದೆ. ಜಲಜೀವನ್ ಯೋಜನೆಯಡಿ ಬೈಂದೂರು ಮತ್ತು ಕಾರ್ಕಳದಲ್ಲಿ ನೀರಿನ ಮೂಲಗಳನ್ನು ಗುರುತಿಸಲಾಗಿದೆ. ಮಾರ್ಚ್ನಲ್ಲಿ ನೀರಿನ ಸಮಸ್ಯೆ ಎದುರಾಗುವ ಸಾಧ್ಯತೆ ಇರುವುದರಿಂದ ಎಲ್ಲರು ನೀರಿನ ಮಿತ ಬಳಕೆ ಮಾಡಿ ಕೊಳ್ಳಬೇಕು. ರೈತರು ತಮ್ಮ ಬೋರ್ವೆಲ್ಗೆ ರೈನ್ ವಾಟರ್ ಆರ್ವೆಸ್ಟಿಂಗ್ ಮಾಡಿಕೊಳ್ಳಬೇಕು ಎಂದು ಜಿಲ್ಲಾಧಿಕಾರಿ ಮನವಿ ಮಾಡಿದರು.
ನೀರಿನ ಸಮಸ್ಯೆ: 76 ಬೋರ್ವೆಲ್ ಗುರುತು
ಸದ್ಯಕ್ಕೆ ಉಡುಪಿ ಜಿಲ್ಲೆಯಲ್ಲಿ ನೀರಿನ ಸಮಸ್ಯೆ ಅಥವಾ ಕೊರತೆ ಕಂಡು ಬಂದಿಲ್ಲ. ಈ ಸಂಬಂಧ ಪ್ರತಿ ವಾರ ಪರಿಶೀಲನೆ ನಡೆಸುವಂತೆ ತಹಶೀಲ್ದಾರ್ ಗಳಿಗೆ ಸೂಚನೆ ನೀಡಿದ್ದೇವೆ. ಈ ಹಿಂದೆ ನೀರಿನ ಸಮಸ್ಯೆ ಕಂಡುಬಂದ ಪ್ರದೇಶ ಗಳಲ್ಲಿ ಮುಂಜಾಗ್ರತಾ ಕ್ರಮವಾಗಿ ಪಿಡಿಓಗಳು 76 ಬೋರ್ವೆಲ್ಗಳನ್ನು ಗುರುತಿಸಿ ಸಿದ್ಧಪಡಿಸಿದ್ದಾರೆ ಎಂದು ಜಿಲ್ಲಾಧಿಕಾರಿ ಡಾ.ಕೆ.ವಿದ್ಯಾ ಕುಮಾರಿ ತಿಳಿಸಿದರು.
ಯಾವುದೇ ಗ್ರಾಮಗಳಲ್ಲಿಯೂ ಕುಡಿಯುವ ನೀರಿನ ಸಮಸ್ಯೆಯಾದರೆ ಈ ಬೋರ್ವೆಲ್ಗೆ ಪೈಪ್ಲೈನ್ ಮಾಡಿ ನೀರು ಪೂರೈಕೆ ಮಾಡಿಕೊಡಲಾಗುವುದು. ಅದೇ ರೀತಿ ಟ್ಯಾಂಕರ್ ಮೂಲಕ ನೀರು ಕೊಡಲು ಈಗಾಗಲೇ ಟೆಂಡರ್ ಅಂತಿಮ ಮಾಡಲಾಗಿದೆ. ಉಡುಪಿ ನಗರದಲ್ಲಿ ಸದ್ಯ ನೀರಿನ ಸಮಸ್ಯೆ ಇಲ್ಲ ಎಂದರು.