ಬಾಕಿ 5 ಕೋಟಿ ಹಣ ಕೊಟ್ಟರೇ ಮೂರ್ತಿ ತಂದು ಇಡುತ್ತೇವೆ: ನಿರ್ಮಿತಿ ಕೇಂದ್ರದ ಯೋಜನಾ ನಿರ್ದೇಶಕ
ಉಡುಪಿ, ಜ.24: ‘ಪರಶುರಾಮನ ಥೀಮ್ ಪಾರ್ಕ್ನಲ್ಲಿ ಸ್ಥಾಪಿಸಿದ್ದ ಮೂರ್ತಿ ಕಂಚಿನದ್ದೇ ಆಗಿದ್ದು, ಕೊಡಲಿ ಸೇರಿದಂತೆ ಕೆಲವೊಂದು ಬದಲಾವಣೆಗಳಿದ್ದ ಕಾರಣಕ್ಕಾಗಿ ಅಲ್ಲಿಂದ ತೆರವುಗೊಳಿಸಲಾಗಿದೆ. ನಮಗೆ ಬರಬೇಕಾದ ಬಾಕಿ 5 ಕೋಟಿ ರೂ. ಬಂದರೆ ಮೂರ್ತಿಯನ್ನು ತಂದು ಇಡುತ್ತೇವೆ’
ಇದು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ಶಿವರಾಜ್ ತಂಗಡಗಿ ಅಧ್ಯಕ್ಷತೆಯಲ್ಲಿ ಉಡುಪಿ ಜಿಪಂ ಸಭಾಂಗಣದಲ್ಲಿ ಮಂಗಳವಾರ ನಡೆದ ಪ್ರಗತಿ ಪರಿಶೀಲನಾ ಸಭೆಯಲ್ಲಿ ಪರಶುರಾಮ ಥೀಮ್ ಕಾಮಗಾರಿ ನಿರ್ವಹಿಸುತ್ತಿರುವ ನಿರ್ಮಿತಿ ಕೇಂದ್ರದ ಯೋಜನಾಧಿಕಾರಿ ಅರುಣ್ ಕುಮಾರ್ ನೀಡಿರುವ ಹೇಳಿಕೆ.
‘ನೀವು ಪಾರ್ಕ್ನ್ನು ಹಸ್ತಾಂತರ ಮಾಡದಿದ್ದರೆ ಅಷ್ಟು ತರಾತುರಿಯಲ್ಲಿ ಉದ್ಘಾಟನೆ ಮಾಡಿದ್ದು ಯಾಕೆ? ಹಸ್ತಾಂತರ ಮಾಡದಿದ್ದರೆ ವಿಗ್ರಹವನ್ನು ಬಟ್ಟೆಯಲ್ಲಿ ಸುತ್ತಿ ಕವರ್ ಮಾಡಿ ಇಡಬೇಕಿತ್ತು’ ಎಂದು ಸಚಿವರು ಹೇಳಿದರು. ‘ನಾವು ಅವತ್ತೇ ಹೇಳಿದ್ದೇವೆ. ಕೊಡಲಿ ಸೇರಿದಂತೆ ಕೆಲವೊಂದು ಬದಲಾವಣೆ ಮಾಡಲು ಇದೆ ಎಂದು. ಅದರಂತೆ ಈಗ ಮೂರ್ತಿಯನ್ನು ಅಲ್ಲಿಂದ ತೆಗೆದುಕೊಂಡು ಹೋಗಿದ್ದೇವೆ. ಇದೀಗ ಮೂರ್ತಿಯನ್ನು ಬದಲಾವಣೆಯೊಂದಿಗೆ ಸಿದ್ಧ ಪಡಿಸುತ್ತಿದ್ದೇವೆ’ ಎಂದು ಅವರು ಮಾಹಿತಿ ನೀಡಿದರು.
ಉದ್ಘಾಟನೆಗಾಗಿ ಮೂರ್ತಿಯನ್ನು ಇಡಲಾಗಿತ್ತು. ಅದನ್ನು ಮುಖ್ಯಮಂತ್ರಿ ಬಂದು ಉದ್ಘಾಟನೆ ಮಾಡಿದ್ದರು. ನಂತರ ಚುನಾವಣೆ ಬಂದಿರುವುದರಿಂದ ತೆಗೆಯಲು ಆಗಿಲ್ಲ. ಮತ್ತೆ ಮಳೆಗಾಲ ಬಂದ ನಂತರ ತೆಗೆದಿದ್ದೇವೆ ಎಂದು ಅರುಣ್ ಕುಮಾರ್ ತಿಳಿಸಿದರು. ಪರಶುರಾಮ ಮೂರ್ತಿ ಮತ್ತೆ ಯಾವಾಗ ಸ್ಥಾಪಿಸುತ್ತೀರಿ ಎಂಬ ಸಚಿವರ ಪ್ರಶ್ನೆಗೆ, ನಮಗೆ ಬಾಕಿ ಐದು ಕೋಟಿ ರೂ. ಹಣ ಬಂದ ನಂತರ ಇಡುತ್ತೇವೆ ಎಂದು ಅರುಣ್ ಕುಮಾರ್ ಹೇಳಿದರು.
ಅಷ್ಟು ತರಾತುರಿಯಲ್ಲಿ ಉದ್ಘಾಟನೆ ಮಾಡುವ ಅಗತ್ಯ ಏನಿತ್ತು ಎಂಬ ಪ್ರಶ್ನೆಗೆ, ನಾವು ಕೂಡ ಬೇಗ ಆಗಲ್ಲ ಎಂದು ಹೇಳಿದ್ದೇವು. ಆದರೆ ಆಗಲೇಬೇಕು ಎಂದು ನಿರ್ದೇಶನ ನೀಡಿದ್ದರು. ಅದಕ್ಕೆ ಮಾಡಿದ್ದೇವು ಎಂದು ಯೋಜನಾಧಿಕಾರಿ ಉತ್ತರಿಸಿದರು. ನೀವು ಆಗಲೇ ಬೇಕು ಅಂತ ಹೇಳಿದರೆ ಯಾವುದೋ ಪ್ಲಾಸ್ಟಿಕ್ ತಂದು ಹಾಕಿ ಬಿಡುವುದು ಸರಿಯೇ ಎಂದು ಸಚಿವರು ಖಾರವಾಗಿ ಪ್ರಶ್ನಿಸಿದರು. ಅದರಲ್ಲಿ ಪ್ಲಾಸ್ಟಿಕ್ ಇಲ್ಲ, ಸಂಪೂರ್ಣ ಕಂಚಿನದ್ದು. ಬದಲಾವಣೆ ಮಾಡುವುದ ಕ್ಕಾಗಿ ತೆಗೆದಿದ್ದೇವೆ ಎಂದರು.
ಇಡೀ ರಾಜ್ಯದಲ್ಲಿ ಪರಶುರಾಮ ಥೀಮ್ ಪಾರ್ಕ್ ಬಗ್ಗೆ ಚರ್ಚೆಗಳು ನಡೆಯುತ್ತಿವೆ. ಮೂರ್ತಿ ಕಂಚಿನದ್ದಲ್ಲ, ಪೈಬರ್ ಎಂಬ ಆರೋಪಗಳನ್ನು ಮಾಡ ಲಾಗಿದೆ. ಮಳೆಗಾಲದಲ್ಲಿ ಅದು ಬಯಲಾಯಿತು ಎಂದು ಸಚಿವರು ಹೇಳಿದರು. ಈ ರೀತಿ ಸರಕಾರದ ಹಣ ವ್ಯಯ ಮಾಡುವುದು ಹಾಗೂ ಜನರಿಗೆ ಮೋಸ ಮಾಡುವುದು ಸರಿಯಲ್ಲ. ಈ ಕುರಿತು ತನಿಖೆ ನಡೆಯುತ್ತಿದೆ ಎಂದು ಸಚಿವರು ತಿಳಿಸಿದರು.
ಪರಶುರಾಮ ಥೀಮ್ ಪಾರ್ಕ್ಗೆ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯಿಂದ ಒಟ್ಟು 35ಲಕ್ಷ ರೂ. ನೀಡಲಾಗಿತ್ತು. ಅದನ್ನು ರಸ್ತೆ ನಿರ್ಮಾಣ ಹಾಗೂ ಮೂರ್ತಿಯ ಕೆಳಗೆ ಇರುವ ಕಾಂಕ್ರೀಟ್ ಸ್ಲ್ಯಾಬ್ ನಿರ್ಮಿಸಲು ಬಳಸಿಕೊಳ್ಳಲಾಗಿತ್ತು ಎಂದು ಕನ್ನಡ ಸಂಸ್ಕೃತಿ ಇಲಾಖೆಯ ಉಡುಪಿ ಸಹಾಯಕ ನಿರ್ದೇಶಕಿ ಪೂರ್ಣಿಮಾ ಸಭೆಗೆ ತಿಳಿಸಿದರು.