ಜಗದೀಶ್ ಶೆಟ್ಟರ್ ವಿಶ್ವಾಸ ದ್ರೋಹವೆಸಗಿದ್ದಾರೆ: ಡಿ. ಕೆ ಶಿವಕುಮಾರ್
ಬೆಂಗಳೂರು: ಜಗದೀಶ್ ಶೆಟ್ಟರ್ ಅವರನ್ನು ಗೌರವದಿಂದ ನಡೆಸಲಾಗಿದ್ದರೂ ನಮ್ಮ ವಿಶ್ವಾಸಕ್ಕೆ ದ್ರೋಹ ಬಗೆದಿದ್ದಾರೆ ಎಂದು ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಹೇಳಿದ್ದಾರೆ.
ಜಗದೀಶ್ ಶೆಟ್ಟರ್ ಬಿಜೆಪಿ ಸೇರ್ಪಡೆ ವಿಚಾರವಾಗಿ ಮಾಧ್ಯಮಗಳ ಪ್ರಶ್ನೆಗಳಿಗೆ ಉತ್ತರಿಸಿದ ಅವರು, ಕಾಂಗ್ರೆಸ್ ಪಕ್ಷ ಅವರನ್ನು ಒಬ್ಬ ಸೀನಿಯರ್ ಲೀಡರ್ ಅಂತ ಗೌರವದಿಂದ ನಡೆಸಿಕೊಂಡಿತ್ತು. ಕಳೆದ ವಿಧಾನಸಭಾ ಚುನಾವಣೆಯ ವೇಳೆ ಬಿಜೆಪಿಯಿಂದ ಅವಮಾನ ಆಯಿತು ಎಂದು ಕಾಂಗ್ರೆಸ್ಗೆ ಸೇರ್ಪಡೆಯಾಗಿದ್ದರು. ನಾನು ಕಾಂಗ್ರೆಸ್ ಅಧ್ಯಕ್ಷನಾಗಿ ಬಿ ಫಾರಂ ಬರೆದು ಕೊಟ್ಟಿದ್ದೆ. ಚುನಾವಣೆಯಲ್ಲಿ ಸೋತರೂ ಕೂಡ ಕಾಂಗ್ರೆಸ್ ಪಕ್ಷ ಅವರಿಗೆ ಎಂಎಲ್ಸಿ ಸ್ಥಾನ ನೀಡಿ ಗೌರವದಿಂದ ನಡೆಸಿಕೊಂಡಿದೆ ಎಂದರು.
ಶೆಟ್ಟರ್ ಅವರನ್ನು ಒತ್ತಡದಿಂದ ಮತ್ತೆ ಬಿಜೆಪಿಗೆ ಕರೆಸಿಕೊಂಡಿದ್ದಾರೋ ಗೊತ್ತಿಲ್ಲ. ಪಕ್ಷಕ್ಕೆ ರಾಜೀನಾಮೆ ನೀಡಿರುವ ವಿಚಾರ ಕೆಪಿಸಿಸಿ ಕಚೇರಿಯ ಮೂಲಕ ತಿಳಿಯಿತು. ಶೆಟ್ಟರ್ ಅವರೊಂದಿಗೆ ನಿನ್ನೆ ಬೆಳಗ್ಗೆ ಕೂಡ ಇದೇ ವಿಚಾರವನ್ನು ಮಾತನಾಡಿದ್ದೆ. ಆಗ ನಾನು ಮತ್ತೆ ಬಿಜೆಪಿಗೆ ಹೋಗುವ ಕೆಲಸ ಮಾಡುವುದಿಲ್ಲ. ರಾಜಕಾರಣದಲ್ಲಿ ಸ್ಥಾನ ನೀಡುವ ಮೂಲಕ ಕಾಂಗ್ರೆಸ್ ನನಗೆ ಮರುಜೀವ ಕೊಟ್ಟಿದೆ. ಆದ್ದರಿಂದ ಕಾಂಗ್ರೆಸ್ಗೆ ದ್ರೋಹ ಬಗೆಯಲ್ಲ. ಬಿಜೆಪಿಗೆ ಸೇರುವ ಕೆಲಸ ಮಾಡಲ್ಲ ಎಂದಿದ್ದರು. ಅದನ್ನೇ ನಿನ್ನೆ ಮೈಸೂರಿನಲ್ಲಿ ಮಾಧ್ಯಮಗಳಿಗೆ ಹೇಳಿಕೆ ನೀಡಿದ್ದೆ. ಇವತ್ತು ನೋಡಿದರೆ ದೆಹಲಿಗೆ ಹೋಗಿ ಬಿಜೆಪಿಗೆ ಸೇರ್ಪಡೆಯಾಗಿದ್ದಾರೆ ಎಂದು ಹೇಳಿದರು.
ಬಿಜೆಪಿ ಪಕ್ಷ ಒಳ್ಳೆಯದಲ್ಲ. ಕೆಲ ವಿಚಾರಗಳನ್ನು ಬಿಜೆಪಿ ಹೇಗೆ ದುರುಪಯೋಗ ಮಾಡಿಕೊಳ್ಳುತ್ತದೆ ಎಂದು ಅವರೇ ಮೊನ್ನೆ ಹೇಳಿದರು. ಅವರು ಒಬ್ಬ ಸೀನಿಯರ್ ಲೀಡರ್ ಅಂತ ವಿಶ್ವಾಸ ಇಟ್ಟಿದ್ದೆವು. ಆದರೆ ಈಗ ವಿಶ್ವಾಸಕ್ಕೆ ಧಕ್ಕೆ ಆಗಿದೆ. ಎಲ್ಲರಿಗೂ ಆತ್ಮಸಾಕ್ಷಿ ಇರುತ್ತದೆ ಅವರಿಗೂ ಒಂದು ಆತ್ಮಸಾಕ್ಷಿ ಇದೆ. ಅವರಿಗೆ ಏನು ಅನಿಸಿದೆಯೋ? ಯಾವ ಒತ್ತಡ ಇದೆಯೋ. ಅವರು ಯಾವ ಒತ್ತಡದ ಮೂಲಕ ಹೋಗಿದ್ದಾರೋ ಬಲವಂತ ಮಾಡಿದ್ದಾರೋ ಗೊತ್ತಿಲ್ಲ. ಅವರು ಏನು ಹೇಳಿಕೆ ಕೊಡುತ್ತಾರೆ ಕೊಡಲಿ ಆಮೇಲೆ ಮಾತನಾಡುತ್ತೇವೆ ಎಂದರು.
ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ಬಿಜೆಪಿಯವ ರು ಕಾರ್ಯಕರ್ತರನ್ನು ಕಳಿಸಿ ಮಾತನಾಡುತ್ತಿದ್ದಾರೆ ಅಂತ ನನ್ನ ಬಳಿ ಬಂದು ಹೇಳಿದ್ದರು. ಜನ ಅವರನ್ನು ತಿರಸ್ಕರಿಸಿದರೂ ಕೂಡ ನಾವು ಬಹಳ ಗೌರವದಿಂದ ನಡೆಸಿಕೊಂಡಿದ್ದೇವೆ. ಕಾಂಗ್ರೆಸ್ ಪಾರ್ಟಿ ಐದು ವರ್ಷದ ಎಂಎಲ್ಸಿ ಸ್ಥಾನವನ್ನು ಗೌರವದಿಂದ ಅವರಿಗೆ ನೀಡಿತ್ತು. ಇದು ಆತ್ಮಸಾಕ್ಷಿ ವಿಚಾರ ಜನ ತೀರ್ಮಾನ ಮಾಡುತ್ತಾರೆ. ಅವರೇನು ಮಾಡ್ತಾರೆ ಮಾಡಲಿ ಆಮೇಲೆ ಮಾತನಾಡುತ್ತೇನೆ ಎಂದರು.
ಅವರಿಗೆ ಆಮಿಷ ಕೊಟ್ಟಿದ್ದಾರೆ ಏನು ಅನ್ನೋದನ್ನ ಅವರೇ ಹೇಳಬೇಕು. ಸಂಘ ಪರಿವಾರದವರಾಗಿದ್ದರೆ ಸಂಘ ಬಿಟ್ಟು ಕಾಂಗ್ರೆಸ್ ಸೇರುತ್ತಿದ್ದರಾ? ಅವರಿಗೆ ಸೀಟು ತಪ್ಪಿಸುವಾಗ ದೇಶದ ಹಿತ ಗೊತ್ತಿರಲಿಲ್ವಾ? ಎಂದು ಪ್ರಶ್ನಿಸಿದರು.
It’s a matter of suitcase, and it’s sure that this is the end of JS political career He lost the faith of his own people.