ಯಕ್ಷಗಾನ, ತಾಳಮದ್ದಲೆ, ನಾಟಕ ಕಲೆಗಳು ಎಲ್ಲರನ್ನು ಒಗ್ಗೂಡಿಸುತ್ತದೆ- ಜಯಂತ್ ಕಾಯ್ಕಿಣಿ
ಉಡುಪಿ, ಜ.25: ಕಲೆ ಎಲ್ಲರನ್ನೂ ಒಗ್ಗೂಡಿಸುವ ಪ್ರಭಲ ಮಾಧ್ಯಮವಾಗಿದೆ ಎಂದು ಸಾಹಿತಿ ಜಯಂತ್ ಕಾಯ್ಕಿಣಿ ಅವರು ಹೇಳಿದ್ದಾರೆ.
ಉಡುಪಿ ಸಂಸ್ಕೃತಿ ವಿಶ್ವ ಪ್ರತಿಷ್ಠಾನದ ವತಿಯಿಂದ ಉಡುಪಿ ಎಂಜಿಎಂ ಕಾಲೇಜು ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಕಾರದಲ್ಲಿ ಎಂಜಿಎಂ ಕಾಲೇಜಿನ ಮುದ್ದಣ ಮಂಟಪದಲ್ಲಿ ನಡೆದ ಸಂಸ್ಕೃತಿ ಉತ್ಸವದಲ್ಲಿ ಮಾತನಾಡಿದ ಅವರು, ಕಲೆ ಸಂಯುಕ್ತ ವಿಕಸನದ ಮಾರ್ಗವಾಗಿದೆ. ಕಲೆ ಎಲ್ಲರನ್ನೂ ಒಂದು ಗೂಡಿಸುವ ಮಾಧ್ಯಮವಾಗಿದೆ. ಸಾಹಿತ್ಯ ಶಿಕ್ಷಣಗಳು ಜ್ಞಾನವರ್ಜನೆಗೆ ಪೂರಕವಾಗಿದೆ ಎಂದು ಹೇಳಿದರು.
ಇಂದಿನ ಮೊಬೈಲ್ ಯುಗದಲ್ಲಿ ಮನುಷ್ಯರಿಗೆ ಮನುಷ್ಯರೇ ಬೇಡವಾಗಿದ್ದಾರೆ. ಇದು ಮನುಷ್ಯರೇ ಮಾಡಿ ಕೊಂಡಿರುವ ಶಾಪ. ಆದರೆ ಯಕ್ಷಗಾನ, ತಾಳಮದ್ದಲೆ, ನಾಟಕದಂತಹ ಕಲೆಗಳು ಎಲ್ಲರನ್ನು ಹತ್ತಿರವಾಗಿಸುವ ಕೆಲಸ ಮಾಡುತ್ತದೆ ಎಂದರು.
ಕಾರ್ಯಕ್ರಮದಲ್ಲಿ ಸಾಹಿತಿ ಜಯಂತ್ ಕಾಯ್ಕಿಣಿ ಅವರಿಗೆ ಪ್ರಭಾವತಿ ಉಡುಪಿ ವಿಶ್ವನಾಥ ಶೆಣೈ ಪ್ರಾಯೋಜಿತ ವಿಶ್ವಪ್ರಭಾ ಪುರಸ್ಕಾರ ನೀಡಿ ಗೌರವಿಸಲಾಯಿತು.
ವಿಜ್ಞಾನಿ ನಾಡೋಜ ಪ್ರೊ.ಕೆ.ಪಿ.ರಾವ್ ಅವರು ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದರು.
ಸಾಹಿತಿ ಡಾ.ಕಾತ್ಯಾಯಿನಿ ಕುಂಜಿಬೆಟ್ಟು, ಸಂಸ್ಕೃತಿ ವಿಶ್ವ ಪ್ರತಿಷ್ಠಾನದ ಸ್ಥಾಪಕ ವಿಶ್ವನಾಥ್ ಶೆಣೈ, ಅಧ್ಯಕ್ಷ ಪ್ರೊ.ಶಂಕರ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕಿ ಪೂರ್ಣಿಮಾ, ಗಾಂಧಿ ಆಸ್ಪತ್ರೆಯ ಆಡಳಿತ ನಿರ್ದೇಶಕ ಡಾ.ಹರಿಶ್ಚಂದ್ರ, ಪ್ರಭಾವತಿ ಶೆಣೈ, ವಿಶ್ವಪ್ರಭಾ ಪುರಸ್ಕಾರ ಸಮಿತಿಯ ಸಂಚಾಲಕ ನಾಗರಾಜ್ ಹೆಬ್ಬಾರ್, ಪ್ರತಿಷ್ಠಾನದ ಸಂಚಾಲಕ ರವಿರಾಜ್ ಎಚ್.ಪಿ, ಶಿಲ್ಪಾ ಜೋಷಿ ಉಪಸ್ಥಿತರಿದ್ದರು.