ಹೂಡಿಕೆಯಿಂದ ಲಾಭಾಂಶದ ಆಮಿಷ: ಕಾರ್ಕಳದ ವ್ಯಕ್ತಿಗೆ 43.43 ಲ.ರೂ. ವಂಚನೆ
ಉಡುಪಿ ಜ.23(ಉಡುಪಿ ಟೈಮ್ಸ್ ವರದಿ): ಹೂಡಿಕೆಯಿಂದ ಹೆಚ್ಚಿನ ಲಾಭಾಂಶ ಪಡೆಯುವ ಬಗ್ಗೆ ಆಸೆ ತೋರಿಸಿ ವ್ಯಕ್ತಿಯೊಬ್ಬರಿಗೆ 43.43 ಲಕ್ಷ ರೂ. ವಂಚಿಸಿರುವ ಬಗ್ಗೆ ಉಡುಪಿ ಸೆನ್ ಠಾಣೆಯಲ್ಲಿ ದೂರು ದಾಖಲಾಗಿದೆ.
ಪರ್ಕಳದ ಯತಿರಾಜ್ ಅವರು ತಮಗಾದ ವಂಚನೆ ಬಗ್ಗೆ ಪೊಲೀಸರಿಗೆ ದೂರು ನೀಡಿದ್ದು, ಅದರಂತೆ ಕಳೆದ ತಿಂಗಳು ಯತಿರಾಜ್ ಅವರಿಗೆ ಟೆಲಿಗ್ರಾಂ ಆ್ಯಪ್ ನಲ್ಲಿ ಪಾರ್ಟ್ ಟೈಮ್ ಜಾಬ್ ಬಗ್ಗೆ ಸಂದೇಶ ಬಂದಿತ್ತು. ಅದರಲ್ಲಿ ಟಾಸ್ಕ್ ಮೂಲಕ ಹಣ ಗಳಿಸುವ ಬಗ್ಗೆ ಹಾಗೂ ಸೋಕರ್ ಎಂಬ ಆ್ಯಪ್ ನಲ್ಲಿ ಹಣ ಹೂಡಿಕೆಯಿಂದ ಹೆಚ್ಚಿನ ಲಾಭಾಂಶ ಪಡೆಯ ಬಹುದೆಂದು ಆರೋಪಿಗಳು ಆಸೆ ತೋರಿಸಿ ನಂಬಿಸಿದ್ದರು. ಇದನ್ನು ನಂಬಿದ ಯತಿರಾಜ್ ಅವರು ಆರೋಪಿಗಳು ಸೂಚಿಸಿದ ವಿವಿಧ ಬ್ಯಾಂಕ್ ಖಾತೆಗಳಿಗೆ ಹಂತ ಹಂತವಾಗಿ ಒಟ್ಟು 43,43,596 ರೂ. ಹಣವನ್ನು ವರ್ಗಾಯಿಸಿದ್ದರು. ಆದರೆ ಆರೋಪಿಗಳು ಯತಿರಾಜ್ ಅವರು ಹೂಡಿಕೆ ಮಾಡಿದ ಹಣವನ್ನಾಗಲಿ ಅಥವಾ ಲಾಭಾಂಶವನ್ನಾಗಲಿ ನೀಡದೇ ನಂಬಿಸಿ ವಂಚಿಸಿದ್ದಾರೆ ಎಂಬುದಾಗಿ ನೀಡಿದ ದೂರಿನಂತೆ ಸೆನ್ ಅಪರಾಧ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.