ದಂಪತಿ ಮಧ್ಯೆ ಒಡಕು ಮೂಡಿಸುವ ಪ್ರವೃತ್ತಿ ಸಲ್ಲದು- ಪುತ್ತಿಗೆ ಶ್ರೀ
ಉಡುಪಿ: ನಾರಿಯರ ಶಕ್ತಿಯನ್ನು ಜಗತ್ತಿಗೆ ತೋರಿಸಿಕೊಟ್ಟ ಸೀತೆ, ದ್ರೌಪದಿ, ಅಹಳ್ಯೆ, ತಾರಾ, ಮಂಡೋದರಿ ಅವರನ್ನು ಸ್ಮರಿಸಬೇಕಾಗಿರುವುದು ಪುರುಷರ ಜವಾಬ್ದಾರಿಯಾಗಿದೆ. ಅವರ ಆದರ್ಶವನ್ನು ಪುರುಷರು ನೆನಪಿನಲ್ಲಿ ಇಟ್ಟುಕೊಂಡು ಮಹಿಳಾ ಶೋಷಣೆಯನ್ನು ಮಾಡಬಾರದು. ಮಹಿಳೆಯರು ತಮ್ಮ ಬದುಕಿನಲ್ಲಿ ಎದುರಾಗುವ ಸಮಸ್ಯೆಗಳನ್ನು ಮೆಟ್ಟಿ ನಿಲ್ಲಲು ಪೌರುಷ ಮುಖ್ಯ ಎಂದು ಪರ್ಯಾಯ ಪುತ್ತಿಗೆ ಮಠಾಧೀಶ ಶ್ರೀಸುಗುಣೇಂದ್ರ ತೀರ್ಥ ಸ್ವಾಮೀಜಿ ಹೇಳಿದ್ದಾರೆ.
ಪರ್ಯಾಯ ಪುತ್ರಿಗೆ ಮಠ ಶ್ರೀಕೃಷ್ಣ ಮಠದ ಆಶ್ರಯದಲ್ಲಿ ರಾಜಾಂಗಣದಲ್ಲಿ ರವಿವಾರ ಸುಶಾಸನ ಉಡುಪಿ ಪ್ರಸ್ತುತ ಪಡಿಸಿದ ನಾರೀ ಶಕ್ತಿ ಯಕ್ಷಗಾನ ತಾಳಮದ್ದಲೆ ಕಾರ್ಯಕ್ರಮವನ್ನು ನವ ದಂಪತಿಯ ಸಮ್ಮುಖದಲ್ಲಿ ಉದ್ಘಾಟಿಸಿ ಅವರು ಆಶೀರ್ವಚನ ನೀಡಿದರು.
ಗಂಡ ಹೆಂಡತಿಯರನ್ನು ನಾವು ಒಂದಾಗಿ ನೋಡಬೇಕೆ ಹೊರತು ನಮ್ಮ ಬೇಳೆ ಬೇಯಿಸಿಕೊಳ್ಳಲು ಒಬ್ಬರನ್ನು ಹೊಗಳಿ ಇನ್ನೊಬ್ಬರನ್ನು ತೆಗಲುವುದು ಸರಿಯಲ್ಲ. ಅವರ ಒಗ್ಗಟ್ಟಿಗೆ ಭಂಗ ತರಬಾರದು. ದಂಪತಿ ಮಧ್ಯೆ ಒಡಕು ಮೂಡಿಸುವ ಪ್ರವೃತ್ತಿ ಸಲ್ಲದು. ಅವರ ಒಗ್ಗಟ್ಟು ರಕ್ಷಣೆ ಮಾಡುವುದು ಪ್ರತಿಯೊಬ್ಬರ ಜವಾಬ್ದಾರಿ. ಆಗ ಕೌಟುಂಬಿಕವಾಗಿ ಮತ್ತು ಸಾಮಾಜಿಕವಾಗಿ ಸಾಮರಸ್ಯ ಮೂಡಲು ಸಾಧ್ಯ ಎಂದು ಅವರು ತಿಳಿಸಿದರು.
ಪುತ್ತಿಗೆ ಕಿರಿಯ ಯತಿ ಶ್ರೀಸುಶೀಂದ್ರ ತೀರ್ಥ ಸ್ವಾಮೀಜಿ, ಸೌಜನ್ಯ ಮತ್ತು ಗೋಪಾಲಕೃಷ್ಣ ಅಸ್ಪಣ್ಣ, ಬೃಂದಾ ಮತ್ತು ಡಾ.ಐ.ಜಿ.ಭಟ್,ಮೈತಿಲಿ ಮತ್ತು ರಾಮಪ್ರಸಾದ್ ರಾವ್, ನಿರ್ಮಿತಿ ಮತ್ತು ಪಟ್ಲ ಸತೀಶ್ ಶೆಟ್ಟಿ, ಮಿತ್ರಾ ಮತ್ತು ಡಾ.ಶ್ರೀನಿವಾಸ ರಾವ್, ಭವ್ಯಶ್ರೀ ಕಿದಿಯೂರು ಮತ್ತು ಡಾ.ಅಬಿನ್ ದೇವದಾಸ್, ಆಶಾ ಮತ್ತು ಪ್ರೊ.ಪವನ್ ಕಿರಣ್ಕೆರೆ, ದೀಕ್ಷಾ ಮತ್ತು ಸುದರ್ಶನ ಭಟ್ ಆಲಂಗಾರು, ಡಾ.ದಿವ್ಯಾ ಮತ್ತು ಸರ್ತಜಿತ್ ಭಾರ್ಗವ್, ಸುಧಾಕರ್ ಆಚಾರ್ಯ ಮತ್ತು ಅಮಿತಾ ಆಚಾರ್ಯ, ವಿವೇಕ್ ಆಳ್ವ ಉಪಸ್ಥಿತರಿದ್ದರು. ಹಿರಿಯ ಪತ್ರಕರ್ತ ಮನೋಹರ್ ಪ್ರಸಾದ್ ಹಾಗೂ ಪೂರ್ಣಿಮ ಸುರೇಶ್ ಕಾರ್ಯಕ್ರಮ ನಿರೂಪಿಸಿದರು.