ಬಂಗಾಳಕೊಲ್ಲಿಯಲ್ಲಿ ವಾಯುಭಾರ ಕುಸಿತ: ಆಂಧ್ರಪ್ರದೇಶದಲ್ಲಿ ಭಾರೀ ಮಳೆ, 2 ಸಾವು

ವಿಜಯವಾಡ: ಬಂಗಾಳಕೊಲ್ಲಿಯಲ್ಲಿ ವಾಯುಭಾರ ಕುಸಿತ ಉಂಟಾದ ಪರಿಣಾಮ ಆಂಧ್ರಪ್ರದೇಶ, ತೆಲಂಗಾಣ, ವಿಜಯನಗರಂ, ನೆಲ್ಲೂರು, ಚಿತ್ತೂರು, ಅನಂತಪುರಂ, ಗುಂಟೂರು, ವಿಶಾಖಪಟ್ಟಣಂ ಸೇರಿ ಹಲವೆಡೆ ಭಾರಿ ಮಳೆಯಾಗುತ್ತಿದ್ದು, ಪರಿಣಾಮ ಇಬ್ಬರು ಸಾವನ್ನಪ್ಪಿರುವ ಘಟನೆಗಳು ವರದಿಯಾಗಿವೆ. 

ವಿಶಾಖಪಟ್ಟಣದ ನರ್ಶಿಪಟ್ನಂ-ತೂನಿ ಹೆದ್ದಾರಿಯಲ್ಲಿ ಮಹಿಳೆಯೊಬ್ಬರು ನೀರಿನಲ್ಲಿ ಕೊಚ್ಚಿಹೋಗಿ ಸಾವನ್ನಪ್ಪಿದ್ದು, ಮೃತ ಮಹಿಳೆಯನ್ನು ಜಿ ದೇವಿ (58) ಎಂದು ಗುರ್ತಿಸಲಾಗಿದೆ. ಮಹಿಳೆ ನರ್ಸಿಪಟ್ಟಣಂದಿಂದ ತಿರುಪತಿಗೆ ಕಾರಿನಲ್ಲಿ ಸಂಬಂಧಿಕರಾದ ಅರ್ಚನಾ (28), ದೀಪಕ್ (34), ವೆಂಕಟೇಶ್ (30) ಎಂಬುವವರ ಜೊತೆಗೆ ತೆರಳುತ್ತಿದ್ದರು. ಈ ವೇಳೆ ಕಾರು ನೀರಿನಲ್ಲಿ ಕೊಚ್ಚಿಹೋಗಿತ್ತು. ಕಾರಿನೊಳಗಿದ್ದ ದೀಪಕ್, ಅರ್ಚನಾ, ವೆಂಕಟೇಶ್ ಅವರು ಅದೃಷ್ಟವಶಾತ್ ಪ್ರಾಣಾಪಾಯದಿಂದ ತಪ್ಪಿಸಿಕೊಂಡಿದ್ದರು. ಆದರೆ, ದೇವಿಯವರು ಕಾರಿನೊಂದಿಗೆ ಕೊಚ್ಚಿ ಹೋಗಿದ್ದರು. ಘಟನೆ ಬಳಿಕ ಕೂಡಲೇ ಸ್ಥಳಕ್ಕಾಗಮಿಸಿದ ಅಗ್ನಿಶಾಮಕ ದಳದ ಸಿಬ್ಬಂದಿಗಳು ಮೂವರನ್ನು ರಕ್ಷಣೆ ಮಾಡಿದ್ದಾರೆ. 

ಇನ್ನು ವಿಜಯವಾಡದ ಇಂದ್ರಕೀಳಾದ್ರಿ ಬೆಟ್ಟದಲ್ಲಿ ಭೂಕುಸಿತ ಉಂಟಾಗಿದ್ದು, ಈ ವೇಳೆ ಬಂಡೆಯೊಂದು ಉರುಳಿ ಬಂದು ಮನೆಗೆ ನುಗ್ಗಿದೆ. ಪರಿಣಾಮ ಮನೆಯಲ್ಲಿದ್ದ ವ್ಯಕ್ತಿಯೊಬ್ಬರು ಗಂಭೀರವಾಗಿ ಗಾಯಗೊಂಡಿದ್ದರು. ಕೂಡಲೇ ಸ್ಥಳಕ್ಕಾಗಮಿಸಿದ ಪೊಲೀಸರು ಅವಶೇಷಗಳಡಿ ಸಿಲುಕಿದ್ದ ವ್ಯಕ್ತಿಯನ್ನು ಆಸ್ಪತ್ರೆಗೆ ಸಾಗಿಸಿದ್ದಾರೆ. ಆದರೆ, ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದಾರೆಂದು ತಿಳಿದುಬಂದಿದೆ. 

ಕಾಕಿನಾಡ ಕರಾವಳಿ ಪ್ರದೇಶದಲ್ಲಿ 17 ಕಿ.ಮೀ ವೇಗದಲ್ಲಿ ಗಾಳಿ ಬೀಸುತ್ತಿದ್ದು, ಕಾಲಕಳೆಯುತ್ತಿದ್ದಂತೆಯ ಇದರ ತೀವ್ರತೆ ಕಡಿಮೆಯಾಗಲಿದೆ ಎಂದು ಹವಾಮಾನ ಇಲಾಖೆ ಮಾಹಿತಿ ನೀಡಿದೆ. 

ನಿರಂತರವಾಗಿ ಮಳೆ ಸುರಿಯುತ್ತಿರುವುದರಿಂದ ವಿಶಾಖಪಟ್ಟಣಂ, ಪೂರ್ವ ಗೋದಾವರಿ, ಪಶ್ಚಿಮ ಗೋದಾವರಿ, ಕೃಷ್ಣ ಮತ್ತು ಗುಂಟೂರು ಜಿಲ್ಲೆಗಳಲ್ಲಿ ಜನಜೀವನ ಸಂಪೂರ್ಣವಾಗಿ ಅಸ್ತವ್ಯಸ್ತಗೊಂಡಿದೆ. ಕಾಕಿನಾಡ ಬಳಿಯ ಯಾನಂನಲ್ಲಿ 25 ಸೆಂ.ಮೀ ಮಳೆಯಾಗಿದ್ದು, ಪೂರ್ವ ಗೋದಾವರಿ ಜಿಲ್ಲೆಯ ಅಮಲಪುರಂನಲ್ಲಿ 19 ಸೆಂ.ಮೀ, ಪಶ್ಚಿಮ ಗೋದಾವರಿಯ ತನುಕುನಲ್ಲಿ 18 ಸೆಂ.ಮೀ, ವಿಶಾಖಪಟ್ಟಣದ ಭೀಮುನಿಪಟ್ನಂ, ಕೈಕಲೂರು, ಕೃಷ್ಣ ಜಿಲ್ಲೆಯ ತಿರುವೂರು, ಪಲಾಸ ಮತ್ತು ಇಚಾಪುರಂ ಶ್ರೀಕಾಕುಲಂ ಜಿಲ್ಲೆಯಲ್ಲಿ 15 ಸೆಂ.ಮೀ ಮಳೆಯಾಗಿದೆ. 

ಶ್ರೀಕಕುಳಂ, ವಿಶಾಖಪಟ್ಟಣಂ, ವಿಜಯನಗರಂ, ಪೂರ್ವ ಗೋದಾವರಿ, ಪಶ್ಚಿಮ ಗೋದಾವರಿ ಕೃಷ್ಣ ಜಿಲ್ಲೆ, ಮತ್ತು ಕೃಷ್ಣ ಜಿಲ್ಲೆಯ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಭಾರಿ ಮಳೆಯಾಗಿದ್ದರೆ,  ಕರ್ನೂಲ್, ಚಿತ್ತೂರು, ಅನಂತಪುರ, ಮತ್ತು ಕಡಪಾ ಜಿಲ್ಲೆಗಳಲ್ಲಿ ಮಧ್ಯಮ ಪ್ರಮಾಣದ ಮಳೆಯಾಗಿದೆ. 

ಶ್ರೀಕಾಕುಳಂ ಜಿಲ್ಲೆಯಲ್ಲಿ ರಾತ್ರಿಯಿಂದ ಸುರಿದ ಮಳೆಗೆ ಜನ ಜೀವನ ತತ್ತರಿಸಿದೆ. ಭಾರಿ ಅನಾಹುತಗಳು ಸಂಭವಿಸಿವೆ. ತಗ್ಗು ಪ್ರದೇಶದ ಮನೆಗಳಿಗೆ ನೀರು ನುಗ್ಗಿದೆ. ಅನೇಕ ಮನೆಗಳು,ಜಲಾವೃತಗೊಂಡಿವೆ. ಇನ್ನು 4 ಗಂಟೆಗಳ ಕಾಲ ಇದೇ ಸ್ಥಿತಿ ಮುಂದುವರೆಯುವುದಾಗಿ ಹವಾಮಾನ ಇಲಾಖೆ ತಿಳಿಸಿದೆ. ಜೊತೆಗೆ ಜನರು ಸುರಕ್ಷಿತ ಸ್ಥಳಗಳಿಗೆ ತೆರಳಲು ಹಾಗೂ ಜಾಗೃತರಾಗಿರಲು ಅಧಿಕಾರಿಗಳಿಗೆ ಎಚ್ಚರಿಸಲಾಗಿದೆ.

Leave a Reply

Your email address will not be published. Required fields are marked *

error: Content is protected !!