ಕುಂದಾಪುರ: ಹೋಂ ಕ್ವಾರಂಟೈನ್ ನಿಂದ ಹೆಚ್ಚಿದ ಸೀಲ್‌ಡೌನ್ ಪ್ರದೇಶ
ಕುಂದಾಪುರ : ಹೊರ ರಾಜ್ಯಗಳಿಂದ ಬಂದು ಕ್ವಾರಂಟೈನ್ ಮುಗಿಸಿ ಮನೆಗೆ ತೆರಳಿದ್ದ ವ್ಯಕ್ತಿಗಳ ಪರೀಕ್ಷಾ ವರದಿ ಪಾಸಿಟಿವ್ ಬಂದ ಹಿನ್ನೆಲೆಯಲ್ಲಿ ಕುಂದಾಪುರ ಮತ್ತು ಬೈಂದೂರು ತಾಲ್ಲೂಕಿನ 9 ಪ್ರದೇಶಗಳನ್ನು ಸೀಲ್‌ಡೌನ್ ಮಾಡಲಾಗಿದೆ. ಕುಂದಾಪುರ ಪುರಸಭೆ ವ್ಯಾಪ್ತಿಯ ಕೋಡಿ, ಹುಂಚಾರುಬೆಟ್ಟು ಗ್ರಾಮಾಂತರ ಪ್ರದೇಶಗಳಾದ ಬಸ್ರೂರು, ನೇರಳಕಟ್ಟೆ ಗುಜ್ಜಾಡಿ, ಹಳ್ನಾಡು,ಬೆಣ್ಗ್ಗೆರೆ, ಬೈಂದೂರು ತಾಲ್ಲೂಕಿನ ಬಡಾಕೆರೆ ಮತ್ತು ಕಿರಿಮಂಜೇಶ್ವರ ಪ್ರದೇಶಗಳಲ್ಲಿ ಜನ ಸಂಚಾರಕ್ಕೆ ನಿರ್ಬಂಧ ವಿಧಿಸಲಾಗಿದೆ. ಸೋಂಕು ಪತ್ತೆಯಾದವರ ಮನೆ ಇರುವ ಪ್ರದೇಶದ 100 ಮೀ. ಸುತ್ತಳತೆಯಲ್ಲಿ ಸಂಚಾರ ಮತ್ತಿತರ ಚಟುವಟಿಕೆ ನಿರ್ಬಂಧಿಸಲಾಗಿದೆ. ಈ ಪ್ರದೇಶಗಳಿಗೆ ಕಂದಾಯ, ಪೊಲೀಸ್ ಮತ್ತು ಆರೋಗ್ಯ ಇಲಾಖೆಯ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಅಗತ್ಯ ಕ್ರಮ ಕುಂದಾಪುರ, ಬೈಂದೂರು 9 ಕಡೆ ಸೋಂಕು ಪತ್ತೆಯಾದ ಪ್ರದೇಶಗಳಿಗೆ ಅಧಿಕಾರಿಗಳು ಭೇಟಿ ನೀಡಿ ಅಗತ್ಯ ಕ್ರಮ ಕೈಗೊಂಡಿದ್ದಾರೆ. ಅದೇ ರೀತಿ ಕೋಟ ಬಾರಿಕೆರೆಯ ಮಹಿಳೆ 14 ದಿನಗಳ ಕ್ವಾರಂಟೈನ್ ಮುಗಿಸಿ ಮನೆಗೆ ಬಂದಿದ್ದು, ಇದೀಗ ಕೋವಿಡ್-19 ಸೋಂಕು ದೃಢಪಟ್ಟಿದೆ. ಈ ಹಿನ್ನೆಲೆಯಲ್ಲಿ ಮಹಿಳೆಯನ್ನು ಉಡುಪಿಯ ಕೋವಿಡ್ ಆಸ್ಪತ್ರೆಗೆ ದಾಖಲಿಸಲಾಗಿದೆ. ವಂಡಾರು ಗ್ರಾಮದ ಮಾರ್ವಿಯಲ್ಲಿ ಪೂನದಿಂದ ಆಗಮಿಸಿದ ಒಂದೂವರೇ ವರ್ಷದ ಮಗು ಕೂಡಾ ಸೋಂಕಿಗೆ ಒಳಗಾಗಿದೆ. ಇದೀಗ ಕೋಟತಟ್ಟು ಗ್ರಾ.ಪಂ. ವ್ಯಾಪ್ತಿಯ ಬಾರಿಕೆರೆಯ 100 ವ್ಯಾಪ್ತಿಯ 12 ಮನೆ ಮತ್ತು ವಂಡಾರು ಮಾರ್ವಿಯನ್ನು ಸೀಲ್ ಡೌನ್ ಮಾಡಲಾಗಿದೆ. ಈ ಪ್ರದೇಶಗಳಿಗೆ ಅಧಿಕಾರಿಗಳು ಭೇಟಿ ನೀಡಿ ಅಗತ್ಯ ಕ್ರಮ ಕೈಗೊಂಡಿದ್ದಾರೆ |