ಉಡುಪಿ: ಜ.23ರಂದು ಅಂಗನವಾಡಿ ನೌಕರರಿಂದ ಸಂಸದರ ಕಚೇರಿ ಚಲೋ
ಉಡುಪಿ: ಅಂಗನವಾಡಿ ಕಾರ್ಯಕರ್ತರು,ಬಿಸಿಯೂಟ ನೌಕರರು ಬಹುಕಾಲದ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ಎರಡೂ ಸಂಘಟನೆಗಳ ನೌಕರರು ಜನವರಿ 23 ಮಂಗಳವಾರ ಮಣಿಪಾಲದ ಜಿಲ್ಲಾಧಿಕಾರಿ ಕಚೇರಿ ಸಂಕೀರ್ಣದಲ್ಲಿರುವ ಉಡುಪಿ-ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದ ಸದಸ್ಯೆ, ಕೇಂದ್ರ ಸಚಿವ ಶೋಭಾ ಕರಂದ್ಲಾಜೆ ಅವರ ಕಚೇರಿ ಎದುರು ಧರಣಿ ಸತ್ಯಾಗ್ರಹ ನಡೆಸಲಿದ್ದಾರೆ ಎಂದು ಸಂಘದ ಜಿಲ್ಲಾ ಘಟಕದ ಪ್ರಧಾನ ಕಾರ್ಯದರ್ಶಿ ಸುಶೀಲ ನಾಡ ತಿಳಿಸಿದ್ದಾರೆ.
ಉಡುಪಿಯಲ್ಲಿಂದು ಕರೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಜ.23ರಂದು ದೇಶಾದ್ಯಂತ ಎಲ್ಲಾ ಸಂಸದರ ಕಚೇರಿ ಎದುರು ಪ್ರತಿಭಟನಾ ಧರಣಿ ನಡೆಯಲಿದೆ. ಕರ್ನಾಟಕದಲ್ಲೂ ಎಲ್ಲಾ 28 ಸದಸ್ಯರ ಕಚೇರಿ ಎದುರು ಧರಣಿ ನಡೆಸಲಿದ್ದೇವೆ. ಜ.23ರಂದು ಬೆಳಗ್ಗೆ 10ಗಂಟೆಯಿಂದ 24ರ ಮುಂಜಾನೆ 5 ಗಂಟೆಯವರೆಗೆ ನಮ್ಮ ನಿರಂತರ ಧರಣಿ ನಡೆಯಲಿದೆ. ಎಲ್ಲಾ ಮಹಿಳೆಯರು ರಾತ್ರಿಯನ್ನು ಸಂಸದರ ಕಚೇರಿ ಎದುರು ಕಳೆಯಲಿದ್ದಾರೆ ಎಂದರು.
ಜ.23ರಂದು ಒಂದು ದಿನ ಎಲ್ಲಾ ಅಂಗನವಾಡಿಗಳನ್ನು ಮುಚ್ಚಿ ಹಾಗೂ ಶಾಲೆಯಲ್ಲಿ ಬಿಸಿಯೂಟ ತಯಾರಿಯನ್ನು ನಿಲ್ಲಿಸಿ ಜಿಲ್ಲೆಯ 2460ರಷ್ಟು ಅಂಗನವಾಡಿ ಕಾರ್ಯಕರ್ತರು ಹಾಗೂ ಸಹಾಯಕಿಯರು ಮತ್ತು 2000ದಷ್ಟು ಬಿಸಿಯೂಟ ನೌಕರರು ಧರಣಿಯಲ್ಲಿ ಪಾಲ್ಗೊಳ್ಳಲಿದ್ದಾರೆ. ಆದರೆ 24ರಂದು ಎಂದಿನಂತೆ ಅವರು ಕರ್ತವ್ಯಕ್ಕೆ ಹಾಜರಾಗಲಿದ್ದಾರೆ ಎಂದ ಸುಶೀಲ ನಾಡ ತಿಳಿಸಿದರು.
ಅಂಗನವಾಡಿ ನೌಕರರು ಕಳೆದ 49 ವರ್ಷಗಳಿಂದ ಹಾಗೂ ಬಿಸಿಯೂಟ ನೌಕರರು ಕಳೆದ 21 ವರ್ಷಗಳಿಂದ ಸರಕಾರಿ ನೌಕರರಾಗಿದುಡಿಯುತಿದ್ದರೂ ಕನಿಷ್ಠ ವೇತನ, ಪಿಎಫ್, ಇಎಸ್ಐ ಸೇರಿದಂತೆ ಯಾವುದೇ ಸೌಲಭ್ಯಗಳಿಲ್ಲದೇ ಈಗಲೂ ದುಡಿಯುತಿದ್ದಾರೆ. ನಿವೃತ್ತಿ ನಂತರದ ಪಿಂಚಣಿಯೂ ಅವರಿಗೆ ಸ ಸಿಗುತ್ತಿಲ್ಲ ಎಂದು ಅವರು ದೂರಿದರು.
ದೇಶದಲ್ಲಿ 14 ಲಕ್ಷ ಅಂಗನವಾಡಿಗಳಿದ್ದು, ಇವುಗಳಲ್ಲಿ 28 ಲಕ್ಷ ಕಾರ್ಯಕರ್ತರು ಹಾಗೂ ಸಹಾಯಕಿಯರು ದುಡಿಯುತಿ ದ್ದಾರೆ. 11 ಕೋಟಿಯಷ್ಟು ಮಕ್ಕಳು ಅಂಗನವಾಡಿಯಲ್ಲಿದ್ದಾರೆ. ಇದರೊಂದಿಗೆ ಎಂಟು ಕೋಟಿ ಗರ್ಭಿಣಿಯರು ಹಾಗೂ ಬಾಣಂತಿಯರು ಸಹ ಅಂಗನವಾಡಿಯಿಂದ ವಿವಿಧ ಸೌಲಭ್ಯ ಪಡೆಯುತಿದ್ದಾರೆ. ಇಷ್ಟೆಲ್ಲಾ ಇದ್ದರೂ ಕೇಂದ್ರ ಸರಕಾರ ಇವರಿಗೆ ನೀಡುತ್ತಿರುವುದು 4,500ರೂ. ಹಾಗೂ 2,500ರೂ.ಮಾತ್ರ. ರಾಜ್ಯ ಸರಕಾರ 6,500ರೂ. ನೀಡುತ್ತಿದೆ ಎಂದು ಅವರು ವಿವರಿಸಿದರು.
ನಮಗೆ ಸರಕಾರ ವೇತನವನ್ನು ನೀಡದೇ ಜುಜುಬಿ ಗೌರವಧನವನ್ನು ನೀಡುತ್ತಿದೆ. ಎಲ್ಲಾ ಕೆಲಸಗಳನ್ನು ನಮ್ಮಿಂದ ಮಾಡಿ ಸಿಕೊಳ್ಳುವ ಸರಕಾರ, ಸರಕಾರಿ ನೌಕರರಾಗಿ ನಮ್ಮನ್ನು ಪರಿಗಣಿಸುತ್ತಿಲ್ಲ. ಇಲಾಖೇತರ ಕೆಲಸಗಳಾದ ಬಿಎಲ್ಓ ಸರ್ವೆ, ಐಸಿಡಿಎಸ್ ಯೋಜನೇತರ ಕೆಲಸಗಳಿಗೆಲ್ಲಾ ಅಂಗನವಾಡಿ ನೌಕರರನ್ನು ಬಳಸಿಕೊಳ್ಳಲಾಗುತ್ತಿದೆ ಎಂದವರು ಹೇಳಿದರು.
49 ವರ್ಷಗಳಿಂದ ದುಡಿಯುತ್ತಿರುವ ಅಂಗನವಾಡಿ ನೌಕರರು, 21 ವರ್ಷಗಳಿಂದ ದುಡಿಯುತ್ತಿರುವ ಬಿಸಿಯೂಟ ನೌಕರರು ಹಾಗೂ ಆಶಾ ಮತ್ತು ಇತರ ಸಿಬ್ಬಂದಿಗಳಿಗೆ 31 ಸಾವಿರ ರೂ.ಕನಿಷ್ಠ ವೇತನ, ನಿವೃತ್ತಿ ಸೌಲಭ್ಯಗಳು ಹಾಗೂ ಕನಿಷ್ಠ 10 ಸಾವಿರ ರೂ.ಪಿಂಚಣೆ ನೀಡಬೇಕು ಎಂಬುದು ನಮ್ಮ ಪ್ರಮುಖ ಬೇಡಿಕೆಯಾಗಿದೆ ಎಂದರು.
2014ರಿಂದ ದೇಶದ ಚುಕ್ಕಾಣಿ ಹಿಡಿದಿರುವ ನರೇಂದ್ರ ಮೋದಿ ಅವರು ವರ್ಷದಿಂದ ವರ್ಷಕ್ಕೆ ಐಸಿಡಿಎಸ್ ಯೋಜನೆಗಳಿಗೆ ನೀಡುವ ಅನುದಾನದಲ್ಲಿ ಗಣನೀಯ ಕಡಿತ ಮಾಡುತ್ತಿದೆ. ಕಳೆದ ಸಾಲಿನಲ್ಲಿ 8100ಕೋಟಿ ರೂ.ಅನುದಾನ ಕಡಿತ ವಾಗಿದ್ದು, ಇದರಿಂದ ಮಕ್ಕಳಿಗೆ ಆಹಾರ ಪೂರೈಕೆ ಸಾಧ್ಯವಾಗುತ್ತಿಲ್ಲ.ಜಿಲ್ಲೆಯಲ್ಲಿ 81ಸಹಾಯಕಿಯರು ಹಾಗೂ 46 ಕಾರ್ಯಕರ್ತರ ಹುದ್ದೆ ಖಾಲಿ ಇದೆ. ಕಳೆದ ಡಿಸೆಂಬರ್ನಿಂದ ಗೌರವಧನವೂ ಸಿಕ್ಕಿಲ್ಲ ಎಂದು ಆರೋಪಿಸಿದರು.
ಸಿಐಟಿಯು ಜಿಲ್ಲಾ ಉಪಾದ್ಯಕ್ಷ ಬಾಲಕೃಷ್ಣ ಶೆಟ್ಟಿ ಮಾತನಾಡಿ, ಅಂಗನವಾಡಿ, ಬಿಸಿಯೂಟ ನೌಕರರ ಪ್ರತಿಭಟನಾ ಧರಣಿಗೆ ತಮ್ಮ ಸಂಘಟನೆ ಬೆಂಬಲ ನೀಡುತ್ತಿದೆ. ಇದರ ಮುಂದುವರಿದ ಭಾಗವಾಗಿ ಜ.24ರಂದು ಸಂಘಟಿತ ಕಾರ್ಮಿಕರ (ಹೆಂಚು, ಗೇರುಬೀಜ ಕಾರ್ಖಾನೆ, ಬೀಡಿ ಕಾರ್ಮಿಕರು) ಧರಣಿ ನಡೆದರೆ, 25ರಂದು ಅಸಂಘಟಿತರ ಧರಣಿ ನಡೆಯಲಿದೆ ಎಂದರು.
ಪತ್ರಿಕಾಗೋಷ್ಠಿಯಲ್ಲಿ ಅಂಗನವಾಡಿ ನೌಕರರ ಸಂಘದ ಜಿಲ್ಲಾಧ್ಯಕ್ಷೆ ಭಾರತಿ, ಜಿಲ್ಲಾ ಉಪಾಧ್ಯಕ್ಷೆ ಜಿ.ಪ್ರೇಮಾ, ಅಕ್ಷರದಾಸೋಹ ಸಂಘದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸುನಂದಾ, ಸಿಐಟಿಯು ಜಿಲ್ಲಾ ಕಾರ್ಯದರ್ಶಿ ಕವಿರಾಜ್ ಉಪಸ್ಥಿತರಿದ್ದರು.