ವಿದ್ಯಾರ್ಥಿಗಳೇ ಜ.22 ರಂದು ಸ್ವಯಂ ರಜೆ ಪಡೆದು ರಾಮೋತ್ಸವದಲ್ಲಿ ಪಾಲ್ಗೊಳ್ಳಿ: ಯಶ್ಪಾಲ್ ಸುವರ್ಣ
ಉಡುಪಿ: ಜ.22 ರಂದು ನಡೆಯುವ ಅಯೋಧ್ಯೆ ಶ್ರೀರಾಮ ಮಂದಿರದಲ್ಲಿ ಪ್ರಾಣಪ್ರತಿಷ್ಠೆ ಮಹೋತ್ಸವದ ಐತಿಹಾಸಿಕ ದಿನದಂದು ಶಾಲಾ ವಿದ್ಯಾರ್ಥಿಗಳು, ಸಾರ್ವಜನಿಕರು, ಸರ್ಕಾರಿ ನೌಕರರು ಸ್ವಯಂ ರಜೆ ಪಡೆದು ರಾಮೋತ್ಸವದಲ್ಲಿ ಪಾಲ್ಗೊಳ್ಳುವಂತೆ ಉಡುಪಿ ಶಾಸಕ ಯಶ್ ಪಾಲ್ ಸುವರ್ಣ ಕರೆ ನೀಡಿದ್ದಾರೆ.
ಸಿದ್ದರಾಮಯ್ಯ ನೇತೃತ್ವದ ರಾಜ್ಯ ಸರಕಾರ ನಿರಂತರವಾಗಿ ತನ್ನ ಹಿಂದೂ ವಿರೋಧಿ ಧೋರಣೆಯ ಮೂಲಕ ಅಲ್ಪಸಂಖ್ಯಾತರ ಓಲೈಕೆಗೆ ಮುಂದಾಗಿದ್ದು, ಇದರ ಮುಂದುವರಿದ ಭಾಗವಾಗಿ ಕೋಟ್ಯಾಂತರ ಹಿಂದೂಗಳ ಹಲವು ಶತಮಾನದ ಅಯೋಧ್ಯೆಯ ಶ್ರೀ ರಾಮ ಮಂದಿರದ ಕನಸು ಸಾಕಾರಗೊಳ್ಳುವ ಈ ಐತಿಹಾಸಿಕ ದಿನದಂದು ರಜೆ ಘೋಷಣೆ ಮಾಡದೇ ಸಮಸ್ತ ಹಿಂದೂ ಸಮಾಜದ ಭಾವನೆಯೊಂದಿಗೆ ಚೆಲ್ಲಾಟವಾಡುತ್ತಿದೆ.
ಈಗಾಗಲೇ ಉತ್ತರ ಪ್ರದೇಶ, ದೆಹಲಿ, ಮಧ್ಯಪ್ರದೇಶ, ಮಹಾರಾಷ್ಟ್ರ ಸಹಿತ ಹಲವಾರು ರಾಜ್ಯಗಳು ರಜೆ ಘೋಷಣೆ ಮಾಡಿದ್ದು, ಕೇಂದ್ರ ಸರ್ಕಾರ ಅರ್ಧ ದಿನದ ರಜೆಯನ್ನು ಅಂಗೀಕರಿಸಿದ್ದು ಕರ್ನಾಟಕ ರಾಜ್ಯ ಸರ್ಕಾರ ಮಾತ್ರ ಈ ಬಗ್ಗೆ ದಿವ್ಯ ಮೌನ ತಾಳಿದೆ.
ರಾಜ್ಯದ ಸಮಸ್ತ ರಾಮ ಭಕ್ತರು ತಮ್ಮ ಜೀವನದಲ್ಲಿ ದೊರೆತ ಈ ಪುಣ್ಯ ಪಾವನ ಕ್ಷಣವನ್ನು ಕಣ್ತುಂಬಿ ಕೊಳ್ಳಲು ಸ್ವಯಂ ರಜೆ ಪಡೆದು ಸಂಭ್ರಮದಲ್ಲಿ ಭಾಗಿಯಾಗಿ ಶ್ರೀ ರಾಮ ದೇವರ ಕೃಪೆಗೆ ಪಾತ್ರ ರಾಗುವ ಅವಕಾಶ ಒದಗಿ ಬಂದಿದೆ.
ಸ್ವಯಂ ರಜೆ ಪಡೆದ ವಿದ್ಯಾರ್ಥಿಗಳ ವಿರುದ್ಧ ಯಾವುದೇ ಶಿಕ್ಷಣ ಸಂಸ್ಥೆ ಹಾಗೂ ನೌಕರರಿಗೆ ಸರ್ಕಾರಿ ಇಲಾಖೆಗಳು ವ್ಯತಿರಿಕ್ತವಾಗಿ ಕ್ರಮಗಳನ್ನು ಕೈಗೊಳ್ಳಲು ಮುಂದಾದರೆ ಶಾಸಕನಾಗಿ ವಿದ್ಯಾರ್ಥಿಗಳ ಜೊತೆ ನಿಂತು ನ್ಯಾಯ ಒದಗಿಸಲು ಬದ್ಧ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.