ಉಡುಪಿ ಲಯನ್ಸ್ ಕ್ಲಬ್: ಜ.21- ಹಾಜಿ ಅಬ್ದುಲ್ಲಾ ಆಸ್ಪತ್ರೆಗೆ ಸೌಲಭ್ಯಗಳ ಕೊಡುಗೆ
ಉಡುಪಿ, ಜ.20: ಸ್ವಯಂಸೇವಾ ಸಂಸ್ಥೆ ಲಯನ್ಸ್ ಕ್ಲಬ್ನ ಸಮುದಾಯ ಸೇವೆಯ ಭಾಗವಾಗಿ ಅಂತಾರಾಷ್ಟ್ರೀಯ ಲಯನ್ಸ್ ಸಂಸ್ಥೆ ಪ್ರಾಂತ್ಯ1 ಲಯನ್ಸ್ ಜಿಲ್ಲೆ 317ಸಿ ಇದರ ಪ್ರಾಂತೀಯ ಸಮ್ಮೇಳನ ನಾಳೆ ಜ.21ರಂದು ಉಡುಪಿ ಅಂಬಾಗಿಲಿನಲ್ಲಿರುವ ಅಮೃತಗಾರ್ಡನ್ನಲ್ಲಿ ನಡೆಯಲಿದ್ದು, ಇದಕ್ಕೆ ಪೂರ್ವಭಾವಿಯಾಗಿ ಉಡುಪಿಯ ಕೂಸಮ್ಮ ಶಂಭು ಶೆಟ್ಟಿ ಸ್ಮಾರಕ ಹಾಜಿ ಅಬ್ದುಲಲಾ ತಾಯಿ ಮತ್ತು ಮಕ್ಕಳ ಆಸ್ಪತ್ರೆಗೆ ವಿವಿಧ ಸೌಲಭ್ಯಗಳನ್ನು ವಿತರಿಸಲಿದೆ ಎಂದು ಪ್ರಾಂತ್ಯ 1ರ ಚುಕ್ಕಾಣಿ ಹಿಡಿದಿರುವ ಗಿರಿಜಾ ತಲ್ಲೂರು ಶಿವರಾಮ ಶೆಟ್ಟಿ ತಿಳಿಸಿದ್ದಾರೆ.
ಬೆಳಗ್ಗೆ 10ಗಂಟೆಗೆ ಆಸ್ಪತ್ರೆಗೆ 1.30ಲಕ್ಷ ರೂ.ವೆಚ್ಚದಲ್ಲಿ ಶುದ್ಧ ಕುಡಿಯುವ ಶೀತಲ ಹಾಗೂ ಬಿಸಿ ನೀರಿನ ಘಟಕವನ್ನು ಮತ್ತು 1.50 ಲಕ್ಷ ರೂ.ವೆಚ್ಚದ ಭ್ರೂಣದ ಹನದಯ ಬಡಿತ ಪತ್ತೆ ಹಚ್ಚುವ ಯಂತ್ರವನ್ನು ಕೊಡುಗೆಯಾಗಿ ನೀಡಲಾಗುವುದು ಎಂದು ಅವರು ಹೇಳಿದರು.
ಇವುಗಳನ್ನು ಜಿಲ್ಲಾಧಿಕಾರಿ ಡಾ.ಕೆ.ವಿದ್ಯಾಕುಮಾರಿ ಹಾಗೂ ಎಸ್ಪಿ ಡಾ.ಕೆ.ಅರುಣ್ ಅವರು ಜಿಲ್ಲಾ ಗವರ್ನರ್ ಡಾ.ನೇರಿ ಕರ್ನೇಲಿಯೊ, ಜಿಲ್ಲಾ ಸರ್ಜನ್ ಡಾ.ವೀಣಾಕುಮಾರಿ, ಲಯನ್ಸ್ ಕ್ಲಬ್ನ ಪದಾಧಿಕಾರಿಗಳಾದ ತಲ್ಲೂರು ಶಿವರಾಮ ಶೆಟ್ಟಿ, ಡಿ.ಶ್ರೀಧರ ಶೇಣವ, ಮೊಹಮ್ಮದ್ ಹನೀಫ್, ಸ್ವಪ್ನಾ ಸುರೇಶ್ ಉಪಸ್ಥಿತಿಯಲ್ಲಿ ಹಸ್ತಾಂತರಿಸಲಾಗುವುದು ಎಂದರು.
ಇದರೊಂದಿಗೆ ವಿವಿಧ ಶಾಲೆಗಳಿಗೆ 10 ಕಂಪ್ಯೂಟರ್ಗಳು, ವಿಕಲಚೇತನರಿಗೆ ಗಾಲಿಕುರ್ಚಿ, ಅನಾರೋಗ್ಯ ಪೀಡಿತರಿಗೆ ಧನಸಹಾಯ, ಪ್ರತಿಭಾವಂತ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನಗಳ ವಿತರಣೆಯೂ ನಡೆಯಲಿದೆ ಎಂದು ಹಿರಿಯ ಲ. ಸುನಿಲ್ ಕುಮಾರ್ ತಿಳಿಸಿದರು.
ಈ ಪ್ರಾಂತ್ಯದ ವಾರ್ಷಿಕ ಪ್ರಾಂತೀಯ ಸಮ್ಮೇಳನ ಸಂಜೆ 4ಕ್ಕೆ ಅಮೃತ ಗಾರ್ಡನ್ನಲ್ಲಿ ನಡೆಯಲಿದ್ದು, ಹೊರನಾಡು ದೇವಸ್ಥಾನದ ಧರ್ಮದರ್ಶಿ ಭೀಮೇಶ್ವರ ಜೋಷಿ ಉದ್ಘಾಟಿಸಲಿದ್ದಾರೆ.ಶಿವಮೊಗ್ಗ ಸರಕಾರಿ ಪ.ಪೂ.ಕಾಲೇಜಿನ ಪ್ರಾಂಶುಪಾಲರಾದ ಡಾ.ನಾಗೇಶ್ ಬಿಡಾರದಗೂಡು ಮುಖ್ಯ ಅತಿಥಿಯಾಗಿರುವರು ಎಂದರು.
ಪತ್ರಿಕಾಗೋಷ್ಠಿಯಲ್ಲಿ ಡಾ.ಜಗದೀಶ್ ಹೊಳ್ಳ, ಪ್ರಶಾಂತ ಭಂಡಾರಿ, ತಲ್ಲೂರು ಶಿವರಾಮ ಶೆಟ್ಟಿ, ಉಮೇಶ ಆಚಾರ್ಯ ಉಪಸ್ಥಿತರಿದ್ದರು.