ಉಡುಪಿ: ಬ್ಯಾಂಕ್ ಉದ್ಯೋಗಿಯೆಂದು ನಂಬಿಸಿ ಮಹಿಳೆಯ ಚಿನ್ನಾಭರಣ ದೋಚಿದ ವಂಚಕ
ಉಡುಪಿ: (ಉಡುಪಿ ಟೈಮ್ಸ್ ವರದಿ) ಬ್ಯಾಂಕ್ ಉದ್ಯೋಗಿ ಎಂದು ಹೇಳಿ ವೃದ್ದೆಯೊರ್ವರ ಚಿನ್ನವನ್ನು ಲಪಾಟಿಸಿದ ಘಟನೆ ಉಡುಪಿ ಮಿತ್ರ ಹಾಸ್ಪತ್ರೆ ಬಳಿ ನಡೆದಿದೆ. ಮುದರಂಗಡಿಯ ಹಲಸಿನಕಟ್ಟೆಯ ಸರೋಜಾ (63) ಅವರು ಬೆನ್ನು ನೋವಿನ ಚಿಕಿತ್ಸೆಗೆ ಸೋಮವಾರ ಕಲ್ಪನ ಚಿತ್ರ ಮಂದಿರ ಬಳಿಯ ಕ್ಲಿನಿಕ್‌ಗೆ ಬಂದಿದ್ದರು. ಆ ಸಂದರ್ಭ ಅಪರಿಚಿತ ವ್ಯಕ್ತಿಯೊಬ್ಬ ನಾನು ರಾಜೇಶ್ ರಾಮಣ್ಣ ಭಂಡಾರಿಯ ಮಗ ಎಂದು ತನ್ನ ಪರಿಚಯ ಹೇಳಿ, ನಾನು ಕರ್ನಾಟಕ ಬ್ಯಾಂಕ್‌ನಲ್ಲಿ ಉದ್ಯೋಗ ಮಾಡಿಕೊಂಡಿದ್ದು ನಮ್ಮ ಬ್ಯಾಂಕಿನಲ್ಲಿ ಬಡವರಿಗೆ 17,000/- ಹಣ ಕೊಡುತ್ತಾರೆ ಎಂದು ನಂಬಿಸಿದ್ದ.
ಇದನ್ನು ನಂಬಿದ ಸರೋಜಾ ಅವರನ್ನು ಅಲ್ಲೆ ಪಕ್ಕದ ಮಿತ್ರ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದ ಅಪರಿಚಿತ ನಂತರ ನಿಮ್ಮ ಬಳಿ ಬಂಗಾರ ಇದ್ದರೆ ಬ್ಯಾಂಕ್ ನವರು ಹಣ ಕೊಡುವುದಿಲ್ಲ, ನಿಮ್ಮ ಚಿನ್ನದ ಬಳೆಗಳನ್ನು ಕೊಡಿ ನಾನು ಬ್ಯಾಗ್‌ನಲ್ಲಿ ಇಡುತ್ತೇನೆ ಹೇಳಿ ತೆಗೆದುಕೊಂಡಿದ್ದ ವಂಚಕ.
ಬಳಿಕ ಮಹಿಳೆಯನ್ನು ಅಲ್ಲಿಯೇ ಕೂರಿಸಿ ಹೋದವನು, ವಾಪಾಸು ಬಾರದೇ ಇದ್ದಾಗ ಸಂಶಯಗೊಂಡು, ಬ್ಯಾಗ್ ಪರಿಶೀಲಿಸಿದಾಗ ಬಳೆಗಳು ಇರಲಿಲ್ಲ ಎಂದು ಉಡುಪಿ ನಗರ ಠಾಣೆಗೆ ದೂರು ನೀಡಲಾಗಿದೆ. ಬಳೆಯ ಮೌಲ್ಯ ೮೭,೦೦೦ ರೂಪಾಯಿ ಆಗಿರುತ್ತದೆ.