ಉಡುಪಿ: 21,008 ಪದದಿಂದ ಶ್ರೀರಾಮನ ಕಲಾಕೃತಿ ರಚಿಸಿದ ಪಿಯುಸಿ ವಿದ್ಯಾರ್ಥಿ
ಉಡುಪಿ: ಅಯೋಧ್ಯೆಯಲ್ಲಿರುವ ಶ್ರೀರಾಮ ಮಂದಿರದ ಭವ್ಯವಾದ ಅನಾವರಣ ಹಾಗೂ ಪೂಜ್ಯ ಶ್ರೀರಾಮನ ಪ್ರಾಣ ಪ್ರತಿಷ್ಠಾ ಸಮಾರಂಭವನ್ನು ಅಪಾರ ಸಂತೋಷ ಮತ್ತು ಭಕ್ತಿಯಿಂದ ಸ್ವಾಗತಿಸಲು ಜನವರಿ 22 ಸಿದ್ಧವಾಗಿದೆ.
ಅದರಂತೆ ದೇವಾಲಯಗಳ ಊರೆಂದೆ ಪ್ರಸಿದ್ಧಿಯಾಗಿರುವ ನಮ್ಮ ಉಡುಪಿ ಭಕ್ತಿ, ಕಲೆ ಹಾಗೂ ಸಂಸ್ಕೃತಿಯ ನೆಲೆಬೀಡಾಗಿದೆ. ಉಡುಪಿಯ ಪೂರ್ಣಪ್ರಜ್ಞಾ ಪದವಿ ಪೂರ್ವ ಕಾಲೇಜಿನಲ್ಲಿ ಪ್ರಥಮ ಪಿಯುಸಿ ವಿದ್ಯಾರ್ಥಿಯಾಗಿರುವ ಶಶಾಂಕ್ ಪೈ ಅವರು ಭಗವಾನ್ ಶ್ರೀ ರಾಮಚಂದ್ರನ ಪಟ್ಟಾಭಿಷೇಕವನ್ನು ಸ್ಪಷ್ಟವಾಗಿ ವರ್ಣಿಸಿರುವ ಭಾವ ಚಿತ್ರವನ್ನು “ರಾಮ” ಎಂಬ ಪವಿತ್ರ ಪದವನ್ನು 21,008 ಬಾರಿ ಬರೆಯುವ ಮೂಲಕ ಈ ಕಲಾಕೃತಿಯನ್ನು ರಚಿಸಿರುತ್ತಾರೆ.
ಶ್ರೀ ರಾಮಚಂದ್ರ ಹಾಗು ಅವರ ಪತ್ನಿ ಸೀತಾ ದೇವಿ, ನಿಷ್ಠಾವಂತ ಸಹೋದರ ಲಕ್ಷ್ಮಣ ಮತ್ತು ಭಕ್ತ ಹನುಮನ ಭಾವಚಿತ್ರದ ಪ್ರತಿ ಸಾಲು,ರೇಖೆ, ಬೆಲೆಬಾಳುವ ಆಭರಣಗಳು, ದೇಹದ ಬಣ್ಣಗಳು, ಆಯುಧಗಳು ಮತ್ತು ಸಭೆಯ ಪೂರ್ಣಚಿತ್ರವನ್ನು ಚಿತ್ರಿಸಲು ಕೇವಲ ವಿವಿಧ ವರ್ಣದ ಪೆನ್ ಬಳಸಿ “ರಾಮ-ರಾಮ” ಎಂದು ನಿರಂತರವಾಗಿ ಬರೆದು ಅವರ ಅಸಾಧಾರಣ ಪ್ರತಿಭೆಯನ್ನು ಕಲಾಕೃತಿಯಲ್ಲಿ ತೋರಿಸಿ ಎಲ್ಲರ ಮೆಚ್ಚುಗೆಗೆ ಪಾತ್ರರಾಗಿರುತ್ತಾರೆ.
ಉದಯೋನ್ಮುಖ ಕಲಾವಿದನಾಗಿ ಉಡುಪಿಯಿಂದ ಬಂದ ಶಶಾಂಕ್ ಪೈ ಅವರ ಕಲಾಕೃತಿಯ ರಚನೆಯು ಸ್ಥಳೀಯ ಸಮುದಾಯಕ್ಕೆ ಹೆಮ್ಮೆಯ ಮೂಲವಾಗಿದೆ – ಸಾಂಪ್ರದಾಯಿಕ ಕಲಾತ್ಮಕ ಗಡಿಗಳನ್ನು ಮೀರಿದ ಭಕ್ತಿಯ ಸಂಕೇತವಾಗಿದೆ.