ಬೆಂಗಳೂರು: ಬೋಯಿಂಗ್ ಕ್ಯಾಂಪಸ್ ಉದ್ಘಾಟಿಸಿದ ಪ್ರಧಾನಿ ಮೋದಿ
ಬೆಂಗಳೂರು: ಬೆಂಗಳೂರಿನ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಬಳಿ ನಿರ್ಮಾಣವಾಗಿರುವ ನೂತನ ಬೋಯಿಂಗ್ ವಿಮಾನ ತಯಾರಿಕಾ ಸಂಸ್ಥೆಯ ಕ್ಯಾಂಪಸ್ ಗೆ ಇಂದು ಪ್ರಧಾನಿ ನರೇಂದ್ರ ಮೋದಿ ಚಾಲನೆ ನೀಡಿದ್ದಾರೆ.
ಬೆಂಗಳೂರಿಗೆ ಆಗಮಿಸಿದ ಪ್ರಧಾನಿ ಮೋದಿ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದ ಬಳಿಯ ದೇವನಹಳ್ಳಿಯಲ್ಲಿ ಬೋಯಿಂಗ್ನ ಅತ್ಯಾಧುನಿಕ ಜಾಗತಿಕ ಎಂಜಿನಿಯರಿಂಗ್ ಮತ್ತು ತಂತ್ರಜ್ಞಾನ ಆವಿಷ್ಕಾರ ಕ್ಯಾಂಪಸ್ ಅನ್ನು ಉದ್ಘಾಟಿಸಿದರು.
ಈ ನೂತನ ಬೋಯಿಂಗ್ ಕ್ಯಾಂಪಸ್ ಅನ್ನು 1,600 ಕೋಟಿ ರೂ.ಗಳ ಬಂಡವಾಳದಲ್ಲಿ ನಿರ್ಮಿಸಲಾಗಿದ್ದು, 43-ಎಕರೆ ಕ್ಯಾಂಪಸ್ ಅಮೆರಿಕದಿಂದ ಹೊರಗೆ ಇರುವ ಬೋಯಿಂಗ್ನ ಅತಿದೊಡ್ಡ ಹೂಡಿಕೆಯಾಗಿದೆ.
ಅಧಿಕೃತ ಮೂಲಗಳ ಪ್ರಕಾರ ನಗರದ ಹೊರವಲಯ ದಲ್ಲಿರುವ ದೇವನಹಳ್ಳಿಯಲ್ಲಿರುವ ಹೈಟೆಕ್ ಡಿಫೆನ್ಸ್ ಮತ್ತು ಏರೋಸ್ಪೇಸ್ ಪಾರ್ಕ್ನಲ್ಲಿರುವ ಕ್ಯಾಂಪಸ್ ಭಾರತದಲ್ಲಿ ರೋಮಾಂಚಕ ಸ್ಟಾರ್ಟ್ಅಪ್ಗಳು, ಖಾಸಗಿ ಮತ್ತು ಸರ್ಕಾರಿ ಪರಿಸರ ವ್ಯವಸ್ಥೆಯೊಂದಿಗೆ ಪಾಲುದಾರಿಕೆಗೆ ಮೂಲಾಧಾರವಾಗಲಿದೆ ಮತ್ತು ಜಾಗತಿಕ ಏರೋಸ್ಪೇಸ್ ಮತ್ತು ರಕ್ಷಣಾ ಉದ್ಯಮಕ್ಕೆ ಮುಂದಿನ ಪೀಳಿಗೆಯ ಉತ್ಪನ್ನಗಳು ಮತ್ತು ಸೇವೆಗಳನ್ನು ಅಭಿವೃದ್ಧಿಪಡಿಸಲು ಸಹಾಯ ಮಾಡುತ್ತದೆ ಎಂದು ತಿಳಿದುಬಂದಿದೆ.
ಈ ಉದ್ಘಾಟನಾ ಕಾರ್ಯಕ್ರಮದಲ್ಲಿ ಕರ್ನಾಟಕ ರಾಜ್ಯಪಾಲ ಥಾವರ್ ಚಂದ್ ಗೆಹ್ಲೂಟ್, ಸಿಎಂ ಸಿದ್ದರಾಮಯ್ಯ ಸೇರಿದಂತೆ ಹಲವು ಅಧಿಕಾರಿಗಳು ಪಾಲ್ಗೊಂಡಿದ್ದರು.
ಕೇಂದ್ರದಲ್ಲಿ ಏನಿದೆ?
ಬೋಯಿಂಗ್ ಇಂಡಿಯಾ ಎಂಜಿನಿಯರಿಂಗ್ ಮತ್ತು ಟೆಕ್ನಾಲಜಿ ಸೆಂಟರ್ (BIETC) ಕ್ಯಾಂಪಸ್ ಸುಮಾರು 1600 ಕೋಟಿ ರೂಪಾಯಿ ವೆಚ್ಚದಲ್ಲಿ 43 ಎಕರೆ ಪ್ರದೇಶದಲ್ಲಿ ನಿರ್ಮಾಣವಾಗಿದೆ. ಅಮೆರಿಕವನ್ನು ಹೊರತುಪಡಿಸಿ ಬೇರೆ ದೇಶದಲ್ಲಿ ನಿರ್ಮಾಣವಾದ ಅತಿ ದೊಡ್ಡ ಕ್ಯಾಂಪಸ್ ಇದಾಗಿದೆ. ಈ ಸಂಸ್ಥೆ ಭಾರತೀಯ ಪ್ರತಿಭೆಗಳನ್ನು ಸ್ವಾಗತಿಸಲಿದ್ದು, ಅದರಲ್ಲೂ ವಿಜ್ಞಾನ, ತಂತ್ರಜ್ಞಾನ, ಇಂಜಿನಿಯರಿಂಗ್ ಮತ್ತು ಗಣಿತ ಕ್ಷೇತ್ರಗಳ ಪ್ರತಿಭೆಗಳಿಗೆ ಅವಕಾಶಗಳನ್ನು ಒದಗಿಸಲಿದೆ. ಬಿಐಇಟಿಸಿ ಭಾರತದಲ್ಲಿ ಬೋಯಿಂಗ್ ಸಂಸ್ಥೆಯ ಅತಿದೊಡ್ಡ ವಿಭಾಗವಾಗಿದೆ. ದೇಶದ ಸ್ಟಾರ್ಟಪ್ಗಳು, ಖಾಸಗಿ ವಲಯ ಮತ್ತು ಸರ್ಕಾರದೊಡನೆ ಈ ಬಿಐಇಟಿಸಿ ಕೇಂದ್ರ ಕಾರ್ಯಾಚರಿಸಲಿದೆ. ಜಾಗತಿಕ ಏರೋಸ್ಪೇಸ್ ಮತ್ತು ರಕ್ಷಣಾ ಉದ್ಯಮಕ್ಕೆ ನೂತನ ಉತ್ಪನ್ನಗಳು ಮತ್ತು ಸೇವೆಗಳನ್ನು ಒದಗಿಸುವ ನಿಟ್ಟಿನಲ್ಲಿ ಈ ಕೇಂದ್ರ ಗಮನ ಹರಿಸಲಿದೆ.
ಅಂತೆಯೇ ಬಿಐಇಟಿಸಿ ಕೇಂದ್ರದಿಂದ ಜಾಗತಿಕವಾಗಿ ಏರೋಸ್ಪೇಸ್ ಉದ್ಯಮದ ಪ್ರಗತಿಗಾಗಿ ಕಾರ್ಯಾಚರಿಸಲು ಇನ್ನಷ್ಟು ಸಹಕಾರಿ. 3,000ಕ್ಕೂ ಹೆಚ್ಚು ಇಂಜಿನಿಯರ್ಗಳನ್ನು ಹೊಂದುವ ಗುರಿ ಹಾಕಿಕೊಂಡಿದೆ ಬಿಐಇಟಿಸಿ. ಈ ಇಂಜಿನಿಯರ್ಗಳು ಸಂಶೋಧನೆ ಮತ್ತು ಅಭಿವೃದ್ಧಿ, ಅಂತಾರಾಷ್ಟ್ರೀಯ ಮಾರುಕಟ್ಟೆಗಳಲ್ಲಿ ಭಾಗಿಯಾಗಿ, ಆಧುನಿಕ ತಂತ್ರಜ್ಞಾನಗಳಾದ ಕೃತಕ ಬುದ್ಧಿಮತ್ತೆ (ಎಐ), ಮೆಷಿನ್ ಲರ್ನಿಂಗ್, ಇಂಡಸ್ಟ್ರಿಯಲ್ ಇಂಟರ್ನೆಟ್ ಆಫ್ ಥಿಂಗ್ಸ್, ಕ್ಲೌಡ್ ಕಂಪ್ಯೂಟಿಂಗ್, ಮಾಡೆಲ್ ಆಧಾರಿತ ಇಂಜಿನಿಯರಿಂಗ್, ಮತ್ತು ಅಡ್ಡಿಟಿವ್ ಉತ್ಪಾದನೆಗಳನ್ನು ಬಳಸಿಕೊಳ್ಳಲಿದ್ದಾರೆ