ಮರಳು ಮಾಫಿಯಾಕ್ಕೆ ನೆರವು ನೀಡಿದ ಆರೋಪ: ಪೊಲೀಸ್ ಇನ್ಸ್ಪೆಕ್ಟರ್ ಅಮಾನತು
ಮಂಗಳೂರು: ಮರಳು ಮಾಫಿಯಾಕ್ಕೆ ಅಕ್ರಮದಲ್ಲಿ ನೆರವು ನೀಡಿದ ಆರೋಪದ ಮೇಲೆ ಮಂಗಳೂರು ನಗರದ ಕಂಕನಾಡಿ ಪೊಲೀಸ್ ಠಾಣೆಯ ಪೊಲೀಸ್ ಇನ್ಸ್ಪೆಕ್ಟರ್ ರನ್ನು ಅಮಾನತು ಮಾಡಲಾಗಿದೆ.
ಅಕ್ರಮ ಮರಳು ದಂಧೆ ವಿರುದ್ಧ ಕ್ರಮಕೈಗೊಳ್ಳಲು ಮೇಲಧಿಕಾರಿಗಳ ಸೂಚನೆಯನ್ನು ನಿರ್ಲಕ್ಷಿಸುತ್ತಿದ್ದಾರೆ ಎಂದು ಎಸಿಪಿ ಧನ್ಯ ನಾಯಕ್ ವರದಿ ನೀಡಿದ ಹಿನ್ನೆಲೆಯಲ್ಲಿ ನಗರ ಪೊಲೀಸ್ ಆಯುಕ್ತ ಅನುಪಮ್ ಅಗರ್ವಾಲ್, ಇನ್ಸ್ಪೆಕ್ಟರ್ ಎಚ್ಎಸ್ ಭಜಂತ್ರಿ ಅವರನ್ನು ಅಮಾನತುಗೊಳಿಸಿ ಆದೇಶ ಹೊರಡಿಸಿದ್ದಾರೆ.
ಜೆಪ್ಪಿನಮೊಗರು ಕಡೆಕಾರು ಎಂಬಲ್ಲಿ ಅಕ್ರಮ ಮರಳು ತೆಗೆಯುವ ಸ್ಥಳದ ಮೇಲೆ ದಾಳಿ ನಡೆಸುವಂತೆ ಉನ್ನತ ಅಧಿಕಾರಿಗಳ ಸೂಚನೆಯನ್ನು ಭಜಂತ್ರಿ ನಿರ್ಲಕ್ಷಿಸಿದ್ದಾರೆ ಎಂದು ವರದಿಯಾಗಿತ್ತು. ದೂರುಗಳೊಂದಿಗೆ ಠಾಣೆಗೆ ಭೇಟಿ ನೀಡುವ ಜನರೊಂದಿಗೆ ಇನ್ಸ್ಪೆಕ್ಟರ್ ಸೌಜನ್ಯದಿಂದ ವರ್ತಿಸುತ್ತಿಲ್ಲ ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.