ಹೆಣ್ಣಿನ ಸಮಸ್ಯೆಗಳಿಗೆ, ಭಾವನೆಗಳಿಗೆ ಸ್ಪಂದಿಸುವ ಕೆಲಸ ಸಂಸದೆ ಶೋಭಾ ಮಾಡಲಿ: ವೆರೋನಿಕಾ

ಉಡುಪಿ: ತನ್ನ ಕ್ಷೇತ್ರದ ಜನತೆ ಯಾವ ಉದ್ದೇಶಕ್ಕೋಸ್ಕರ ತನ್ನನ್ನು ಆಯ್ಕೆ ಮಾಡಿದ್ದಾರೆ ಎಂದು ಯೋಚಿಸುವ ಬದಲು, ಉಡುಪಿ ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದ ಸಂಸದೆ ಶೋಭಾ ಕರಂದಾಜ್ಲೆ, ಡಿಕೆ ರವಿ ಅವರ ಪತ್ನಿ ಕುಸುಮಾ ಅವರ ಬಗ್ಗೆ ಆಡಿದ ಕೀಳು ಮಟ್ಟದ ಮಾತುಗಳು, ಸಂಸದೆಯ ಮನೋಸ್ಥಿತಿಯನ್ನೆ ಸಂಶಯದಿಂದ ನೋಡುವಂತಾಗಿದೆ ಎಂದು ಕೆಪಿಸಿಸಿ ಪ್ಯಾನಲಿಸ್ಟ್ ವೆರೋನಿಕಾ ಕರ್ನೇಲಿಯೋ ತಿಳಿಸಿದ್ದಾರೆ.


ಸಂಪ್ರದಾಯ ಮತ್ತು ಕಾನೂನಾತ್ಮಕವಾಗಿ ಮದುವೆಯಾಗಿರುವ ಕುಸುಮರವರು, ತನ್ನ ಪತಿಯ ಹೆಸರನ್ನು ಬಳಸದೇ ಇನ್ಯಾರ ಹೆಸರನ್ನು ಬಳಸಬೇಕು ?? ಪತಿಯ ಹೆಸರನ್ನು ಬಳಸಬಾರದು ಎನ್ನಲು ಶೋಭಾ ಕರಂದಾಜ್ಲೆ ಅವರಿಗೆ ಹಕ್ಕು ಎಲ್ಲಿದೆ ?? ಪತಿ ಪತ್ನಿಯ ನಡುವಿನ ಭಾವನಾತ್ಮಕ ಸಂಬಂಧಗಳ ಬಗ್ಗೆ ಸಂಸದೆಗೆ ತಿಳಿಯದೆ ಇದ್ದಿದ್ದರಿಂದ, ಕೇವಲ ರಾಜಕೀಯಕ್ಕೋಸ್ಕರ ಕೀಳುಮಟ್ಟದ ಮಾತುಗಳನ್ನಾಡುತ್ತಿರುವ ಸಂಸದೆ, ತನ್ನನ್ನು ಆಯ್ಕೆ ಮಾಡಿದ ಕ್ಷೇತ್ರದ ಜನತೆಯ ಸಮಸ್ಯೆಗಳಿಗೆ ಮೊದಲು ಸ್ಪಂದಿಸಲಿ. ಒಂದು ಹೆಣ್ಣಾಗಿ ಹೆಣ್ಣಿನ ಸಮಸ್ಯೆಗಳಿಗೆ ಮತ್ತು ಭಾವನೆಗಳಿಗೆ ಸ್ಪಂದಿಸುವ ಕೆಲಸವನ್ನು ಶೋಭಾ ಕರಂದಾಜ್ಲೆ ಮೊದಲು ಮಾಡಲಿ ಎಂದು ಅವರು ತಿಳಿಸಿದ್ದಾರೆ.


ಐಎಎಸ್ ಅಧಿಕಾರಿ ದಿವಂಗತ ಡಿಕೆ ರವಿ ಹೆಸರು ಬಳಸಿಕೊಂಡವರಿಗೆ ಒಳ್ಳೆಯದಾಗುವುದಿಲ್ಲ ಎಂದು ಹೇಳುವ ಸಂಸದೆ, ಸ್ವಲ್ಪ ಇತಿಹಾಸವನ್ನು ಗಮನಿಸಬೇಕು. ಡಿಕೆ ರವಿಯವರು ನಿಧನರಾಗಿದ್ದಾಗ ರಾಜಕೀಯ ಯಾರು ಮಾಡಿದ್ದು ಎಂದು ಕ್ಷೇತ್ರದ ಜನತೆ ಮತ್ತು ರಾಜ್ಯದ ಜನತೆ ಮರೆತಿಲ್ಲ. ಅಪರೂಪಕ್ಕೆ ಕ್ಷೇತ್ರಕ್ಕೆ ಬರುವ ಸಂಸದೆ, ಕ್ಷೇತ್ರದಲ್ಲಿ ಅಭಿವೃದ್ಧಿ ಕೆಲಸ ಮಾಡಲಾಗದೇ ಜನರ ಭಾವನಾತ್ಮಕ ವಿಷಯಗಳ ಮೂಲಕ ರಾಜಕೀಯದಾಟ ಆಡುತ್ತಿದ್ದಾರೆ. ಹತ್ರಾಸ್ ಮತ್ತು ದೇಶದ ವಿವಿಧ ಭಾಗದಲ್ಲಿ ನಡೆಯುತ್ತಿರುವ ಅತ್ಯಾಚಾರ ಪ್ರಕರಣಗಳ ಬಗ್ಗೆ ಮಾತುಗಳನ್ನಾಡದ ಸಂಸದೆ, ತಾನು ಒಂದು ಮಹಿಳೆ ಎಂಬುದನ್ನು ಮರೆತು, ಕುಸುಮಾ ಅವರನ್ನು ತನ್ನ ಮಾತಿನ ಮೂಲಕ ಅವಹೇಳನ ಮಾಡಿದ್ದು, ಮಹಿಳಾ ಕುಲಕ್ಕೆ ಅವಮಾನ ಎಂದು ವೆರೋನಿಕಾ ಕರ್ನೇಲಿಯೊ ತಿಳಿಸಿದ್ದಾರೆ.

Leave a Reply

Your email address will not be published. Required fields are marked *

error: Content is protected !!