ಪರಶುರಾಮ ಥೀಂ ಪಾರ್ಕ್, ಬ್ರಹ್ಮಾವರ ಸಕ್ಕರೆ ಕಾರ್ಖಾನೆ ಅವ್ಯವಹಾರದ ಬಗ್ಗೆ ಸೂಕ್ತ ತನಿಖೆ: ಸಚಿವೆ ಹೆಬ್ಬಾಳ್ಕರ್
ಕುಂದಾಪುರ: ಕಾರ್ಕಳ ಬೈಲೂರು ಪರಶುರಾಮ ಥೀಂ ಪಾರ್ಕ್ ಅವ್ಯವಹಾರ ಹಾಗೂ ಬ್ರಹ್ಮಾವರ ಸಕ್ಕರೆ ಕಾರ್ಖಾನೆಯಲ್ಲಿನ ಬಹುಕೋಟಿ ಅವ್ಯವಹಾರದ ಬಗ್ಗೆ ರಾಜ್ಯ ಸರಕಾರ ಸೂಕ್ತ ತನಿಖೆ ನಡೆಸಲಿದೆ. ಈ ಬಗ್ಗೆ ಖುದ್ದು ಮುಖ್ಯಮಂತ್ರಿಗಳೇ ಈಗಾಗಾಲೇ ಹೇಳಿಕೆಯನ್ನು ನೀಡಿದ್ದಾರೆ ಎಂದು ಉಡುಪಿ ಜಿಲ್ಲಾ ಉಸ್ತುವಾರಿ ಸಚಿವೆ ಲಕ್ಷ್ಮಿ ಆರ್.ಹೆಬ್ಬಾಳ್ಕರ್ ತಿಳಿಸಿದ್ದಾರೆ.
ಕುಂದಾಪುರದಲ್ಲಿ ಬುಧವಾರ ಅರ್ಹ ಫಲಾನುಭವಿಗಳಿಗೆ ಹಕ್ಕುಪತ್ರ ವಿತರಣೆ ಕಾರ್ಯಕ್ರಮದ ಬಳಿಕ ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿದ ಅವರು, ಕಾರ್ಕಳದಲ್ಲಿ ನಿರ್ಮಾಣವಾದ ಪರಶುರಾಮ ಥೀಂ ಪಾರ್ಕ್ ವಿಚಾರವು ಪ್ರವಾಸೋಧ್ಯಮ ಇಲಾಖೆಗೆ ಬರುತ್ತದೆ. ಈ ಬಗ್ಗೆ ಕಮಿಟಿ ಮಾಡಿ ಶಿಸ್ತು ಕ್ರಮಕೈಗೊಳ್ಳುವ ಜೊತೆಗೆ ತಪ್ಪಿತಸ್ಥರಿಗೆ ಶಿಕ್ಷೆಯಾಗಬೇಕೆಂದು ಸಚಿವ ಎಚ್.ಕೆ.ಪಾಟೀಲ್ ಅವರಿಗೆ ಪತ್ರ ಮೂಲಕ ಮನವಿ ಮಾಡಲಾಗಿದೆ. ಥೀಂ ಪಾರ್ಕ್ ಬಗ್ಗೆ ತನಿಖೆ ಮಾಡುವುದಾಗಿ ಮುಖ್ಯಮಂತ್ರಿಗಳೇ ಹೇಳಿಕೆ ನೀಡಿದ್ದಾರೆ ಎಂದರು.
ಎಲ್ಲಾ ದಾಖಲೆಗಳಿದ್ದರೂ ಒಳ ರಾಜಕೀಯ ಆಗುತ್ತಿದೆಯೇ ಎಂಬ ಪತ್ರಕರ್ತರ ಪ್ರಶ್ನೆಗೆ ಉತ್ತರಿಸಿದ ಸಚಿವರು, ಬೆಳಗಾವಿಯಿಂದ ಇಲ್ಲಿಗೆ ಬಂದು ಒಳ ರಾಜಕೀಯ ಮಾಡುವಷ್ಟು ಕಷ್ಟವೇನು ನನಗಿಲ್ಲ ಎಂದು ಸ್ಪಷ್ಟನೆ ನೀಡಿದರು.
ಬ್ರಹ್ಮಾವರ ಸಕ್ಕರೆ ಕಾರ್ಖಾನೆಯಲ್ಲಿ 15-16 ಕೋಟಿ ಅವ್ಯವಹಾರ ನಡೆದಿದ್ದು ಎಲ್ಲವನ್ನೂ ಮಾರಿಕೊಂಡು ತಿಂದಿರುವುದು ಎಲ್ಲರಿಗೂ ತಿಳಿದಿದೆ. ಈ ವಿಚಾರದಲ್ಲಿ ಸಮಗ್ರ ತನಿಖೆ ನಡೆಸುವುದಾಗಿ ಮುಖ್ಯಮಂತ್ರಿಗಳೇ ಹೇಳಿದ್ದಾರೆ ಎಂದು ಅವರು ತಿಳಿಸಿದರು. ಪಕ್ಷದಲ್ಲಿ ನನ್ನ ವಿರುದ್ಧ ಯಾವುದೇ ಅಸಮಾಧಾನವಿಲ್ಲ. ಇದೆಲ್ಲಾ ಸತ್ಯಕ್ಕೆ ದೂರವಾದ ವಿಚಾರಗಳು. ನಾನು ರಾಜ್ಯದಾದ್ಯಂತ ಸುತ್ತಿ ಜವಬ್ದಾರಿಯುತ ಕೆಲಸ ಮಾಡುತ್ತಿದ್ದೇನೆ. ಕಾರ್ಯಕರ್ತರು ಎಲ್ಲಾ ಕಡೆಯೂ ಉತ್ತಮ ಸಹಕಾರ ನೀಡುತ್ತಿದ್ದಾರೆ ಎಂದರು.
ಈ ಸಂದರ್ಭ ಕುಂದಾಪುರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಹರಿಪ್ರಸಾದ್ ಶೆಟ್ಟಿ ಕಾನ್ಮಕ್ಕಿ, ವಂಡ್ಸೆ ಬ್ಲಾಕ್ ಅಧ್ಯಕ್ಷ ಪ್ರದೀಪ್ ಕುಮಾರ್ ಶೆಟ್ಟಿ ಗುಡಿಬೆಟ್ಟು, ಬೈಂದೂರು ಬ್ಲಾಕ್ ಅಧ್ಯಕ್ಷ ಅರವಿಂದ ಪೂಜಾರಿ, ಪ್ರಮುಖರಾದ ದಿನೇಶ್ ಹೆಗ್ಡೆ ಮೊಳಹಳ್ಳಿ, ಅಶೋಕ್ ಪೂಜಾರಿ ಬೀಜಾಡಿ ಹಾಜರಿದ್ದರು.