ಕೊಂಕಣ ರೈಲ್ವೆ: ಟಿಕೆಟ್ ರಹಿತ ಪ್ರಯಾಣಿಕರಿಂದ 1.95ಕೋಟಿ ರೂ.ದಂಡ ವಸೂಲು
ಉಡುಪಿ: ಕೊಂಕಣ ರೈಲ್ವೆಯು ಕಳೆದ ಡಿಸೆಂಬರ್ ಒಂದೇ ತಿಂಗಳಲ್ಲಿ ರೈಲುಗಳಲ್ಲಿ ಟಿಕೆಟ್ ರಹಿತವಾಗಿ ಪ್ರಯಾಣಿಸುತಿದ್ದ ಒಟ್ಟು 6,675 ಮಂದಿ ಪ್ರಯಾಣಿಕರಿಂದ 1,95,64,926ರೂ. ದಂಡವನ್ನು ವಸೂಲಿ ಮಾಡಿದೆ ಎಂದು ಕೊಂಕಣ ರೈಲ್ವೆ ಪ್ರಕಟಣೆ ತಿಳಿಸಿದೆ.
ಇತ್ತೀಚಿನ ದಿನಗಳಲ್ಲಿ ಕೊಂಕಣ ರೈಲ್ವೆ ಮಾರ್ಗದಲ್ಲಿ ಸಂಚರಿಸುವ ರೈಲುಗಳಲ್ಲಿ ನಿರಂತರವಾಗಿ ಟಿಕೆಟ್ ತಪಾಸಣಾ ವ್ಯವಸ್ಥೆ ಜಾರಿಯಲ್ಲಿದ್ದು, ಟಿಕೆಟ್ ಇಲ್ಲದೇ ಅನಧಿಕೃತವಾಗಿ ಪ್ರಯಾಣಿಸುತ್ತಿರುವವರನ್ನು ಪತ್ತೆ ಹಚ್ಚಿ ಅವರಿಂದ ದಂಡವನ್ನು ವಸೂಲಿ ಮಾಡಲಾಗುತ್ತಿದೆ.
ಕಳೆದ ತ್ರೈಮಾಸಿಕದಲ್ಲಿ (2023ರ ಅಕ್ಟೋಬರ್ನಿಂದ ಡಿಸೆಂಬರ್ ತನಕ) ಟಿಕೆಟ್ ರಹಿತ ಪ್ರಯಾಣಿಸುತ್ತಿದ್ದ 18,466 ಮಂದಿ ಪ್ರಯಾಣಿಕರನ್ನು ರೈಲ್ವೆ ಅಧಿಕಾರಿಗಳು ಪತ್ತೆ ಹಚ್ಚಿದ್ದು, ಅವರಿಂದ ಒಟ್ಟು 5,60,99,017 ರೂ ದಂಡ ವಸೂಲಿ ಮಾಡಿದ್ದಾರೆ ಎಂದೂ ಪ್ರಕಟಣೆಯಲ್ಲಿ ವಿವರಿಸಲಾಗಿದೆ.
ಕೊಂಕಣ ರೈಲ್ವೆಯಲ್ಲಿ ಪ್ರಯಾಣಿಸುವ ಪ್ರಯಾಣಿಕರು ಸರಿಯಾದ ಟಿಕೆಟ್ ನೊಂದಿಗೆ ಪ್ರಯಾಣಿಸುವಂತೆ ಮನವಿ ಮಾಡಿ ರುವ ಅಧಿಕಾರಿಗಳು, ಪ್ರಯಾಣದ ನಡುವೆ ಉಂಟಾಗುವ ಅನಾನುಕೂಲತೆ ತಪ್ಪಿಸಲು ನೆರವಾಗುವಂತ ಕೋರಿದ್ದಾರೆ. ಕೆಆರ್ಸಿಎಲ್ನ ಮಾರ್ಗದಲ್ಲಿ ಮುಂದೆಯೂ ನಿರಂತರವಾಗಿ ಟಿಕೆಟ್ ತಪಾಸಣೆ ಪ್ರಕ್ರಿಯೆ ಮುಂದುವರಿಯಲಿದೆ ಎಂದು ತಿಳಿಸಿದ್ದಾರೆ.