6700 ಕಿ.ಮೀ, 15 ರಾಜ್ಯಗಳು: ‘ಭಾರತ್ ಜೋಡೋ ನ್ಯಾಯ್ ಯಾತ್ರೆ’ ಪಕ್ಷಕ್ಕೆ, ದೇಶಕ್ಕೆ ಮಹತ್ವದ ದಿನ’- ಡಿ.ಕೆ ಶಿವಕುಮಾರ್
ಬೆಂಗಳೂರು: ರಾಹುಲ್ ಗಾಂಧಿ ನೇತೃತ್ವದ ಭಾರತ್ ಜೋಡೋ ನ್ಯಾಯ್ ಯಾತ್ರೆ ಆರಂಭಕ್ಕೆ ಕ್ಷಣಗಣನೆ ಆರಂಭವಾಗಿರುವಂತೆಯೇ ಇದು ಪಕ್ಷಕ್ಕೆ, ದೇಶಕ್ಕೆ ಮಹತ್ವದ ದಿನ ಎಂದು ಕರ್ನಾಟಕ ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಹೇಳಿದ್ದಾರೆ.
ಭಾರತ್ ಜೋಡೋ ನ್ಯಾಯ್ ಯಾತ್ರೆ ಕುರಿತು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ”ಕಾಂಗ್ರೆಸ್ ಪಕ್ಷಕ್ಕೆ ಮತ್ತು ದೇಶಕ್ಕೆ ಇದು ಅತ್ಯಂತ ಮಹತ್ವದ ದಿನ. ದೇಶ ಒಗ್ಗಟ್ಟಾಗಲಿ ಎಂದು ಹಾರೈಸುತ್ತೇನೆ… ಈ ಯಾತ್ರೆ ಲೋಕಸಭೆಗೆ ಮಾತ್ರವಲ್ಲ, ನಿರುದ್ಯೋಗ, ಬೆಲೆ ಏರಿಕೆ, ಮತ್ತು ಯಾವುದೇ ಇತರ ಸಮಸ್ಯೆಗಳಿಂದ ದೇಶವನ್ನು ರಕ್ಷಿಸುವ ನಿಟ್ಟಿನಲ್ಲಿ ಈ ಯಾತ್ರೆ ಮಹತ್ವದ್ದಾಗಿದೆ” ಎಂದು ಹೇಳಿದರು.
6700 ಕಿಮೀ, 15 ರಾಜ್ಯಗಳು
ಇನ್ನು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ನೇತೃತ್ವದಲ್ಲಿ ನಡೆಯುತ್ತಿರುವ ಭಾರತ್ ಜೋಡೋ ನ್ಯಾಯ್ ಯಾತ್ರೆ ಆರಂಭಕ್ಕೆ ಕ್ಷಣಗಣನೆ ಆರಂಭವಾಗಿದೆ. ಕಳೆದ ವರ್ಷ ನಡೆದ ಭಾರತ್ ಜೋಡೋ ಯಾತ್ರೆಯ ಭರ್ಜರಿ ಯಶಸ್ಸಿನ ಖುಷಿಯಲ್ಲಿರುವ ಕಾಂಗ್ರೆಸ್ ಪಕ್ಷ ಇದೀಗ ಮತ್ತೊಂದು ಸುತ್ತಿನ ಯಾತ್ರೆಯನ್ನು ನಡೆಸಲು ಸಜ್ಜಾಗಿದ್ದು, ಇಂದಿನಿಂದ 6713 ಕಿಲೋ ಮೀಟರ್ ನಡಿಗೆಯ ಮೂಲಕ ಹೊಸ ಯಾತ್ರೆ ನಡೆಯಲಿದೆ.
ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ನೇತೃತ್ವದಲ್ಲಿ ಭಾರತ್ ಜೋಡೋ ನ್ಯಾಯ ಯಾತ್ರೆ ಜನವರಿ 14ರಿಂದ ನಡೆಯಲಿದ್ದು, ಇಂಫಾಲದಿಂದ ಆರಂಭವಾಗಲಿರುವ ಈ ಯಾತ್ರೆಯು, ಮಾರ್ಚ್ 20ರಂದು ಪೂರ್ಣಗೊಳ್ಳಲಿದೆ. ಈಗಾಗಲೇ ಮಣಿಪುರದ ಇಂಫಾಲದಲ್ಲಿ ಭಾರತ್ ಜೋಡೋ ನ್ಯಾಯ ಯಾತ್ರೆ ಯಾತ್ರೆಯ ಸಿದ್ಧತೆಗಳು ಪೂರ್ಣಗೊಂಡಿದ್ದು, ಈ ಪ್ರಯಾಣವು ತೌಬಲ್ ಜಿಲ್ಲೆಯ ಖಂಗ್ಜೋಮ್ನಿಂದ ಪ್ರಾರಂಭವಾಗುತ್ತದೆ. ಯಾತ್ರೆಯ ಆರಂಭದ ದಿನದಲ್ಲಿ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರು ವಿವಿಧ ಸ್ಥಳಗಳಲ್ಲಿ ನಿಂತು ಸ್ಥಳೀಯ ಜನರೊಂದಿಗೆ ಸಂವಾದ ನಡೆಸಲಿದ್ದಾರೆ ಮತ್ತು ಸಾರ್ವಜನಿಕ ಸಭೆಗಳನ್ನು ಉದ್ದೇಶಿಸಿ ಮಾತನಾಡಲಿದ್ದಾರೆ. ಇದಾದ ಬಳಿಕ ಯಾತ್ರೆ ಮುಗಿಯುವ ದಿನ ರಾಹುಲ್ ಗಾಂಧಿ ಪತ್ರಿಕಾಗೋಷ್ಠಿ ನಡೆಸಬಹುದು ಎಂದು ಮೂಲಗಳು ತಿಳಿಸಿವೆ.
ಕಾಂಗ್ರೆಸ್ ಮೂಲಗಳ ಪ್ರಕಾರ, ರಾಹುಲ್ ಗಾಂಧಿ ಅವರು ಇಂದು ಬೆಳಗ್ಗೆ 11 ಗಂಟೆಗೆ ಇಂಫಾಲ್ಗೆ ತಲುಪಲಿದ್ದು, ನಂತರ ಖೊಂಗ್ಜೋಮ್ ಯುದ್ಧ ಸ್ಮಾರಕಕ್ಕೆ ಭೇಟಿ ನೀಡಲಿದ್ದಾರೆ. ಇದಾದ ಬಳಿಕ ಥೋಬಾಲ್ನಲ್ಲಿ ಸಭೆ ನಡೆಯಲಿದ್ದು, ನಂತರ ರಾಹುಲ್ ಗಾಂಧಿ ನೇತೃತ್ವದಲ್ಲಿ ಈ ಯಾತ್ರೆ ಆರಂಭವಾಗಲಿದೆ. ಕಾಂಗ್ರೆಸ್ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಯಾತ್ರೆಗೆ ಚಾಲನೆ ನೀಡಲಿದ್ದಾರೆ.