ಇಂದು ಉದ್ಯಾವರದಲ್ಲಿ ಬಹುನಿರೀಕ್ಷೆಯ ಅದ್ಧೂರಿ ಯಕ್ಷಗಾನ “ಸಾಗರ ಸಂಗಮ”
ಉಡುಪಿ: ಈ ಬಾರಿಯ ಬಡಗುತಿಟ್ಟು ಯಕ್ಷಗಾನ ಮೇಳದಲ್ಲಿ ಯಶಸ್ವಿಯಾಗಿ ಮೂಡಿಬಂದ ಶ್ರೀ ನಂದಿಕೇಶ್ವರ ಪ್ರಸಾದಿತ ಯಕ್ಷಗಾನ ಮಂಡಳಿ, ಶ್ರೀಕ್ಷೇತ್ರ ಮೆಕ್ಕೆಕಟ್ಟು, ಶಿರಿಯಾರ ಇವರ ದೇವದಾಸ್ ಈಶ್ವರಮಂಗಲ ವಿರಚಿತ ಸಾಗರ ಸಂಗಮ ಎಂಬ ಯಶಸ್ವಿ ಯಕ್ಷಗಾನ ಪ್ರದರ್ಶನ ಉಡುಪಿ ಉದ್ಯಾವರದ ಗುಡ್ಡೆಅಂಗಡಿಯಲ್ಲಿ ನಡೆಯಲಿದೆ.
ಕಾಲಮಿತಿಯ ಅವಧಿಯಲ್ಲಿ ನಡೆಯುವ ಈ ಯಕ್ಷಗಾನ ಪ್ರದರ್ಶನದ ಮೆಕ್ಕೆಕಟ್ಟು ಮೇಳದಲ್ಲಿ ಪ್ರಖ್ಯಾತ ಕಲಾವಿದರಾದ ಶ್ರೀ ವಿದ್ಯಾದರ ಜಲವಳ್ಳಿ ರಾವ್, ಕನ್ನಿಮನೆ ಕಾರ್ತಿಕ್ ಭಟ್, ಚಿಟ್ಟಾಣಿ ಸುಬ್ರಮಣ್ಯ ಹೆಗಡೆ, ನೀಲ್ಗೋಡು ಶಂಕರ ಹೆಗಡೆ, ರಮೇಶ್ ಭಂಡಾರಿ, ಪ್ರಖ್ಯಾತ ಭಾಗವತರಾದ ಬ್ರಹ್ಮೂರು ಶಂಕರ್ ಭಟ್, ಆರ್ಡಿ ಸಂತೋಷ್, ಚಂಡೆಯಲ್ಲಿ ಸುಪ್ರಸಿದ್ದ ಚಂಡಾ ವಾದಕ ಸುಜನ್ ಹಾಲಾಡಿ, ಮದ್ದಳೆಯಲ್ಲಿ ಶಶಾಂಕ್ ಆಚಾರ್ಯ ಮಿಂಚಲಿದ್ದಾರೆ.
ಕಳೆದ ವರ್ಷದ ಮಕರ ಸಂಕ್ರಮಣ ದಿನದಂದು ಶ್ರೀ ಗೆಜ್ಜೆ ಗಿರಿ ಕ್ಷೇತ್ರ ಮಹಾತ್ಮೆ ಯಕ್ಷಗಾನ ಪ್ರದರ್ಶನ ಮಾಡಿ ಭಾರೀ ಪ್ರಶಂಸೆಗೆ ಪಾತ್ರರಾಗಿದ್ದ ಶ್ರೀನಾರಾಯಣ ಗುರು ಯುವ ವೇದಿಕೆ, ಶ್ರೀ ನಾರಾಯಣ ಗುರುಗಳ ಚರಿತ್ರೆ ಆಧಾರಿತ ಶೂದ್ರ ಶಿವ ನಾಟಕ ಪ್ರದರ್ಶನ ಕೂಡ ಯಶಸ್ವಿಯಾಗಿ ನಿರ್ವಹಣೆ ಮಾಡಿ ಸಾರ್ವಜನಿಕರ ಪ್ರಶಂಸೆಗೆ ಪಾತ್ರವಾಗಿತ್ತು.
ವಿಶಿಷ್ಟ ವಿದ್ಯುತ್ ದೀಪ ಅಲಂಕಾರ, ಎರಡು ಸಾವಿರ ಆಸನಗಳ ವ್ಯವಸ್ಥೆ ಮತ್ತು ಇನ್ನಿತರ ವೈವಿಧ್ಯಗಳಿಂದ ನಡೆಯಲಿರುವ ಈ ಯಕ್ಷಗಾನ ಅತ್ಯಂತ ಯಶಸ್ವಿಯಾಗಿ ಮೂಡಿಬರಲಿದೆ ಎಂದು ಕಾರ್ಯಕ್ರಮದ ಸಂಘಟಕರಾದ ಶ್ರೀ ನಾರಾಯಣ ಗುರು ಯುವ ವೇದಿಕೆಯ ಪದಾಧಿಕಾರಿಗಳು ತಿಳಿಸಿದ್ದಾರೆ.