ತಿರುಪತಿ ದೇಗುಲಕ್ಕೆ ಆರ್ಥಿಕ ಸಂಕಷ್ಟ, ಆಸ್ತಿಗಳ ಮಾರಾಟಕ್ಕೆ ಚಿಂತನೆ

ತಿರುಮಲ‌: ಭಕ್ತಾದಿಗಳು ತಿರುಮಲ ತಿರುಪತಿ ದೇಗುಲಕ್ಕೆ (ಟಿಟಿಡಿ) ಕಾಣಿಕೆಯಾಗಿ ಸಲ್ಲಿಸಿರುವ ಜಮೀನುಗಳು ಹಾಗೂ ಕಟ್ಟಡಗಳು ಸೇರಿದಂತೆ ಆಸ್ತಿಗಳ ಮಾರಾಟಕ್ಕೆ ಅಧಿಕಾರಿಗಳು ಚಿಂತನೆ ನಡೆಸುತ್ತಿದ್ದಾರೆ. ದೇಗುಲ ಜೂನ್‌ ವೇಳೆಗೆ ಪುನರಾರಂಭವಾಗದೆ ಇದ್ದರೆ, ಲಾಕ್‌ಡೌನ್‌ನಿಂದಾಗಿ ಉಂಟಾಗಿರುವ ಆರ್ಥಿಕ ಸಂಕಷ್ಟ ನಿಭಾಯಿಸಲು ಹಾಗೂ ಸಿಬ್ಬಂದಿಗೆ ವೇತನ ನೀಡಲು ಅಧಿಕಾರಿಗಳು ಈ ಕ್ರಮ ಕೈಗೊಳ್ಳಲಿದ್ದಾರೆ.


ಟಿಟಿಡಿ ಪ್ರತಿ ತಿಂಗಳು ವೇತನ ಹಾಗೂ ಪಿಂಚಣಿಗೆ ₹ 115 ಕೋಟಿ ವೆಚ್ಚ ಮಾಡಬೇಕಿದೆ. ಇದರ ಹೊರತಾಗಿ ಇತರೆ ನಿರ್ವಹಣಾ ವೆಚ್ಚಗಳು ಸಹ ಇವೆ. ಗುತ್ತಿಗೆ, ಹೊರಗುತ್ತಿಗೆ ಹಾಗೂ ಕಾಯಂ ಸೇರಿದಂತೆ ಒಟ್ಟು 22 ಸಾವಿರ ಸಿಬ್ಬಂದಿ ಟಿಟಿಡಿಯಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ. 7 ಸಾವಿರಕ್ಕೂ ಹೆಚ್ಚು ಕಾಯಂ ಸಿಬ್ಬಂದಿ ಮಾರ್ಚ್‌ನಿಂದ ಅರ್ಧ ವೇತನ ಪಡೆಯುತ್ತಿದ್ದಾರೆ.

‘ದೇಗುಲ ಸುಮಾರು ₹ 14 ಸಾವಿರ ಕೋಟಿ ನಿಶ್ಚಿತ ಠೇವಣಿ ಹೊಂದಿದ್ದು, ಈ ವರ್ಷ ₹ 706 ಕೋಟಿ ಬಡ್ಡಿ ಗಳಿಸಲಿದೆ. ಸುಮಾರು 8 ಟನ್‌ನಷ್ಟು ಚಿನ್ನದ ಸಂಗ್ರಹ ಹೊಂದಿದೆ. ಆದರೆ ಭಾವನಾತ್ಮಕ ಬೆಲೆ ಹೊಂದಿರುವ ಇವುಗಳನ್ನು ಬಳಸುವ ಆಯ್ಕೆ ಇನ್ನೂ ನಮ್ಮ ಮುಂದಿಲ್ಲ’ ಎಂದು ಅಧಿಕಾರಿಗಳು ಹೇಳಿದ್ದಾರೆ.

‘ಅಂತಹ ಸ್ಥಿತಿ ಎದುರಾಗುವುದಿಲ್ಲ. ದೇವರ ದಯೆಯಿಂದ ದೇಗುಲ ಇನ್ನೊಂದು ತಿಂಗಳಲ್ಲಿ ಭಕ್ತಾದಿಗಳ ಪ್ರವೇಶಕ್ಕೆ ಮುಕ್ತವಾಗುವ ವಿಶ್ವಾಸ ಇದೆʼ ಎಂದು ಟಿಟಿಡಿ ಮಂಡಳಿ ಮುಖ್ಯಸ್ಥ ವೈವಿ ಸುಬ್ಬಾರೆಡ್ಡಿ ಹೇಳಿದ್ದಾರೆ.

‘ಹುಂಡಿ ಕಾಣಿಕೆ, ಲಡ್ಡುಗಳ ಮಾರಾಟ ಹಾಗೂ ವಿಶೇಷ ದರ್ಶನದಿಂದ ದೇಗುಲಕ್ಕೆ ಪ್ರತಿ ತಿಂಗಳು  ದೊರಕುತ್ತಿದ್ದ ಸುಮಾರು ₹ 200 ಕೋಟಿ ಆದಾಯ ನಿಂತುಹೋಗಿದೆ. ಆದರೂ ಮಾರ್ಚ್‌, ಏಪ್ರಿಲ್‌ ವೇತನ ಪಾವತಿಸಿದ್ದೇವೆ. ಮೇ ತಿಂಗಳ ವೇತನಕ್ಕೂ ವ್ಯವಸ್ಥೆ ಮಾಡಿದ್ದೇವೆ. ಜೂನ್‌ನಲ್ಲಿ ಸಹ ದೇಗುಲದ ಮೂಲನಿಧಿ, ಠೇವಣಿ ಅಥವಾ ಚಿನ್ನವನ್ನು ಉಪಯೋಗಿಸದೆ ಪರಿಸ್ಥಿತಿ ನಿರ್ವಹಿಸಲು ಯತ್ನಿಸುತ್ತೇವೆ’ ಎಂದು ಅವರು ಹೇಳಿದ್ದಾರೆ.

‘ಚೆನ್ನೈ, ಮುಂಬೈ ಸಹಿತ ದೇಶದೆಲ್ಲೆಡೆ ಟಿಟಿಡಿಗೆ ಸೇರಿದ ಭೂಮಿ, ಕಾಟೇಜ್‌ಗಳು ಹಾಗೂ ಬಳಸದಿರುವ ಇತರೆ ಸ್ವತ್ತುಗಳ ಮೌಲ್ಯ ಅಂದಾಜು ಸಾವಿರಾರು ಕೋಟಿ ರೂಪಾಯಿ. ಆದರೆ ಪ್ರಸ್ತುತ ಉದ್ದೇಶಕ್ಕಾಗಿ ಕೆಲವು ನೂರು ಕೋಟಿ ರೂಪಾಯಿಗಳ ಮೌಲ್ಯದ ಸ್ವತ್ತುಗಳನ್ನು ಮಾತ್ರ ನಗದೀಕರಿಸಲು ಗುರುತಿಸಲಾಗುತ್ತದೆ’ ಎಂದು ಮೂಲಗಳು ಹೇಳಿವೆ.  

Leave a Reply

Your email address will not be published. Required fields are marked *

error: Content is protected !!