ಉಡುಪಿ: ಶೇ.60ರಷ್ಟು ಆತ್ಮಹತ್ಯೆಗೆ ಮದ್ಯಪಾನ ಕಾರಣ- ಎಸ್ಸೈ ರಾಘವೇಂದ್ರ
ಉಡುಪಿ: ಕಮಲ್ ಎ. ಬಾಳಿಗಾ ಚಾರಿಟೇಬಲ್ ಟ್ರಸ್ಟ್, ಡಾ.ಎ.ವಿ. ಬಾಳಿಗಾ ಸ್ಮಾರಕ ಆಸ್ಪತ್ರೆ, ಭಾರತೀಯ ವೈದ್ಯಕೀಯ ಸಂಘ ಉಡುಪಿ-ಕರಾವಳಿ ಆಶ್ರಯದಲ್ಲಿ ಆಸ್ಪತ್ರೆಯಲ್ಲಿ ಕಳೆದ 10 ದಿನಗಳಿಂದ ಜರಗಿದ 32ನೇ ಮದ್ಯವ್ಯಸನ ವಿಮುಕ್ತಿ ವಸತಿ ಶಿಬಿರ ಸಮಾರೋಪ ಮಂಗಳವಾರ ನಡೆಯಿತು.
ಮಣಿಪಾಲ ಪೊಲೀಸ್ ಠಾಣೆಯ ಪೊಲೀಸ್ ಉಪನಿರೀಕ್ಷಕ ರಾಘವೇಂದ್ರ ಮಾತನಾಡಿ, ವ್ಯಸನ ಮುಕ್ತ ಜೀವನದಲ್ಲಿ ನೆಮ್ಮದಿ ಇರುತ್ತದೆ. ಹೆಚ್ಚಿನ ಅಪರಾಧ, ಅಪಘಾತ ಪ್ರಕರಣ ಸಂಭವಿಸಲು ಮದ್ಯಪಾನವು ಒಂದು ಕಾರಣವಾಗಿದೆ. ಜಿಲ್ಲೆಯಲ್ಲಿ ಒಂದೇ ವರ್ಷದಲ್ಲಿ 800 ಅಸ್ವಾಭಾವಿಕ ಮರಣ ಪ್ರಕರಣಗಳು ದಾಖಲಾಗುತ್ತವೆ. ಶೇ.60ರಷ್ಟು ಆತ್ಮಹತ್ಯೆ ಪ್ರಕರಣವು ಮದ್ಯಪಾನ, ಮಾನಸಿಕ ಅಸ್ವಸ್ಥತೆಯಿಂದ ಸಂಭವಿಸುತ್ತದೆ ಎಂದು ತಿಳಿಸಿದರು.
ಉಡುಪಿ-ಕರಾವಳಿ ಭಾರತೀಯ ವೈದ್ಯಕೀಯ ಸಂಘದ ಕಾರ್ಯದರ್ಶಿ ಡಾ. ಅರ್ಚನಾ ಭಕ್ತ ಮಾತನಾಡಿ, ಮದ್ಯಪಾನ ದಿಂದ ಆಗುವ ಸಮಸ್ಯೆಗಳು, ಅದರಿಂದ ಹೊರಬಂದು ಉತ್ತಮ ಜೀವನ ರೂಪಿಸಿಕೊಳ್ಳುವ ನಿಟ್ಟಿನಲ್ಲಿ ಆಯೋಜಿಸಲಾಗುತ್ತಿರುವ ಈ ಶಿಬಿರವು ಶಾಂತಿ, ನೆಮ್ಮದಿಯ ಸಮಾಜ ನಿರ್ಮಾಣಕ್ಕೆ ಮಾದರಿಯಾಗಿದೆ ಎಂದು ಹೇಳಿದರು.
ಅಧ್ಯಕ್ಷತೆಯನ್ನು ಆಸ್ಪತ್ರೆ ನಿರ್ದೇಶಕ ಡಾ.ಪಿ.ವಿ. ಭಂಡಾರಿ ವಹಿಸಿದ್ದರು. ಕೆಎಂಸಿ ಫೊರೆನ್ಸಿಕ್ ವಿಭಾಗದ ಪ್ರಧ್ಯಾಪಕ ಡಾ.ವಿನೋದ್ ಸಿ.ನಾಯಕ್, ಮನೋ ವೈದ್ಯರಾದ ಡಾ.ದೀಪಕ್ ಮಲ್ಯ, ಡಾ. ಮಾನಸ್ ಆರ್. ಉಪಸ್ಥಿತರಿದ್ದರು.
ಆಡಳಿತಾಧಿಕಾರಿ ಸೌಜನ್ಯ ಶೆಟ್ಟಿ ಸ್ವಾಗತಿಸಿದರು. ಪದ್ಮಾ ರಾಘವೇಂದ್ರ ಶಿಬಿರದ ಸಂಕ್ಷಿಪ್ತ ವರದಿ ವಾಚಿಸಿದರು. ಪೂರ್ಣಿಮಾ, ಶ್ವೇತಾ ಬಹುಮಾನಿತರ ಪಟ್ಟಿ ವಾಚಿಸಿದರು. ನರ್ಸಿಂಗ್ ಮೇಲ್ವಿಚಾರಕಿ ಪ್ರಮಿಳಾ ಡಿಸೋಜ ಕಾರ್ಯಕ್ರಮ ನಿರೂಪಿಸಿದರು. ತೆಂಕನಿಡಿಯೂರು ಕಾಲೇಜು ವಿದ್ಯಾರ್ಥಿಗಳು ಮದ್ಯಪಾನ ದಿಂದ ಆಗುವ ಸಮಸ್ಯೆಗಳ ಬಗ್ಗೆ ಅರಿವು ಮೂಡಿಸುವ ನಾಟಕ ಪ್ರದರ್ಶಿಸಿದರು.