ನನ್ನ ಹೇಳಿಕೆಯನ್ನು ತಪ್ಪಾಗಿ ಅರ್ಥೈಸಲಾಗಿದೆ: ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಸ್ಪಷ್ಟನೆ
ಬೆಂಗಳೂರು: ಬೆಳಗಾವಿ ಎಂದೆಂದಿಗೂ ಕರ್ನಾಟಕದ ಅವಿಭಾಜ್ಯ ಅಂಗ. ಬೆಳಗಾವಿ ಮಹಾರಾಷ್ಟ್ರಕ್ಕೆ ಸೇರಿತ್ತು ಎಂಬ ತಮ್ಮ ಹೇಳಿಕೆಯನ್ನು ತಪ್ಪಾಗಿ ಅರ್ಥೈಸಬೇಡಿ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ, ವಿಕಲ ಚೇತನರ ಹಾಗೂ ಹಿರಿಯ ನಾಗರೀಕರ ಸಬಲೀಕರಣ ಸಚಿವರು ಹಾಗೂ ಉಡುಪಿ ಜಿಲ್ಲಾ ಉಸ್ತುವಾರಿ ಸಚಿವರಾದ ಲಕ್ಷ್ಮೀ ಆರ್ ಹೆಬ್ಬಾಳ್ಕರ್ ಮನವಿ ಮಾಡಿದ್ದಾರೆ.
ಕ್ವೀನ್ಸ್ ರಸ್ತೆಯಲ್ಲಿರುವ ಇಂದಿರಾಗಾಂಧಿ ಭವನದಲ್ಲಿ ನಡೆದ ಜಿಲ್ಲಾ ಉಸ್ತುವಾರಿ ಸಚಿವರು ಹಾಗೂ ಜಿಲ್ಲಾ ಕಾಂಗ್ರೆಸ್ ಸಮಿತಿ ಅಧ್ಯಕ್ಷರುಗಳ ಸಭೆ ಬಳಿಕ ಮಾತನಾಡಿದ ಸಚಿವರು, ತಮ್ಮ ಹೇಳಿಕೆ ಬಗ್ಗೆ ಸ್ಪಷ್ಟಿಕರಣ ನೀಡಿದರು.
ನಾನು ಮುಂಬೈ ಪ್ರಾಂತ್ಯ ಅನ್ನೋ ಬದಲು ಬಾಯಿ ತಪ್ಪಿ ಮಹಾರಾಷ್ಟ್ರ ಎಂದೇ. ಅದನ್ನು ತಪ್ಪಾಗಿ ಯಾರು ಅರ್ಥೈಸಬೇಡಿ. ಸ್ವಾತಂತ್ರ್ಯ ಪೂರ್ವ ಮಹಾರಾಷ್ಟ್ರ ರಾಜ್ಯವೇ ಇರಲಿಲ್ಲ ಎಂದು ಸಚಿವರು ಹೇಳಿದರು.
ಬೆಳಗಾವಿ ಜಿಲ್ಲೆಯ ನಿಪ್ಪಾಣಿ ತಾಲೂಕಿನ ಕಾರದಗಾ ಗ್ರಾಮದಲ್ಲಿ ಕಳೆದ ಭಾನುವಾರ ನಡೆದ ಕನ್ನಡ ಸಮಾವೇಶದ ಉದ್ಘಾಟನಾ ಸಮಾರಂಭದ ವೇಳೆ ಸಚಿವರು, ಬಾಯ್ತಪ್ಪಿ ಮುಂಬೈ ಪ್ರಾಂತ್ಯ ಎನ್ನುವ ಬದಲಿಗೆ ಮಹಾರಾಷ್ಟ್ರ ಎಂದು ಉಲ್ಲೇಖಿಸಿದ್ದರು. ನಂತರ ಅದೇ ದಿನ ಸ್ಪಷ್ಟನೆಯನ್ನೂ ನೀಡಿದ್ದರು.