ರೌಡಿ ಶೀಟರ್ ಆಕಾಶ ಭವನ ಶರಣ್ ಮೇಲೆ ಶೂಟೌಟ್
ಮಂಗಳೂರು: ರೌಡಿ ಶೀಟರ್ ಆಕಾಶಭವನ ಶರಣ್ ಮೇಲೆ ನಗರದ ಜಪ್ಪು ಕುಡ್ಪಾಡಿ ಬಳಿ ಶೂಟೌಟ್ ನಡೆದಿರುವುದಾಗಿ ತಿಳಿದುಬಂದಿದೆ.
ಜ.2ರಂದು ನಗರದ ಮೇರಿಹಿಲ್ ಬಳಿ ಅಪರಾಧ ಪತ್ತೆದಳ (ಸಿಸಿಬಿ)ದ ಪೊಲೀಸರ ಮೇಲೆ ರೌಡಿಶೀಟರ್ ಆಕಾಶಭವನ ಶರಣ್ ಕಾರು ಹಾಯಿಸಿ ಕೊಲೆಗೆ ಯತ್ನಿಸಿದ್ದ ಆರೋಪವಿತ್ತು. ಕೃತ್ಯ ಎಸಗಿದ ಬಳಿಕ ಆತ ತಲೆಮರೆಸಿಕೊಂಡಿದ್ದ. ಇದೀಗ ಜಪ್ಪು ಕುಡ್ಪಾಡಿ ಬಳಿ ಪೊಲೀಸರಿಂದ ಶೂಟೌಟ್ ನಡೆದಿದೆ ಎಂದು ತಿಳಿದು ಬಂದಿದೆ.
ಸುಳ್ಯದ ಕೆವಿಜಿ ಮೆಡಿಕಲ್ ಕಾಲೇಜಿನ ಆಡಳಿತಾಧಿಕಾರಿ ರಾಮಕೃಷ್ಣ ಕೊಲೆ ಪ್ರಕರಣದಲ್ಲಿ ರೇಣುಕಾಪ್ರಸಾದ್ ಸಹಿತ ಐದು ಮಂದಿಗೆ ಹೈಕೋರ್ಟ್ ಜೀವಾವಧಿ ಶಿಕ್ಷೆ ವಿಧಿಸಿತ್ತು. ಸುಪಾರಿ ಪಡೆದು ಕೊಲೆ ಕೃತ್ಯ ನಡೆಸಿದ್ದ ಆಕಾಶಭವನ ಶರಣ್ ಪೊಲೀಸರ ಕೈಗೆ ಸಿಗದೆ ತಪ್ಪಿಸಿಕೊಂಡಿದ್ದರಿಂದ ಶಿಕ್ಷೆ ಪ್ರಕಟವಾಗಿರಲಿಲ್ಲ. ಉಳಿದ ಐದು ಮಂದಿ ಜೈಲು ಸೇರಿದ್ದರೆ, ರೌಡಿಶೀಟರ್ ಶರಣ್ ತಲೆಮರೆಸಿಕೊಂಡಿದ್ದ. ಈತನ ಮೇಲೆ ಮಂಗಳೂರು ಮತ್ತು ಉಡುಪಿಯಲ್ಲಿ ಕೊಲೆ, ಕೊಲೆಯತ್ನ, ಅತ್ಯಾಚಾರ, ಹಫ್ತಾ ಸಹಿತ 21 ಕೇಸುಗಳು ದಾಖಲಾಗಿತ್ತು ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.