ಹಿರಿಯಡ್ಕ: ಅಡ್ಡಬಂದ ನಾಯಿ- ಬೈಕ್ ಸವಾರ ಮೃತ್ಯು
ಹಿರಿಯಡ್ಕ: ನಾಯಿಯೊಂದು ಮೋಟಾರ್ ಸೈಕಲ್ಗೆ ಅಡ್ಡಬಂದ ಕಾರಣ, ಅದನ್ನು ತಪ್ಪಿಸಲು ಹೋದ ಸವಾರ ಚರಂಡಿಗೆ ಉರುಳಿ, ತಲೆ ಮರಕ್ಕೆ ಬಡಿದ ಕಾರಣ ಸ್ಥಳದಲ್ಲೇ ಮೃತಪಟ್ಟ ಘಟನೆ ಗುಡ್ಡೆಅಂಗಡಿ-ಕಣಜಾರು ರಸ್ತೆಯ ಸಾಗು ಎಂಬಲ್ಲಿ ರವಿವಾರ ಸಂಜೆ ನಡೆದಿದೆ.
ಮೃತರನ್ನು ಬೈಕ್ ಸವಾರ ಪೆರ್ಡೂರು ಗ್ರಾಮದ ಮಂಜುನಾಥ್ (41) ಎಂದು ಗುರುತಿಸಲಾಗಿದೆ. ಮಂಜುನಾಥ್ ಇವರು ಬೈಕ್ನಲ್ಲಿ ಹೋಗುತ್ತಿರುವಾಗ ನಾಯಿಯೊಂದು ಹಠಾತ್ತನೆ ರಸ್ತೆಗೆ ಅಡ್ಡಬಂದಿತ್ತು. ಇದನ್ನು ತಪ್ಪಿಸಲು ಹೋದ ಮಂಜುನಾಥ್ ಬೈಕ್ ಮೇಲಿನ ನಿಯಂತ್ರಣ ಕಳೆದುಕೊಂಡು ರಸ್ತೆಯ ಬಲಬದಿಯ ಚರಂಡಿಗೆ ಬಿದ್ದಿದ್ದರು. ಅವರ ತಲೆ ರಸ್ತೆ ಬದಿಯ ಮರಕ್ಕೆ ಹಾಗೂ ಚರಂಡಿಯ ಬದಿಗೆ ಬಡಿದು ಅವರು ಸ್ಥಳದಲ್ಲೇ ಮೃತಪಟ್ಟರು.
ಈ ಬಗ್ಗೆ ಹಿರಿಯಡ್ಕ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.