ಉಡುಪಿ: ಪುತ್ತಿಗೆ ಮಠದ ಶ್ರೀಸುಗುಣೇಂದ್ರ ತೀರ್ಥರಿಗೆ ಪೌರಸನ್ಮಾನ
ಉಡುಪಿ: ವಿಶ್ವ ಪರ್ಯಟನೆ ಮುಗಿಸಿ ಉಡುಪಿಗೆ ಮರಳಿದಾಗ ಜನತೆ ನೀಡಿದ ಆತ್ಮೀಯ ಸ್ವಾಗತ, ತೋರಿದ ಪ್ರೀತಿಯಿಂದ ಹೃದಯ ತುಂಬಿ ಬಂದಿದೆ. ಭಗವಂತನ ಮೇಲೆ ಎಲ್ಲಾ ಭಾರವನ್ನು ಹಾಕಿ ಮುಂದಿನ ಎರಡು ವರ್ಷ ಕೃಷ್ಣನ ಸೇವೆ ಮಾಡುತ್ತೇನೆ ಎಂದು ಭಾವಿ ಪರ್ಯಾಯ ಪೀಠಾಧಿಪತಿ ಪುತ್ತಿಗೆ ಮಠದ ಶ್ರೀಸುಗುಣೇಂದ್ರ ತೀರ್ಥರು ಹೇಳಿದ್ದಾರೆ.
ಜ.18ರಂದು ನಾಲ್ಕನೇ ಬಾರಿಗೆ ಪರ್ಯಾಯ ಪೀಠಾರೋಹಣ ಮಾಡಲಿರುವ ಪುತ್ತಿಗೆ ಶ್ರೀಗಳು, ಶಿಷ್ಯ ಶ್ರೀಸುಶ್ರೀಂದ್ರ ತೀರ್ಥರೊಂದಿಗೆ ತೀರ್ಥಯಾತ್ರೆ ಮುಗಿಸಿ ಇಂದು ಪುರಪ್ರವೇಶಿಸಿ, ಸಂಜೆ ರಥಬೀದಿಯ ಶ್ರೀಆನಂದತೀರ್ಥ ಮಂಟಪದಲ್ಲಿ ನಗರಸಭೆ ವತಿಯಿಂದ ಹಾಗೂ ಪರ್ಯಾಯ ಸ್ವಾಗತ ಸಮಿತಿ ವತಿಯಿಂದ ಆಯೋಜಿಸಲಾದ ಪೌರಸನ್ಮಾನವನ್ನು ಸ್ವೀಕರಿಸಿ ಮಾತನಾಡುತಿದ್ದರು.
ತಮ್ಮ ಪರ್ಯಾಯ ಪೀಠಾರೋಹಣಕ್ಕೆ ಕೃಷ್ಣನ ಅನುಗ್ರಹವೂ ದೊರಕಿದೆ. ಕೃಷ್ಣನ ಇಚ್ಛೆಯ ಪ್ರಕಾರವೇ ರಾಜ್ಯ ಉಚ್ಛ ನ್ಯಾಯಾಲಯ ಇಂದು ತಮ್ಮ ಪೀಠಾರೋಹಣಕ್ಕೆ ಅಡ್ಡಿಪಡಿಸುವ ಪ್ರಯತ್ನಕ್ಕೆ ತಡೆಯೊಡ್ಡಿ ಕೃಷ್ಣನ ಪೂಜೆಗೆ ಅನುಮತಿ ನೀಡಿದೆ ಎಂದು ತಾವು ಭಾವಿಸುವುದಾಗಿ ಹೇಳಿದರು.
ಹೀಗಾಗಿ ಪ್ರತಿಯೊಬ್ಬರು ದೇವರನ್ನು ನಂಬಿ, ಆತನ ಮೇಲೆ ಎಲ್ಲಾ ಭಾರ ಹಾಕಿ ಆರಾಮವಾಗಿರಬೇಕು ಎಂದು ಕರೆ ನೀಡಿದ ಅವರು, ತಾವು ಅನ್ನಬ್ರಹ್ಮನೊಂದಿ ಗೆ ಜ್ಞಾನಬ್ರಹ್ಮನ ಸೇವೆಯನ್ನು ಮಾಡುವುದಾಗಿ ತಿಳಿಸಿ ಅವರು ತಮ್ಮ ಪರ್ಯಾಯ ವನ್ನು ವಿಶ್ವ ಪರ್ಯಾಯ ವಾಗಿಸಲು ಎಲ್ಲರ ಸಹಕಾರ ಕೋರಿದರು.
ಉಡುಪಿ ನಗರಸಭೆಯ ಆಡಳಿತಾಧಿಕಾರಿಯಾಗಿರುವ ಜಿಲ್ಲಾಧಿಕಾರಿ ಡಾ.ಕೆ.ವಿದ್ಯಾಕುಮಾರಿ ನೇತೃತ್ವದಲ್ಲಿ ನಗರಸಭೆಯ ಅಧಿಕಾರಿಗಳು ಸ್ವಾಮೀಜಿ ಅವರಿಗೆ ಪೌರಸನ್ಮಾನ ಮಾಡಿದರು. ಡಾ.ವಿದ್ಯಾಕುಮಾರಿ ಹಾಗೂ ಪೌರಾಯುಕ್ತ ರಾಯಪ್ಪ ಅವರು ಸ್ವಾಮೀಜಿಯವರಿಗೆ ಶಾಲು ಹೊದಿಸಿ, ಫಲಪುಷ್ಪ ಗಳನ್ನು ನೀಡಿ ಸನ್ಮಾನ ಪತ್ರ ಅರ್ಪಿಸಿದರು.
ಬಳಿಕ ಪರ್ಯಾಯ ಸ್ವಾಗತಿ ಸಮಿತಿಯ ವತಿಯಿಂದ ಅಧ್ಯಕ್ಷ ಡಾ.ಎಚ್.ಎಸ್.ಬಲ್ಲಾಳ್, ಕಾರ್ಯಾಧ್ಯಕ್ಷ ಮಾಜಿ ಶಾಸಕ ಕೆ.ರಘುಪತಿ ಭಟ್ ಅವರ ನೇತೃತ್ವದಲ್ಲಿ ಉಭಯ ಸ್ವಾಮೀಜಿ ಅವರನ್ನು ಸನ್ಮಾನಿಸಲಾಯಿತು.
ಡಾ.ಎಚ್.ಎಸ್.ಬಲ್ಲಾಳ್ ಪ್ರಾಸ್ತಾವಿಕವಾಗಿ ಮಾತನಾಡಿದರೆ, ರಘುಪತಿ ಭಟ್ ಸ್ವಾಗತಿಸಿರು. ಪ್ರೊ. ಹರಿಪ್ರಸಾದ್ ಭಟ್ ಹೆರ್ಗ ಅಭಿನಂದನಾ ಭಾಷಣ ಮಾಡಿದರು. ಕಂದಾಯ ಅಧಿಕಾರಿ ಸಂತೋಷ್ ಮಾನಪತ್ರ ವಾಚಿಸಿದರು. ಡಾ.ಗೋಪಾ ಲಾಚಾರ್ಯ ಕಾರ್ಯಕ್ರಮ ನಿರೂಪಿಸಿದರು.
ಪುತ್ತಿಗೆ ಪರ್ಯಾಯೋತ್ಸವ: ಸುಗುಣೇಂದ್ರ ಶೀಗಳ ಅದ್ದೂರಿ ಪುರಪ್ರವೇಶ: ಭಾವಿ ಪರ್ಯಾಯ ಪೀಠವನ್ನೇರಲಿರುವ ಪುತ್ತಿಗೆ ಮಠದ ಶ್ರೀ ಸುಗುಣೇಂದ್ರ ತೀರ್ಥ ಶ್ರೀಪಾದರ ಪುರಪ್ರವೇಶ ಸೋಮವಾರ ಅದ್ದೂರಿಯಾಗಿ ನಡೆಯಿತು. ಶ್ರೀಸುಗುಣೇಂದ್ರ ಶ್ರೀಗಳು ಮತ್ತು ಕಿರಿಯ ಯತಿಗಳಾದ ಶ್ರೀಸುಶ್ರೀಂದ್ರ ಶ್ರೀಗಳನ್ನು ಅಲಂಕೃತ ತೆರೆದ ವಾಹನದಲ್ಲಿ ಕರೆತರಲಾಯಿತು.
ಕಲಾ ತಂಡಗಳ ಮೆರುಗು:
ಮೆರವಣಿಗೆಯುದ್ದಕ್ಕೂ ನೂರಾರು ಕಲಾತಂಡಗಳು ಸಾಂಸ್ಕೃತಿಕ ತಂಡಗಳು ಮೆರವಣಿಗೆಯ ಮೆರುಗನ್ನು ಹೆಚ್ಚಿಸಿತು. ಹುಲಿವೇಷ, ಚೆಂಡೆ ಬಳಗ, ಬಣ್ಣದ ಕೊಡೆಗಳು, ಕೊಂಬು ಕಹಳೆ, ಸ್ಕೌಟ್ಸ್ ಶಾಲಾ ವಿದ್ಯಾರ್ಥಿಗಳು, ನಾಸಿಕ್ ಬ್ಯಾಂಡ್, ಕೀಲು ಕುದುರೆ, ವಾದ್ಯ, ಹತ್ತಾರು ಭಜನಾ ತಂಡಗಳು, ನೂರಾರು ಕಲಾ ತಂಡಗಳು ಮೆರವಣಿಗೆಯುದ್ದಕ್ಕೂ ಉತ್ತಮ ಪ್ರದರ್ಶನ ನೀಡಿತು.
ಪುರಮೆರವಣಿಗೆ ಜೋಡುಕಟ್ಟೆಯಿಂದ ಹಳೆ ಡಯಾನ, ಕೆಎಂ ಮಾರ್ಗ, ತ್ರಿವೇಣಿ ಸರ್ಕಲ್, ಸಂಸ್ಕೃತ ಕಾಲೇಜು ಮೂಲಕ ಮುಖ್ಯ ರಸ್ತೆಯ ಮೂಲಕ ರಥಬೀದಿಗೆ ತಲುಪಿತು.
ಮೆರವಣಿಗೆಯಲ್ಲಿ ಪರ್ಯಾಯ ಸ್ವಾಗತ ಸಮಿತಿಯ ಅಧ್ಯಕ್ಷ ಎಚ್.ಎಸ್. ಬಲ್ಲಾಳ್, ಸಚಿವೆ ಶೋಭಾ ಕರಂದ್ಲಾಜೆ, ಮಾಜಿ ಸಚಿವ ಪ್ರಮೋದ್ ಮಧ್ವರಾಜ್, ಪರ್ಯಾಯ ಸಮಿತಿಯ ಕಾರ್ಯಾಧ್ಯಕ್ಷ ಕೆ. ರಘುಪತಿ ಭಟ್, ಕೋಶಾಧಿಕಾರಿ ರಂಜನ್ ಕಲ್ಕೂರ, ಶಾಸಕ ಯಶ್ಪಾಲ್ ಸುವರ್ಣ
ಕೆ.ಉದಯ ಕುಮಾರ್ ಶೆಟ್ಟಿ, ಪ್ರತಾಪ್ ಸಿಂಹ ನಾಯಕ್, ಐಕಳಬಾವ ಡಾ. ದೇವಿಪ್ರಸಾದ್ ಶೆಟ್ಟಿ, ಜಯಕರ ಶೆಟ್ಟಿ ಇಂದ್ರಾಳಿ, ಗಾಂಧಿ ಆಸ್ಪತ್ರೆಯ ಮಾಲಕ ಡಾ.ಹರಿಶ್ಚಂದ್ರ, ಭುವನೇಂದ್ರ ಕಿದಿಯೂರು, ಪುರುಷೋತ್ತಮ ಶೆಟ್ಟಿ, ಅಜಯ್ ಪಿ. ಶೆಟ್ಟಿ, ಬೈಕಾಡಿ ಸುಪ್ರಸಾದ್ ಶೆಟ್ಟಿ, ವಿವಿಧ ಸಮುದಾಯದ ಮುಖಂಡರು ಮೆರವಣಿಗೆಯಲ್ಲಿ ಭಾಗವಹಿಸಿದ್ದರು.