ಉಡುಪಿ ಪರ್ಯಾಯ ಮಹೋತ್ಸವಕ್ಕೆ ತಡೆಕೋರಿ ಸಲ್ಲಿಸಿದ್ದ ಪಿಐಎಲ್ ವಜಾಗೊಳಿಸಿದ ಹೈಕೋರ್ಟ್
ಬೆಂಗಳೂರು,ಜ.8: ಉಡುಪಿ ಅಷ್ಟಮಠ ಪರ್ಯಾಯ ಮಹೋತ್ಸವಕ್ಕೆ ತಡೆಕೋರಿ ಪಿಐಎಲ್ ಸಲ್ಲಿಕೆಯಾಗಿದ್ದು, ಪುತ್ತಿಗೆ ಮಠದ ಶ್ರೀಸುಗುಣೇಂದ್ರ ತೀರ್ಥರಿಗೆ ಪರ್ಯಾಯ ನೀಡದಂತೆ ಕೋರಿ ಸಲ್ಲಿಸಿದ್ದ ಪಿಐಎಲ್ ಅನ್ನು ವಜಾಗೊಳಿಸಿ ಸಿಜೆ ಪ್ರಸನ್ನ ಬಿ ವರಾಳೆ ಹಾಗೂ ನ್ಯಾ ಕೃಷ್ಣ ದೀಕ್ಷಿತ ಹೈಕೋರ್ಟ್ ಪೀಠ ಆದೇಶ ಹೊರಡಿಸಿದೆ.
ಗುರುರಾಜ್ ಜೀವನ್ ರಾವ್ ಎನ್ನುವವರು ಪುತ್ತಿಗೆ ಮಠದ ಶ್ರೀಸುಗುಣೇಂದ್ರ ತೀರ್ಥರು ಪರ್ಯಾಯ ಪೀಠ ಏರದಂತೆ ಅನುಮತಿ ನೀಡದಂತೆ ಕೋರಿ ಸಲ್ಲಿಸಿದ್ದ ಪಿಐಎಲ್ ಅನ್ನು ಇದೀಗ ಹೈಕೋರ್ಟ್ ವಜಾಗೊಳಿಸಿದೆ.
ವಿದೇಶದಲ್ಲಿ ಜ್ಞಾನ ಪ್ರಸಾರ ಮಾಡಿದರೆ ತಪ್ಪೇನು? ಓ ನನ್ನ ಚೇತನ ಹಾಗೂ ನೀ ಕೇತನ ಕವಿತೆ ಎನ್ನುವ ರಾಷ್ಟ್ರಕವಿ ಕುವೆಂಪುರವರ ಕವಿತೆಯನ್ನು ಹೈಕೋರ್ಟ್ ಉಲ್ಲೇಖಿಸಿದೆ. ಮನೆ ಕಟ್ಟಿ ಕೂರುವುದಕ್ಕಿಂತ ಹೊರಗೆ ಓಡಾಡುವುದು ಲೇಸು, ಧಾರ್ಮಿಕ ಆಚರಣೆ ವಿಚಾರದಲ್ಲಿ ಹಸ್ತಕ್ಷೇಪ ಮಾಡುವುದು ಸರಿಯಲ್ಲ ಎಂದು ಹೇಳಿ ಗುರುರಾಜ್ ಜೀವನ್ ರಾವ್ ಸಲ್ಲಿಸಿದ್ದ ಪಿಐಎಲ್ ಅನ್ನು ಹೈಕೋರ್ಟ್ ವಜಾಗೊಳಿಸಿ ಸಿಜೆ ಪ್ರಸನ್ನ ಬಿ ವರಾಳೆ ಹಾಗೂ ನ್ಯಾ ಕೃಷ್ಣ ದೀಕ್ಷಿತ ಪೀಠ ಆದೇಶ ಹೊರಡಿಸಿದೆ.
2008 ರಲ್ಲಿ ಪುತ್ತಿಗೆ ಶ್ರೀಗಳ ಪರ್ಯಾಯ ಪೀಠಾರೋಹಣಕ್ಕೆ ವಿರೋಧ ವ್ಯಕ್ತವಾದಾಗ ಶೀರೂರು ಶ್ರೀ ಲಕ್ಮೀವರ ತೀರ್ಥರು ಮಾತ್ರ ಅವರ ಜೊತೆ ನಿಂತಿದ್ದರು. ಉಳಿದ 6 ಮಠಾಧೀಶರು ಪರ್ಯಾಯದಿಂದ ಅಂತರ ಕಾಯ್ದುಕೊಂಡಿದ್ದರು. ಈ ಮಠಾಧೀಶರೆಲ್ಲ ಈ ಬಾರಿ ಮತ್ತೆ ಪುತ್ತಿಗೆ ಶ್ರೀಗಳ ಪರ್ಯಾಯಕ್ಕೆ ಗೈರಾಗುವ ಸಾಧ್ಯತೆ ಹೆಚ್ಚಾಗಿದೆ.
ಉಡುಪಿ ಅಷ್ಟ ಮಠಗಳ ಪರಂಪರೆಯಂತೆ ಅಲ್ಲಿನ ಶ್ರೀಗಳು ಸಮುದ್ರೋಲ್ಲಂಘನೆ ಮಾಡುವಂತಿಲ್ಲ. ಆದರೆ, ಪುತ್ತಿಗೆ ಶ್ರೀಗಳು ಸಮುದ್ರೋಲ್ಲಂಘನೆ ಮಾಡಿ ವಿದೇಶ ಪ್ರವಾಸ ಕೈಗೊಂಡಿದ್ದರಿಂದ ಅವರ ಪರ್ಯಾಯ ಪೀಠಾರೋಹಣಕ್ಕೆ 2008ರಲ್ಲಿ ಇತರ ಮಠಾಧೀಶರು ವಿರೋಧ ವ್ಯಕ್ತಪಡಿಸಿದ್ದರು.
2008ರಲ್ಲಿ ಪುತ್ತಿಗೆ ಶ್ರೀಗಳ ಪರ್ಯಾಯ ಪೀಠಾರೋಹಣ ಸಂದರ್ಭದಲ್ಲಿ ರಾಜಾಂಗಣದಲ್ಲಿ ನಡೆಯುವ ದರ್ಬಾರ್, ಕೀ ಹಸ್ತಾಂತರ ಹಾಗೂ ಅಕ್ಷಯ ಪಾತ್ರೆ ಹಸ್ತಾಂತರದಲ್ಲಿಯೂ ಅಸಮಾಧಾನ ವ್ಯಕ್ತವಾಗಿತ್ತು. ಏಕೈಕ ಶೀರೂರು ಮಠವಷ್ಟೇ ಪುತ್ತಿಗೆ ಮಠದ ಪರ ನಿಂತಿತ್ತು.
ಜನವರಿ 17, 18ರಂದು ಪುತ್ತಿಗೆ ಶ್ರೀಗಳು ಪರ್ಯಾಯ ಪೀಠವೇರಲಿದ್ದಾರೆ. ಈ ವೇಳೆ ಪೇಜಾವರ ಮಠದ ವಿಶ್ವಪ್ರಸನ್ನ ತೀರ್ಥ ಶ್ರೀಗಳು ಬಹುತೇಕ ಗೈರಾಗಲಿದ್ದಾರೆ. ಅಯೋಧ್ಯೆಯ ರಾಮ ಮಂದಿರದಲ್ಲಿ ಜನವರಿ 22ರಂದು ಪ್ರಾಣ ಪ್ರತಿಷ್ಠೆ ನಡೆಯಲಿರುವ ಕಾರಣ, ಶ್ರೀರಾಮ ಜನ್ಮಭೂಮಿ ತೀರ್ಥಕ್ಷೇತ್ರ ಟ್ರಸ್ಟ್ನ ಟ್ರಸ್ಟಿಯೂ ಆಗಿರುವ ಅವರು ಜನವರಿ 17ರಂದೇ ಅಯೋಧ್ಯೆಗೆ ತೆರಳಲಿದ್ದಾರೆ.