ಬಿಲ್ಕಿಸ್ ಬಾನು ಪ್ರಕರಣ: 11 ಅಪರಾಧಿಗಳ ಬಿಡುಗಡೆಗೆ ಗುಜರಾತ್ ಸರ್ಕಾರ ನೀಡಿದ್ದ ಅನುಮತಿ ರದ್ದುಗೊಳಿಸಿದ ‘ಸುಪ್ರೀಂ’
ನವದೆಹಲಿ: 2002ರ ಗೋಧ್ರಾ ನಂತರದ ಗಲಭೆಯಲ್ಲಿ ಬಿಲ್ಕಿಸ್ ಬಾನು ಸಾಮೂಹಿಕ ಅತ್ಯಾಚಾರ ಮತ್ತು ಆಕೆಯ ಕುಟುಂಬದ ಏಳು ಸದಸ್ಯರನ್ನು ಹತ್ಯೆಗೈದ ಪ್ರಕರಣದ ಎಲ್ಲಾ 11 ಅಪರಾಧಿಗಳಿಗೆ ಕ್ಷಮಾಪಣೆ ನೀಡುವ ಗುಜರಾತ್ ಸರ್ಕಾರದ ನಿರ್ಧಾರವನ್ನು ಸುಪ್ರೀಂ ಕೋರ್ಟ್ ಸೋಮವಾರ ರದ್ದುಗೊಳಿಸಿದೆ.
ಪ್ರಕರಣದ 11 ಅಪರಾಧಿಗಳಿಗಳ ಶಿಕ್ಷೆಯ ಅವಧಿ ಪೂರ್ಣಗೊಳ್ಳುವ ಮುನ್ನವೇ ಅವರನ್ನು ಬಿಡುಗಡೆ ಮಾಡಿದ ಗುಜರಾತ್ ಸರ್ಕಾರದ ನಿರ್ಧಾರವನ್ನು ಪ್ರಶ್ನಿಸಿ ಸಲ್ಲಿಸಲಾಗಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಗಳ (ಪಿಐಎಲ್) ವಿಚಾರಣೆ ನಡೆಸಿದ ನ್ಯಾಯಮೂರ್ತಿಗಳಾದ ಬಿವಿ ನಾಗರತ್ನ ಮತ್ತು ಉಜ್ಜಲ್ ಭುಯಾನ್ ಅವರಿದ್ದ ಪೀಠವು, ಗುಜರಾತ್ ಸರ್ಕಾರವು ಅಪರಾಧಿಗಳಿಗೆ ಕ್ಷಮಾಪಣೆ ನೀಡಿರುವುದು ಸೂಕ್ತ ಸರ್ಕಾರವಲ್ಲ ಎಂದು ಹೇಳಿದೆ.
ಸುಪ್ರೀಂ ಕೋರ್ಟ್ ತನ್ನ ತೀರ್ಪಿನಲ್ಲಿ, ಗುಜರಾತ್ ರಾಜ್ಯವು ಈ ರೀತಿಯ ಆದೇಶಗಳನ್ನು ನೀಡಲು ಸಮರ್ಥವಾಗಿಲ್ಲ. ಅಲ್ಲದೆ, ಸರ್ಕಾರದ ಈ ನಿರ್ಧಾರವನ್ನು ಪ್ರಶ್ನಿಸಿ ಪ್ರಕರಣದ ಸಂತ್ರಸ್ತೆ ಬಿಲ್ಕಿಸ್ ಬಾನು ಅವರು ಸಲ್ಲಿಸಿರುವ ಅರ್ಜಿಯು ಸಮರ್ಥವಾಗಿದೆ ಎಂದು ಅದು ಹೇಳಿದೆ. ಗೋಧ್ರಾ ರೈಲು ದಹನ ಘಟನೆಯ ನಂತರ ಭುಗಿಲೆದ್ದ ಕೋಮುಗಲಭೆ ಯಿಂದ ತಪ್ಪಿಸಿಕೊಂಡು ಹೋಗುತ್ತಿದ್ದ ವೇಳೆ ಬಿಲ್ಕಿಸ್ ಬಾನು ಅವರಿಗೆ 21 ವರ್ಷ ವಯಸ್ಸಾಗಿತ್ತು ಮತ್ತು ಅವರು ಆಗ ಐದು ತಿಂಗಳ ಗರ್ಭಿಣಿಯಾಗಿದ್ದರು. ಗಲಭೆಯಲ್ಲಿ ಸಾವಿಗೀಡಾದ ಏಳು ಕುಟುಂಬ ಸದಸ್ಯರಲ್ಲಿ ಆಕೆಯ ಮೂರು ವರ್ಷದ ಮಗಳೂ ಸೇರಿದ್ದಳು.
ಆರೋಪ ಸಾಬೀತಾಗಿ 11 ಅಪರಾಧಿಗಳು 15ಕ್ಕೂ ಹೆಚ್ಚು ವರ್ಷ ಜೈಲು ಶಿಕ್ಷೆ ಅನುಭವಿಸಿದ್ದರು. ಗುಜರಾತ್ ಸರ್ಕಾರ ಸನ್ನಡತೆ ಆಧಾರದಲ್ಲಿ ಕೈದಿಗಳ ಬಿಡುಗಡೆಗೆ ಅನುಮತಿ ನೀಡಿತ್ತು. ಹೀಗಾಗಿ 2022ರ ಆಗಸ್ಟ್ 15ರಂದು ಅವರೆಲ್ಲರೂ ಗೋಧ್ರಾ ಉಪ ಕಾರಾಗೃಹದಿಂದ ಬಿಡುಗಡೆಯಾಗಿದ್ದರು.
ಪ್ರಕರಣದ 11 ಅಪರಾಧಿಗಳ ಅವಧಿಪೂರ್ವ ಬಿಡುಗಡೆ ಮಾಡಿರುವ ಗುಜರಾತ್ ಸರ್ಕಾರದ ಈ ನಿರ್ಧಾರವನ್ನು ಪ್ರಶ್ನಿಸಿ ಸಂತ್ರಸ್ತೆ ಬಿಲ್ಕಿಸ್ ಬಾನು ಅವರು ಕಳೆದ ವರ್ಷ ನ. 30 ರಂದು ಸುಪ್ರೀಂ ಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದರು. ಅಪರಾಧಿಗಳ ಬಿಡುಗಡೆಯು ಸಮಾಜದ ಆತ್ಮಸಾಕ್ಷಿಯನ್ನು ಅಲ್ಲಾಡಿಸಿದೆ ಎಂದು ಹೇಳಿದ್ದರು.