ಟೇಕ್-ಆಫ್ ಆದ ಕೆಲವೇ ನಿಮಿಷಗಳಲ್ಲಿ ವಿಮಾನದಿಂದ ಬೇರ್ಪಟ್ಟ ಬಾಗಿಲು!
ಹೊಸದಿಲ್ಲಿ: ಅಲಾಸ್ಕಾ ಏರ್ಲೈನ್ಸ್ ಬೋಯಿಂಗ್ 737-9 ಮ್ಯಾಕ್ಸ್ ಇಂದು ಪೋರ್ಟ್ಲ್ಯಾಂಡ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಟೇಕ್-ಆಫ್ ಮಾಡಿದ ಕೆಲವೇ ನಿಮಿಷಗಳಲ್ಲಿ ಅದರ ಒಂದು ಬಾಗಿಲು ದಿಢೀರ್ ಎಂದು ತೆರೆದುಕೊಂಡು ವಿಮಾನದಿಂದ ಬೇರ್ಪಟ್ಟ ಘಟನೆ ನಡೆದಿದೆ. ಒಟ್ಟು 171 ಪ್ರಯಾಣಿಕರು ಹಾಗೂ 6 ಮಂದಿ ಸಿಬ್ಬಂದಿಯಿದ್ದ ವಿಮಾನವನ್ನು ಅದರ ಪೈಲಟ್ ಮತ್ತೆ ಸುರಕ್ಷಿತವಾಗಿ ಅದೇ ನಿಲ್ದಾಣದಲ್ಲಿ ಇಳಿಸಿದ್ದಾರೆ.
ವಿಮಾನದ ಮಧ್ಯದ ಕ್ಯಾಬಿನ್ ನಿರ್ಗಮನ ದ್ವಾರವು ತೆರೆದು ವಿಮಾನದಿಂದ ಸಂಪೂರ್ಣವಾಗಿ ಕಳಚಿ ಹೋದ ವೀಡಿಯೋಗಳನ್ನು ಪ್ರಯಾಣಿಕರು ಸೆರೆಹಿಡಿದಿದ್ದಾರೆ.
ಘಟನೆ ಬಗ್ಗೆ ತನಿಖೆ ನಡೆಸಲಾಗುತ್ತಿದೆ ಎಂದು ಅಲಾಸ್ಕಾ ಏರ್ಲೈನ್ಸ್ ಹೇಳಿದೆ. ಘಟನೆ ನಡೆದಾಗ ವಿಮಾನ ಭೂಮಿಯಿಂದ 16,325 ಅಡಿ ಎತ್ತರದಲ್ಲಿ ಹಾರುತ್ತಿತ್ತು ಎಂದು ತಿಳಿದು ಬಂದಿದೆ.
ಈ ನಿರ್ದಿಷ್ಟ ಬೋಯಿಂಗ್ 737 ಮ್ಯಾಕ್ಸ್ ವಿಮಾನವನ್ನು ಅಲಾಸ್ಕಾ ಏರ್ಲೈನ್ಸ ಕಳೆದ ವರ್ಷದ ಅಕ್ಟೋಬರ್ 1ರಂದು ಪಡೆದುಕೊಂಡಿದ್ದರೆ ವಾಣಿಜ್ಯ ಸೇವೆ ನವೆಂಬರ್ 11ರಂದು ಆರಂಭಗೊಂಡಿತ್ತು. ಇಲ್ಲಿಯ ತನಕ ಈ ವಿಮಾನ 145 ಹಾರಾಟ ನಡೆಸಿದೆ.