ವೈದ್ಯಕೀಯ ಶಿಕ್ಷಣ ಸಚಿವ ಡಾ.ಸುಧಾಕರ್ ಗೆ ಆರೋಗ್ಯ ಖಾತೆ ?
ಬೆಂಗಳೂರು: ರಾಜ್ಯದಲ್ಲಿ ಕೋವಿಡ್–19 ನಿರ್ವಹಣೆ ಗೊಂದಲ ಹಾಗೂ ಸೋಂಕು ದಿನದಿಂದ ದಿನಕ್ಕೆ ಹೆಚ್ಚುತ್ತಿರುವ ಕಾರಣ ಆರೋಗ್ಯ ಖಾತೆಯನ್ನು ಬಿ.ಶ್ರೀರಾಮುಲು ಅವರಿಂದ ಹಿಂದಕ್ಕೆ ಪಡೆದು, ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್ ಅವರಿಗೆ ನೀಡುವ ಸಾಧ್ಯತೆ ಇದೆ.
ಶ್ರೀರಾಮುಲು ಅವರಿಗೆ ಹಿಂದುಳಿದ ವರ್ಗಗಳ ಖಾತೆಯ ಜತೆಗೆ ಸಮಾಜಕಲ್ಯಾಣ ಇಲಾಖೆಯ ಜವಾಬ್ದಾರಿಯನ್ನು ನೀಡುವ ಸಾಧ್ಯತೆ ಇದೆ0ದು ಉನ್ನತ ಮೂಲಗಳಿಂದ ತಿಳಿದು ಬಂದಿದೆ .
ಕೋವಿಡ್ ಬಗ್ಗೆ ಇಬ್ಬರು ಸಚಿವರ ಪರಸ್ಪರ ವಿರೋಧಾಭಾಸದ ಹೇಳಿಕೆ, ಸರ್ಕಾರದ ನಿರ್ಧಾರಗಳಲ್ಲೂ ವ್ಯತ್ಯಾಸ ಆಗುತ್ತಿದ್ದು, ಕೋವಿಡ್ ನಿಯಂತ್ರಣ ಆಗದಿರುವುದು ಮುಖ್ಯಮಂತ್ರಿಯವರನ್ನು ಇಕ್ಕಟ್ಟಿಗೆ ಸಿಲುಕಿಸಿದೆ. ವೈಜ್ಞಾನಿಕ ಮಾಹಿತಿಯ ಜತೆಗೆ ವೈದ್ಯರು ಮತ್ತು ಅಧಿಕಾರಿಗಳ ಜತೆ ಸಮಾಲೋಚನೆ ನಡೆಸುವ ಸಾಮರ್ಥ್ಯ ಇದ್ದರಷ್ಟೇ, ಅದರ ನಿರ್ವಹಣೆ ಸಲೀಸಾಗಬಹುದೆಂದು ಎಂಬ ಕಾರಣಕ್ಕೆ ಈ ಬದಲಾವಣೆ ಮಾಡಲಾಗುತ್ತಿದೆ ಎಂಬ ಮಾತು ಕೇಳಿಬರುತ್ತಿದೆ.
ಉಪ ಮುಖ್ಯಮಂತ್ರಿ ಗೋವಿಂದ ಕಾರಜೋಳ ಅವರು ಪಿಡಬ್ಲ್ಯೂಡಿ ಜೊತೆಗೆ ಸಮಾಜ ಕಲ್ಯಾಣ ಖಾತೆಯನ್ನು ನಿಭಾಯಿಸುತ್ತಿದ್ದರು. ಇದೀಗ ಸಮಾಜ ಕಲ್ಯಾಣ ಇಲಾಖೆ ಖಾತೆಯನ್ನು ಶ್ರೀರಾಮುಲು ಅವರಿಗೆ ನೀಡಲಾಗುತ್ತದೆ