ಲಾಕ್’ಡೌನ್ ಸಡಿಲ, ಜನರು ಮತ್ತಷ್ಟು ಎಚ್ಚರಿಕೆಯಿಂದಿರಬೇಕಿದೆ: ಮನ್’ಕಿಬಾತ್’ನಲ್ಲಿ ಮೋದಿ
ನವದೆಹಲಿ: ದೇಶದಲ್ಲಿ ಲಾಕ್’ಡೌನ್’ನ್ನು ಸಡಿಲಗೊಳಿಸಲಾಗಿದ್ದು, ಜನರು ಮತ್ತಷ್ಟು ಎಚ್ಚರಿಕೆಯಿಂದಿರಬೇಕಿದೆ ಎಂದು ಪ್ರಧಾನಮಂತ್ರಿ ನರೇಂದ್ರ ಮೋದಿಯವರು ದೇಶವಾಸಿಗಳನ್ನುದ್ದೇಶಿಸಿ ಮನ್ ಕೀ ಬಾತ್ ರೇಡಿಯೋ ಕಾರ್ಯಕ್ರಮದಲ್ಲಿ ಭಾನುವಾರ ಹೇಳಿದ್ದಾರೆ.
ಕಳೆದ ಬಾರಿ ನಾನು ನಿಮ್ಮೊಂದಿಗೆ ಮಾತನಾಡಿದ ಸಂದರ್ಭದಲ್ಲಿ ದೇಶದಲ್ಲಿ ರೈಲು, ಬಸ್ ಹಾಗೂ ವಿಮಾನ ಸಂಚಾರಗಳು ಬಂದ್ ಆಗಿದ್ದವು. ಆದರೆ, ಈ ಬಾರಿ ಲಾಕ್’ಡೌನ್ ಸಡಿಲಗೊಳಿಸಲಾಗಿದ್ದು, ಸಂಚಾರಕ್ಕೆ ಅನುವು ಮಾಡಿಕೊಡಲಾಗಿದೆ. ಸಾಕಷ್ಟು ಮುಂಜಾಗ್ರತಾ ಕ್ರಮಗಳೊಂದಿಗೆ ಶ್ರಮಿಕ ವಿಶೇ, ರೈಲು, ಇತರೆ ವಿಶೇಷ ರೈಲು ಹಾಗೂ ವಿಮಾನ ಸಂಚಾರಕ್ಕೆ ಅನುಮತಿ ನೀಡಲಾಗಿದೆ. ಇದೀಗ ಜನರು ಈ ಹಿಂದಿನದ್ದಕ್ಕಿಂತಲೂ ಮತ್ತಷ್ಟು ಎಚ್ಚರಿಕೆಯಿಂದಿರಬೇಕಿದೆ ಎಂದು ಹೇಳಿದ್ದಾರೆ.
ಇತರೆ ದೇಶಗಳಿಗಿಂತಲೂ ಭಾರತದಲ್ಲಿ ಜನಸಂಖ್ಯೆ ಹೆಚ್ಚಾಗಿದೆ. ಆದರೆ, ನಾವು ಪರಿಸ್ಥಿತಿಯನ್ನು ಉತ್ತಮವಾಗಿ ನಿಭಾಯಿಸಿದ್ದೇವೆ. ಪ್ರತೀಯೊಬ್ಬರು ಪರಿಸ್ಥಿತಿಯನ್ನು ಉತ್ತಮವಾಗಿ ನಿಭಾಯಿಸುತ್ತಿದ್ದಾರೆ. ಆರ್ಥಿಕ ಚಟುವಟಿಕೆಗಳು ಆರಂಭವಾಗಿವೆ. ಸಾಮಾಜಿಕ ಅಂತರಗಳು ಹೆಚ್ಚಾಗಬೇಕಿದೆ. ಸಾಧ್ಯವಾದಷ್ಟು ಮಾಸ್ಕ್ ಗಳನ್ನು ಧರಿಸುವುದು, ಮನೆಗಳಲ್ಲಿಯೇ ಹೆಚ್ಚು ಕಾಲ ಕಳೆಯುವುದಕ್ಕೆ ಪ್ರಯತ್ನಿಸಿ. ಪ್ರತೀಯೊಬ್ಬರ ಸಹಕಾರದೊಂದಿಗೆ ಕೊರೋನಾ ವಿರುದ್ಧದ ಹೋರಾಟವನ್ನು ಮತ್ತಷ್ಟು ಬಲಗೊಳಿಸಬೇಕಿದೆ. ಹಳ್ಳಿಗಳಿಂದ ಹಿಡಿದು ನಗರ ಹಾಗೂ ಸಣ್ಣ ವ್ಯಾಪಾರಿಗಳು, ಸ್ಟಾರ್ಟ್ ಅಪ್ ಗಳವರೆಗೆ ನಮ್ಮ ಲ್ಯಾಬ್ ಗಳು ಕೊರೋನಾ ವಿರುದ್ಧ ಹೊಸ ಮಾರ್ಗಗಳನ್ನು ರೂಪಿಸುವ ಮೂಲಕ ನಾವೀನ್ಯತೆಗಳ ಕೂಡ ಕಾರ್ಯನಿರ್ವಹಿಸುತ್ತಿರುವುದು ನನ್ನ ಹೃದಯವನ್ನು ಮುಟ್ಟಿದೆ ಎಂದು ತಿಳಿಸಿದ್ದಾರೆ.
ದೇಶದ 130 ಕೋಟಿ ಜನರು ಸೇರಿ ವೈರಸ್ ವಿರುದ್ಧ ಹೋರಾಟ ನಡೆಸುತ್ತಿರುವ ಹಿನ್ನೆಲೆಯಲ್ಲಿ ಸಾಂಕ್ರಾಮಿಕವನ್ನು ವೇಗಗತಿಯಲ್ಲಿ ನಿರ್ಮೂಲನೆ ಮಾಡಲು ಸಾಧ್ಯವಾಗುತ್ತಿದೆ. ಇದಕ್ಕಾಗಿ ದೇಶದ ಪ್ರತೀಯೊಬ್ಬರಿಗೂ ಅಭಿನಂದಿಸುತ್ತೇನೆ. ದೇಶದ ವಿವಿಧ ಭಾಗಗಳ ಜನರು ತಮ್ಮದೇ ಆದ ರೀತಿಯಲ್ಲಿ ಜನರಿಗೆ ಸಾಕಷ್ಟು ಸಹಾಯ ಮಾಡಿದ್ದಾರೆ. ತಮಿಳುನಾಡಿನ ಸಿಮೋಹನ್ ಅವರು ತಮ್ಮ ಮಗಳ ಶಿಕ್ಷಣಕ್ಕಾಗಿ ಕೂಡಿಟ್ಟಿದ್ದ ಸಂಪೂರ್ಣ ರೂ.5 ಲಕ್ಷ ಹಣವನ್ನು ಲಾಕ್’ಡೌನ್ ಸಂದರ್ಭದಲ್ಲಿ ಸಂತ್ರಸ್ತರಿಗೆ ನೀಡಿದ್ದಾರೆ.
ಇಂತಹ ಅದೆಷ್ಟೋ ಘಟನೆಗಳು ದೇಶದ ಮೂಲೆಮೂಲೆಗಳಲ್ಲಿ ನಡೆದಿದೆ. ಇದು ತುಂಬಾ ಸಂತೋಷದ ವಿಚಾರ. ಎಲ್ಲರೂ ಸೇರಿ ಇಂತಹ ಸೇವಾ ಮನೋಭಾವದಿಂದ ಕೆಲಸ ಮಾಡುವುದಕ್ಕೆ ನಾನು ಅವರನ್ನು ಅಭಿನಂದಿಸುತ್ತಿದ್ದೇನೆ. ಕೊರೋನಾ ವಿರುದ್ಧ ಹೋರಾಟಕ್ಕೆ ಜನರು ಸಕಾರಾತ್ಮಕವಾಗಿ ಸ್ಪಂದಿಸುತ್ತಿದ್ದಾರೆ. ಬೇರೆ ರಾಷ್ಟ್ರಗಳಿಗೆ ಹೋಲಿಕೆ ಮಾಡಿದರೆ, ನಮ್ಮ ದೇಶದಲ್ಲಿ ವೈರಸ್ ಅಷ್ಟೊಂದು ವೇಗವಾಗಿ ಹರಡಿಲ್ಲ. ನಮೋ ಆ್ಯಪ್ ಮೂಲಕ ಪ್ರಜೆಗಳು ತಾವು ಎದುರಿಸುತ್ತಿರುವ ಸಮಸ್ಯೆಗಳನ್ನು ಹೇಳಿಕೊಂಡಿದ್ದಾರೆ. ಕೊರೋನಾ ವೈರಸ್ ವಿರುದ್ಧ ಹೋರಾಟಕ್ಕೆ ಸಲಕರಣೆಗಳನ್ನು ಕಂಡು ಹಿಡಿಯಲಾಗುತ್ತಿದೆ. ಟ್ರ್ಯಾಕ್ಟರ್ ಗಳ ಮೂಲಕ ಸ್ಯಾನಿಟೈಸರ್ ಮಾಡಲಾಗುತ್ತಿದೆ.
ನಮ್ಮ ದೇಶ, ನಮ್ಮ ರಾಜ್ಯ, ನಮ್ಮ ಊರು ಮತ್ತು ಗ್ರಾಮಗಳಲ್ಲಿ ಆತ್ಮನಿರ್ಭರ್ ಮಂತ್ರ ಪಠಿಸಬೇಕಿದೆ. ಕೊರೋನಾ ವಿರುದ್ಧ ಭಾರತ ಸರಿಯಾದ ಮಾರ್ಗದಲ್ಲಿ ಹೋರಾಟ ನಡೆಸುತ್ತಿದೆ. ಇದು ನಾವು ಎದುರಿಸುತ್ತಿರುವ ಸವಾಲುಗಳುಮುಂದಿನ ಭವಿಷ್ಯಕ್ಕೆ ಪಾಠವಾಗಲಿದೆ. ಕಳೆದ ಕೆಲವು ವರ್ಷಗಳಿಂದ ಉತ್ತರ ಭಾರತದಲ್ಲಿ ಅಭಿವೃದ್ಧಿ ಕಾರ್ಯಗಳು ನಡೆಯುತ್ತಿವೆ.
ದೇಶದ ಉತ್ತರ ಭಾರತದಲ್ಲಿನ ವಲಸೆ ಕಾರ್ಮಿಕರನ್ನು ಕಂಡಾಗ ಅವರಿಗಾಗಿ ಮತ್ತಷ್ಟು ಯೋಜನೆಗಳನ್ನು ರೂಪಿಸಬೇಕೆನಿಸುತ್ತಿದೆ. ಕೊರೋನಾ ವಿರುದ್ಧ ಹೋರಾಟಕ್ಕೆ ಯೋಗ ಸಹಕಾರಿಯಾಗುತ್ತದೆಯೇ ಎಂಬ ಪ್ರಶ್ನೆಗಳೂ ಕೂಡ ಕೇಳಿ ಬರುತ್ತಿವೆ. ಯೋಗ ಮತ್ತು ಆಯುರ್ವೇದದಿಂದ ಮಾನಸಿಕವಾಗಿ ಜನರು ಸದೃಢವಾಗಬಹುದು. ಇಮ್ಯುನಿಟಿ, ಕಮ್ಯುನಿಟಿ ಮತ್ತು ಯುನಿಟಿಯಿಂದ ವೈರ್ ವಿರುದ್ಧ ಹೋರಾಟ ನಡೆಸಬೇಕಿದೆ. ಸೋಂಕಿತರಲ್ಲಿ ಉಸಿರಾಟ ಸಮಸ್ಯೆ ಎದುರಾಗುತ್ತದೆ. ಆದರೆ, ಯೋಗದಿಂದ ಉಸಿರಾಟದ ಸಮಸ್ಯೆಗೆ ಪರಿಹಾರ ಸಿಗುತ್ತದೆ.
ಯೋಗದಲ್ಲಿ ಹಲವು ಬಗೆಯ ಪ್ರಾಣಾಯಾಮಗಳಿದ್ದು, ಇದರಿಂದ ಉಸಿರಾಟ ಸಮಸ್ಯೆಯನ್ನು ನಿವಾರಿಸಿಕೊಳ್ಳಬಹುದು. ಕಪಾಲಬಾತಿ, ಅನುಲೋಮ ಯೋಗದಿಂದ ಉಸಿರಾಟ ಸಮಸ್ಯೆ ನಿವಾರಣೆಯಾಗುತ್ತೆ.
ಆಯುಷ್ಮನ್ ಯೋಜನೆ ಮೂಲಕ ದೇಶದ ಕೋಟ್ಯಾಂತರ ಬಡ ಜನರಿಗೆ ನೆರವು ನೀಡಲಾಗುತ್ತಿದೆ. ನಾರ್ವೆ ಮತ್ತು ಸಿಂಗಾಪುರ ದೇಶಗಳ ಜನಸಂಖ್ಯೆಗಿಂತ ದುಪ್ಪಟ್ಟು ಜನರಿಗೆ ಆಯುಷ್ಮಾನ್ ಯೋಜನೆ ಮೂಲಕ ನೆರವು ನೀಡಲಾಗಿದೆ.
ಆಯುಷ್ಮಾನ್ ಯೋಜನೆ ಮೂಲಕ 1 ಕೋಟಿಗೂ ಹೆಚ್ಚು ರೋಗಿಗಳಿಗೆ ಸಹಾಯಕವಾಗಿದೆ. ಪಶ್ಚಿಮಬಂಗಾಳ ಮತ್ತು ಒಡಿಶಾದಲ್ಲಿ ಅಂಫಾನ್ ಚಂಡಮಾರುತವು ಅಪ್ಪಳಿಸಿದ್ದು, ಪರಿಸ್ಥಿತಿ ಅವಲೋಕನಕ್ಕಾಗಿ ನಾನು ಎರಡೂ ರಾಜ್ಯಗಳಿಗೆ ಭೇಟಿ ನೀಡಿದ್ದೆ. ಎರಡೂ ರಾಜ್ಯಗಳ ರೈತರು ತೀವ್ರ ಸಂಕಷ್ಟಕ್ಕೆ ಸಿಲುಕಿದ್ದಾರೆ. ನಿಮ್ಮನ್ನು, ನಿಮ್ಮ ಕುಟುಂಬವನ್ನು ವೈರಸ್ ನಿಂದ ರಕ್ಷಿಸಿಕೊಳ್ಳಲು ಮಾಸ್ಕ್ ಧರಿಸಿ, ತೀವ್ರ ಎಚ್ಚರಿಕೆ ವಹಿಸಬೇಕಿದೆ. ಕೊರೋನಾ ವಿರುದ್ಧದ ಹೋರಾಟಕ್ಕೆ ನೀವೆಲ್ಲರೂ ನಮ್ಮೊಂದಿಗೆ ಕೈಜೋಡಿಸುತ್ತೀರಾ ಎಂಬು ನಂಬಿದ್ದೇನೆಂದು ತಿಳಿಸಿದ್ದಾರೆ.