ಮುಂದಿನ 4 ದಿನಗಳ ಕಾಲ ಕರಾವಳಿ, ದಕ್ಷಿಣ ಒಳನಾಡಿನ ಕೆಲವೆಡೆ ಮಳೆ ಸಾಧ್ಯತೆ: ಹವಾಮಾನ ಇಲಾಖೆ
ಬೆಂಗಳೂರು, ಜ.5: ಮುಂದಿನ ನಾಲ್ಕು ದಿನಗಳ ಕಾಲ ಕರಾವಳಿ ಮತ್ತು ದಕ್ಷಿಣ ಒಳನಾಡಿನಲ್ಲಿ ಮಳೆಯಾಗಲಿದೆ ಎಂದು ಭಾರತೀಯ ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.
ಮಳೆ ಹಿನ್ನೆಲೆಯಲ್ಲಿ ದಕ್ಷಿಣ ಕನ್ನಡ, ಉಡುಪಿ, ಚಿಕ್ಕಮಗಳೂರು, ಹಾಸನ, ಮಂಡ್ಯ, ಮೈಸೂರು ಮತ್ತು ದಕ್ಷಿಣ ಒಳನಾಡಿನ ಕೆಲವು ಭಾಗಗಳಿಗೆ ‘ಯೆಲ್ಲೋ’ ಅಲರ್ಟ್ ಘೋಷಿಸಲಾಗಿದೆ.
ಅರಬಿ ಸಮುದ್ರದಲ್ಲಿ ವಾಯುಭಾರ ಕುಸಿತ ಉಂಟಾಗಿದ್ದು, ವಾಯುಭಾರ ಕುಸಿತದಿಂದಾಗಿ ಪೂರ್ವಕ್ಕೆ ಮೋಡ ಚಲನೆಯಾಗುತ್ತಿದೆ. ಇದರ ಪರಿಣಾಮ ದಕ್ಷಿಣ ಒಳನಾಡು, ಕರಾವಳಿ ಸೇರಿದಂತೆ ಕರ್ನಾಟಕದ ಬಹುತೇಕ ಭಾಗಗಳಲ್ಲಿ ಮಳೆಯಾಗುತ್ತಿದೆ. ವಾರಾಂತ್ಯದವರೆಗೂ ಇದೇ ಪರಿಸ್ಥಿತಿ ಮುಂದುವರೆಯಲಿದೆ ಎಂದು ಐಎಂಡಿ ಹಿರಿಯ ವಿಜ್ಞಾನಿ ಪ್ರಸಾದ್ ಹೇಳಿದ್ದಾರೆ.
ಬೆಂಗಳೂರಿನ ಕೆಲವು ಭಾಗಗಳಲ್ಲಿ ಸಣ್ಣ ತುಂತುರು ಮಳೆಯಾಗಿದ್ದು, ಇದು ಮುಂದಿನ ಒಂದೆರಡು ದಿನ ಮುಂದುವರಿಯಲಿದೆ ಎಂದು ತಿಳಿಸಿದ್ದಾರೆ. ಮೋಡ ಕವಿದ ವಾತಾವರಣವಿರುವುದರಿಂದ ಬೆಂಗಳೂರಿನಲ್ಲಿ ಗರಿಷ್ಠ ತಾಪಮಾನ 1-2 ಡಿಗ್ರಿ ಸೆಲ್ಸಿಯಸ್ ಕಡಿಮೆಯಾಗಲಿದ್ದು, ಕನಿಷ್ಠ ತಾಪಮಾನ 1-2 ಡಿಗ್ರಿ ಸೆಲ್ಸಿಯಸ್ ಏರಿಕೆಯಾಗಲಿದೆ. ಮೋಡ ಕವಿದ ವಾತಾವರಣದೊಂದಿಗೆ ಬೆಳಿಗ್ಗೆ ಮತ್ತು ಸಂಜೆ ಸಮಯದಲ್ಲಿ ಗಾಳಿ ವೇಗ ತೀವ್ರವಾಗಿರಲಿದೆ ಎಂದು ಮಾಹಿತಿ ನೀಡಿದ್ದಾರೆ.