ರಾಮಾಯಣದ ನೈತಿಕ ಮೌಲ್ಯಗಳು ಯುವ ಪೀಳಿಗೆಗೆ ದಾಟಿಸುವ ಕಾರ್ಯ ಯಕ್ಷಗಾನದಿಂದ ಸಾಧ್ಯ: ಡಾ.ತಲ್ಲೂರು
ಯಕ್ಷಗಾನ ಕಲಾಕೇಂದ್ರ ಹಂಗಾರಕಟ್ಟೆ ಐರೋಡಿಯಲ್ಲಿ ಯಕ್ಷ ಸಪ್ತೋತ್ಸವ ಉದ್ಘಾಟನೆ
ಉಡುಪಿ: ಇಂದಿನ ಯುವ ಪೀಳಿಗೆ ಹಿರಿಯರನ್ನು ಗೌರವಿಸುವಂತಾಗಲು, ತಮ್ಮ ತಂದೆತಾಯಿಯರ ಮಾತುಗಳನ್ನು ಪಾಲಿಸುವಂತಾಗಲು ರಾಮಾಯಣದ ನೈತಿಕ ಮೌಲ್ಯಗಳನ್ನು ಅವರಿಗೆ ದಾಟಿಸುವ ಕೆಲಸವಾಗಬೇಕು, ಯಕ್ಷಗಾನದಿಂದ ಈ ಕಾರ್ಯವನ್ನು ಮಾಡಲು ಸಾಧ್ಯವಿದೆ ಎಂದು ಉಡುಪಿ ತಲ್ಲೂರು ಫ್ಯಾಮಿಲಿ ಟ್ರಸ್ಟ್ನ ಪ್ರವರ್ತಕ ಡಾ.ತಲ್ಲೂರು ಶಿವರಾಮ ಶೆಟ್ಟಿ ಹೇಳಿದರು.
ಅವರು ಸೋಮವಾರ ಗುಂಡ್ಮಿ – ಸಾಲಿಗ್ರಾದ ಸದಾನಂದ ರಂಗ ಮಂಟಪದಲ್ಲಿ ಯಕ್ಷಗಾನ ಕಲಾಕೇಂದ್ರ ಹಂಗಾರಕಟ್ಟೆ- ಐರೋಡಿ ಸಂಸ್ಥೆಗೆ ಐವತ್ತರ ಸಂಭ್ರಮಾಚರಣೆಯ ಸಂದರ್ಭದಲ್ಲಿ ಹಮ್ಮಿಕೊಂಡ `ಯಕ್ಷ ಸಪ್ತೋತ್ಸವ -2024′ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ಇಂದು ವೃದ್ಧಾಶ್ರಮಗಳ ಸಂಖ್ಯೆ ಹೆಚ್ಚುತ್ತಿರುವುದು, ವೃದ್ಧ ತಂದೆತಾಯಿ ವೃದ್ಧಾಶ್ರಮಗಳನ್ನು ಸೇರುತ್ತಿರುವು ದನ್ನು ಕಂಡಾಗ ದಿಗಿಲು ಹುಟ್ಟುತ್ತದೆ. ದುಡ್ಡಿನಿಂದ ಮಾನವ ಸಂಬಂಧಗಳು ಬಲಗೊಳ್ಳಲಾರವು ಎಂಬುದನ್ನು ಈ ಘಟನೆಗಳು ಸಾಬೀತುಪಡಿಸುತ್ತವೆ. ಇಂದಿನ ಯುವಜನರಿಗೆ ವೃದ್ಧರೇಕೆ ಬೇಡವಾಗಿದ್ದಾರೆ ಎಂಬುದನ್ನು ವಿಮರ್ಶಿಸಿದಾಗ, ಅವರಲ್ಲಿ ಸಂಸ್ಕಾರ ಹಾಗೂ ನೈತಿಕ ಮೌಲ್ಯಗಳ ಅಧ:ಪತನ ಕಂಡು ಬರುತ್ತಿದೆ. ಈ ಸಮಸ್ಯೆಗೆ ಮರ್ಯಾದ ಪುರುಷೋತ್ತಮನ ಆದರ್ಶಗಳನ್ನು ಸಾರುವ ರಾಮಾಯಣ ರಾಮಬಾಣವಾಗಬಲ್ಲದು. ಆದ್ದರಿಂದ ಮಕ್ಕಳನ್ನು ಯಕ್ಷಗಾನ ಕಲಿಕೆಗೆ ಸೇರಿಸಿ. ಅವರನ್ನು ಯಕ್ಷಗಾನ ಪ್ರದರ್ಶನಕ್ಕೆ ಕರೆದುಕೊಂಡು ಬಂದು ಈ ಮಣ್ಣಿನ ಸಂಸ್ಕೃತಿಯನ್ನು ಪರಿಚಯ ಮಾಡಿಕೊಡಲು ಹೆತ್ತವರು ಮುಂದಾಗಬೇಕು ಎಂದು ಅವರು ಕರೆ ನೀಡಿದರು.
ಯಕ್ಷಗಾನ ಕಲೆಯನ್ನು ಅಭ್ಯಾಸಿಸಿದ ಮಕ್ಕಳು ಶುದ್ಧ ಕನ್ನಡ ಭಾಷೆ ಮಾತನಾಡುವುದಲ್ಲದೆ, ಅವರ ವ್ಯಕ್ತಿತ್ವ ವಿಕಸನ ಸಾಧ್ಯವಾಗುತ್ತದೆ. ಕಲಿಕೆಯಲ್ಲೂ ಅತ್ಯುತ್ತಮ ಸಾಧನೆ ಮಾಡಿರುವುದನ್ನು ನಾವು ಕಂಡಿದ್ದೇವೆ ಎಂದ ಅವರು, ಯಕ್ಷಗಾನ ಕಲಾಕೇಂದ್ರ ಈ ಬಾರಿಯ ಯಕ್ಷ ಸಪ್ತೋತ್ಸವದಲ್ಲಿ `ರಾಮಾಯಣದ ಧರ್ಮ ಸೂಕ್ಷ್ಮಗಳು ‘ ಎಂಬ ವಿಷಯದಲ್ಲಿ ಯಕ್ಷಗಾನವನ್ನು ಹಮ್ಮಿಕೊಂಡಿರುವುದು ಅಭಿನಂದನೀಯ. ಇದನ್ನು ಸಮಾಜ ಸದುಪಯೋಗ ಪಡಿಸಿಕೊಳ್ಳಬೇಕು ಎಂದು ಅವರು ಮನವಿ ಮಾಡಿದರು.
ಕೇಂದ್ರದ ಕಾರ್ಯದರ್ಶಿ ಐರೋಡಿ ರಾಜಶೇಖರ್ ಹೆಬ್ಬಾರ್ ಪ್ರಾಸ್ತಾವಿಕ ಮಾತುಗಳನ್ನಾಡಿ, ಯಕ್ಷಗಾನ ಕಲಾಕೇಂದ್ರ ತನ್ನ ಸಾರ್ಥಕ 50 ವರ್ಷಗಳ ಪಯಣದಲ್ಲಿ 3,000ಕ್ಕೂ ಅಧಿಕ ಹಿಮ್ಮೇಳ ಕಲಾವಿದರನ್ನು ಯಕ್ಷಲೋಕಕ್ಕೆ ಸಮರ್ಪಿಸಿದೆ. ಈ ಮೂಲಕ ಸಂಸ್ಥೆಯ ಸ್ಥಾಪನೆಯ ಕನಸು ನನಸಾಗಿದೆ. 5,000ಕ್ಕೂ ಆಧಿಕ ಕಲಾವಿದರು ಇಲ್ಲಿಗೆ ಬಂದು ಪ್ರದರ್ಶನ ನೀಡಿದ್ದಾರೆ. ಯಕ್ಷಗಾನವಲ್ಲದೆ ನೃತ್ಯ ತರಬೇತಿಯನ್ನು 2,000ಕ್ಕೂ ಅಧಿಕ ವಿದ್ಯಾರ್ಥಿಗಳು ಪಡೆದಿದ್ದಾರೆ. ಹೂವಿನ ಕೋಲು ನಂತಹ ಕಲಾಪ್ರಕಾರ ವನ್ನು ಉಳಿಸುವ ನಿಟ್ಟಿನಲ್ಲಿ ಈ ಬಾರಿ ಈ ಪರಿಸರದ 120 ಮನೆಗಳಲ್ಲಿ ಹೂವಿನ ಕೋಲು ಪ್ರದರ್ಶನವನ್ನು ನಡೆಸಲಾಗಿದೆ. ಇದೀಗ ಕೇಂದ್ರ ನಡೆಸುತ್ತಿರುವ ಚೆಂಡೆ, ಮದ್ದಳೆ, ಭಾಗವತಿಕೆ ತರಬೇತಿಯಲ್ಲಿ 100ಕ್ಕೂ ಅಧಿಕ ವಿದ್ಯಾರ್ಥಿಗಳು ಕಲಿಯುತ್ತಿದ್ದಾರೆ ಎಂದು ಅವರು ವಿವರಿಸಿದರು.
ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕಿ ಪೂರ್ಣಿಮಾ ಮಾತನಾಡಿ, ಮಕ್ಕಳು ಯಾವುದೇ ಭಾಷಾ ಮಾಧ್ಯಮದಲ್ಲಿ ಶಿಕ್ಷಣ ಪಡೆಯಲಿ ಅವರಿಗೆ ನಮ್ಮ ನಾಡಿನ ಭಾಷೆ, ಸಂಸ್ಕೃತಿ, ಕಲೆಯ ಬಗ್ಗೆ ಅರಿವು ಮೂಡಿಸುವುದು ಅತ್ಯಗತ್ಯವಾಗಿದೆ ಎಂದರು.
ಬ್ರಹ್ಮಾವರ ತಾಲೂಕು ತಹಶೀಲ್ದಾರ್ ಶ್ರೀಕಾಂತ್ ಎಸ್. ಹೆಗ್ಡೆ, ಉಪ್ಪೂರು ತೆಂಕಬೆಟ್ಟು ವಿನಾಯಕ ಯಕ್ಷಗಾನ ಸಂಘದ ಗೌರವಾಧ್ಯಕ್ಷ ವೆಂಕಟೇಶ್ ಕ್ರಮಧಾರಿ, ಸಾಂಸ್ಕೃತಿಕ ಸಮಿತಿ ಸದಸ್ಯ ಅನಂತಪದ್ಮನಾಭ ಐತಾಳ್ ಕೋಟ ಸಂದರ್ಭೋಚಿತವಾಗಿ ಮಾತನಾಡಿದರು.
ಯಕ್ಷಗಾನಕ್ಕೆ ಜಾತಿ, ಧರ್ಮದ ಪರಿಧಿಯಿಲ್ಲ : ಕಾರ್ಯಕ್ರಮದಲ್ಲಿ ಉಡುಪಿ ಜಿಲ್ಲಾಧಿಕಾರಿಗಳ ಆಪ್ತ ಸಹಾಯಕ, ಯಕ್ಷಗಾನ ಕಲಾವಿದರೂ ಆಗಿರುವ ಜನಾಬ್ ಹುಸೇನ್ ಅಶ್ಪಾಕ್ ಅವರನ್ನು ಸನ್ಮಾನಿಸಲಾಯಿತು. ಈ ಸಂದರ್ಭದಲ್ಲಿ ಮಾತನಾಡಿದ ಅವರು, ತಾವು ಎಳವೆಯಲ್ಲಿಯೇ ಉದ್ಯಾವರದ ಹಿಂದೂ ಪ್ರಾಥಮಿಕ ಶಾಲೆಯಲ್ಲಿ ಯಕ್ಷಗಾನವನ್ನು ಅಭ್ಯಾಸಿಸಿ, ಮುಂದೆ ಮೂಡಬಿದ್ರೆಯ ಆಳ್ವಾಸ್ ಕಾಲೇಜಿನಲ್ಲಿ ಯಕ್ಷಗಾನ ಕಲಿಕೆಯ ಉದ್ದೇಶದಿಂದ ಪದವಿ ತರಗತಿಗೆ ಸೇರ್ಪಡೆಯಾಗಿರುವುದು, ಯಕ್ಷಗಾನದ ಪ್ರಸಿದ್ಧ ಗುರುಗಳ ಬಳಿ ಯಕ್ಷಗಾನವನ್ನು ಅಭ್ಯಾಸಿಸಿದಲ್ಲದೆ ಸಮರ್ಥವಾಗಿ ನೂರಾರು ಪ್ರದರ್ಶನಗಳನ್ನು ನೀಡಿರುವ ಬಗ್ಗೆ ವಿವರಿಸಿದರು. ಈ ಸಂದರ್ಭದಲ್ಲಿ ತನ್ನ ನೈತಿಕ ಸ್ಥೆöÊರ್ಯವನ್ನು ಕುಗ್ಗಿಸುವ ಟೀಕೆಟಿಪ್ಪಣಿಗಳು ಬಂದರೂ ಅವನ್ನು ಲೆಕ್ಕಿಸದೆ ಮುಂದಡಿಯಿಟ್ಟಿದ್ದೇನೆ. ಯಕ್ಷಗಾನವನ್ನು ಜಾತಿ, ಧರ್ಮದ ಪರಿಮಿತಿಯಲ್ಲಿ ಕಾಣುವುದು ಸಮಂಜಸವಲ್ಲ. ಅದನ್ನೊಂದು ಕಲಾಧರ್ಮವಾಗಿಯೇ ಕಾಣಬೇಕು ಎಂದ ಅವರು, ಒಳಿತು ಕೆಡುಕುಗಳ ಬಗ್ಗೆ ತಿಳುವಳಿಕೆ, ಭಾಷಾಜ್ಞಾನ, ಪುರಾಣಗಳ ಬಗ್ಗೆ ಅರಿವು ಹೀಗೆ ಎಲ್ಲಾ ವಿಧಧ ಜ್ಷಾನಾರ್ಜನೆ ಈ ಯಕ್ಷಗಾನ ಕಲೆಯಿಂದ ದೊರಕುತ್ತದೆ ಎಂದರು.
ಯಕ್ಷಗಾನ ಕಲಾಕೇಂದ್ರದ ಅಧ್ಯಕ್ಷ ಆನಂದ ಸಿ. ಕುಂದರ್ ಸ್ವಾಗತಿಸಿದರು. ರಾಮಚಂದ್ರ ಐತಾಳ್ ಗುಂಡ್ಮಿ ಕಾರ್ಯಕ್ರಮ ನಿರೂಪಿಸಿದರು. ಸೀತಾರಾಮ ಸೋಮಯಾಜಿ ವಂದಿಸಿದರು.
ಸಭಾ ಕಾರ್ಯಕ್ರಮದ ಬಳಿಕ ಯಕ್ಷಗಾನ `ಪುತ್ರಕಾಮೇಷ್ಠಿ ‘ ಪ್ರದರ್ಶನಗೊಂಡಿತು.