ಉಡುಪಿ: ಚಲಿಸುತ್ತಿದ್ದ ರಿಕ್ಷಾ ಚಾಲಕನಿಗೆ ಹೃದಯಾಘಾತ- ಪ್ರಯಾಣಿಕರಿಬ್ಬರಿಗೆ ಗಾಯ
ಉಡುಪಿ, ಜ.4(ಉಡುಪಿ ಟೈಮ್ಸ್ ವರದಿ) ನಗರದ ರಿಕ್ಷಾ ಚಾಲಕ, ಕಾಡುಬೆಟ್ಟು ನಿವಾಸಿ ತಮ್ಮ ರಿಕ್ಷಾದಲ್ಲಿ ಇಬ್ಬರು ಮಹಿಳಾ ಪ್ರಯಾಣಿಕರನ್ನು ಅಜ್ಜರಕಾಡುವಿನಿಂದ ಬಸ್ ನಿಲ್ದಾಣದ ಕಡೆಗೆ ಕರೆದುಕೊಂಡು ಹೋಗುತ್ತಿದ್ದಾಗ ಹಠಾತ್ ಹೃದಯಾಘಾತದಿಂದ ಕುಸಿದು ಬಿದ್ದ ಘಟನೆ ಇಂದು ನಡೆದಿದೆ.
ರಿಕ್ಷಾ ಚಾಲಕ ಸುರೇಶ ಎಂಬವರು ಕುಸಿದುಬಿದ್ದು ಗಂಭೀರ ಸ್ಥಿತಿಯಲ್ಲಿ ಆಸ್ಪತ್ರೆಗೆ ದಾಖಲಾಗಿದ್ದಾರೆ. ಇವರು ಇಂದು ಬೆಳಿಗ್ಗೆ ಹೃದಯಾಘಾತಕ್ಕೆ ಒಳಗಾದಾಗ ಅವರು ಚಲಾಯಿಸುತ್ತಿದ್ದ ರಿಕ್ಷಾವು ವಿರುದ್ಧ ದಿಕ್ಕಿನಲ್ಲಿ ಚಲಿಸಿ ವಿದ್ಯುತ್ ಕಂಬಕ್ಕೆ ಗುದ್ದಿದೆ.
ಚಾಲಕ ಸೀಟಿನಲ್ಲಿ ಕುಸಿದು ಬಿದ್ದಿದ್ದ ಸುರೇಶ್ ರವರನ್ನು ಅದೇ ರಸ್ತೆಯಲ್ಲಿ ಬಂದ ರಿಕ್ಷಾ ಚಾಲಕ ಮತ್ತು ಪ್ರಯಾಣಿಕರು ತಮ್ಮ ರಿಕ್ಷಾದಲ್ಲಿ ಅಜ್ಜರಕಾಡು ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದು, ಅಲ್ಲಿಂದ ಮಣಿಪಾಲ ಆಸ್ಪತ್ರೆಗೆ ದಾಖಲಿಸಿದ್ದಾರೆ. ಚಾಲಕನ ಸ್ಥಿತಿ ಗಂಭೀರ ವಾಗಿದ್ದು ಇಬ್ಬರು ಮಹಿಳಾ ಪ್ರಯಾಣಿಕರು ಗಾಯಗೊಂಡಿದ್ದಾರೆ ಎನ್ನಲಾಗಿದೆ.