ರಾಮ ಮಂದಿರ ಸ್ಪೋಟಿಸುವುದಾಗಿ ಮುಸ್ಲಿಮರ ಹೆಸರಿನಲ್ಲಿ ಬೆದರಿಕೆ: ಆರೋಪಿಗಳಿಬ್ಬರ ಬಂಧನ
ಲಕ್ನೋ: ಅಯ್ಯೋಧ್ಯೆಯ ರಾಮ ಮಂದಿರದ ಮೇಲೆ ಬಾಂಬ್ ದಾಳಿ ನಡೆಸಿ ಸ್ಫೋಟಿಸುವುದಾಗಿ ಬೆದರಿಸಿ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದ ಇಬ್ಬರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ. ಉತ್ತರ ಪ್ರದೇಶದ ವಿಶೇಷ ಕಾರ್ಯ ಪಡೆಯು ಲಕ್ನೋದ ಗೋಮತಿ ನಗರದ ವಿಭೂತಿ ಖಂಡ್ ಪ್ರದೇಶದಿಂದ ತಹರ್ ಸಿಂಗ್ ಮತ್ತು ಓಂಪ್ರಕಾಶ್ ಮಿಶ್ರಾ ಎಂಬವರನ್ನು ಬಂಧಿಸಿದ್ದಾರೆ. ಉತ್ತರ ಪ್ರದೇಶ ಸಿಎಂ ಆದಿತ್ಯನಾಥ್ ಮತ್ತು ಎಸ್ಟಿಎಫ್ ಮುಖ್ಯಸ್ಥ ಅಮಿತಾಭ್ ಯಶ್ ಮೇಲೆಯೂ ಬಾಂಬ್ ದಾಳಿ ನಡೆಸುವ ಬೆದರಿಕೆಯನ್ನು ಆರೋಪಿಗಳು ಒಡ್ಡಿದ್ದಾರೆ.
ಇಬ್ಬರು ಆರೋಪಿಗಳೂ ಮುಸ್ಲಿಂ ಹೆಸರುಗಳುಳ್ಳ ಇಮೇಲ್ ಐಡಿಗಳಾದ alamansarikhan608@ gmail.com ಮತ್ತು zubairkhanisi199@ gmail. com ಅನ್ನು ಬಳಸಿ ಬೆದರಿಕೆಯ ಪೋಸ್ಟ್ಗಳನ್ನು ಕಳಿಸಿದ್ದಾರೆಂದು ಆರಂಭಿಕ ತನಿಖೆಯಿಂದ ತಿಳಿದು ಬಂದಿದೆ.
ಇಮೇಲ್ ಐಡಿಗಳ ತಾಂತ್ರಿಕ ವಿಶ್ಲೇಷಣೆ ಪ್ರಕಾರ ತಹರ್ ಸಿಂಗ್ ಈ ಖಾತೆಗಳನ್ನು ಸೃಷ್ಟಿಸಿದ್ದರೆ ಓಂಪ್ರಕಾಶ್ ಬೆದರಿಕೆ ಸಂದೇಶ ಕಳಿಸಿದ್ದ.
ಇಬ್ಬರು ಆರೋಪಿಗಳೂ ಗೊಂಡಾ ನಿವಾಸಿಗಳಾಗಿದ್ದು ಪ್ಯಾರಾಮೆಡಿಕಲ್ ಸಂಸ್ಥೆಯೊಂದರ ಉದ್ಯೋಗಿಗಳೆಂದು ತಿಳಿದು ಬಂದಿದೆ. ತನಿಖೆ ಮುಂದುವರಿದಿದೆ.